ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ: ಹೆಸರಾಂತ ಸಂಗೀತ ಕಲಾವಿದೆ- ವಿದುಷಿ ವೃಂದಾ ಆಚಾರ್ಯ ನಿಧನ

ಉಡುಪಿ: ಹೆಸರಾಂತ ಸಂಗೀತ ಕಲಾವಿದೆ- ವಿದುಷಿ ವೃಂದಾ ಆಚಾರ್ಯ ನಿಧನ



ಉಡುಪಿ: ಹೆಸರಾಂತ ಸಂಗೀತ ಕಲಾವಿದೆ, ಸಂಗೀತ ಶಾಸ್ತ್ರಜ್ಞೆ, ಸಂಗೀತ ಗುರು, ಉಪನ್ಯಾಸಕಿ, ಬಹುಮುಖಿ ಪ್ರತಿಭೆ ವಿದುಷಿ ವೃಂದಾ ಆಚಾರ್ಯ ನಿಧನರಾಗಿದ್ದಾರೆ.


ಅಷ್ಟೊಂದು ಪ್ರತಿಭಾನ್ವಿತರಾಗಿದ್ದ ವೃಂದಾ ಅವರು ಇನ್ನೂ 44ನೇ ವಯಸ್ಸಿನಲ್ಲಿ ನಿಧನರಾಗಿರುವುದು ಸಂಗೀತ ಮತ್ತು ಸಾಂಸ್ಕೃತಿಕ ಲೋಕಕ್ಕೆ ಅಪಾರ ನಷ್ಟವಾಗಿದೆ. ವೃಂದಾ ಅವರ ಪತಿ ವಿದ್ವಾನ್ ಅರ್ಜುನ್ ಕುಮಾರ್ ಖ್ಯಾತ ಮೃದಂಗ ವಿದ್ವಾಂಸರಾಗಿದ್ದಾರೆ.


ವೃಂದಾ ಆಚಾರ್ಯ ಅವರು ಬಾಲಪ್ರತಿಭೆಯಾಗಿ ಶಾಲಾ ದಿನಗಳಲ್ಲೇ ಗಾನಕೋಗಿಲೆ ಎಂದು ಎಲ್ಲರಿಂದ‍ ಮೆಚ್ಚುಗೆ ಗಳಿಸಿದ್ದವರು.  ವಿದುಷಿ ಶೈಲಾ ಸುಬ್ರಮಣ್ಯಂ ಅವರಿಂದ ಮೊದಲು ಸಂಗೀತಾಭ್ಯಾಸ ಪಡೆದ ಇವರು ಮುಂದೆ ವಿದುಷಿ ನೀಲಾ ರಾಮಗೋಪಾಲ್ ಅವರಲ್ಲಿ ಪ್ರಬುದ್ಧ ಕಲಾವಿದೆಯಾಗಿ ಬೆಳೆದರು. ಪತಿ ವಿದ್ವಾನ್ ಅರ್ಜುನ್ ಕುಮಾರ್ ಅವರ ಮಾರ್ಗದರ್ಶನವೂ ಅವರ ಬೆಳವಣಿಗೆಯಲ್ಲಿ ಮಹತ್ವದ ಕೊಡುಗೆಯಾಗಿತ್ತು.


ಶೈಕ್ಷಣಿಕವಾಗಿಯೂ ದೊಡ್ಡ ಸಾಧನೆ ಮಾಡಿದ ವೃಂದಾ ಅವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಕಾಂ. ನಲ್ಲಿ ಪ್ರಥಮ ರ್‍ಯಾಂಕ್ ಸಾಧನೆಯನ್ನು ಚಿನ್ನದ ಪದಕದೊಂದಿಗೆ ಗಳಿಸಿದ್ದರು. ಆರ್ಥಿಕ, ವಾಣಿಜ್ಯ ವಿಚಾರಗಳಲ್ಲಿ ಅಪಾರ ಸೇವೆ ನೀಡಿದ್ದ ಇವರು ಜೈನ್ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತದಲ್ಲಿ ಎಂ.ಎ ಪದವಿ ಗಳಿಸಿದ್ದ ವೃಂದಾ ಅವರು ಮುಂದೆ ಸಂಗೀತಲೋಕಕ್ಕೆ ತಮ್ಮನ್ನು ಪೂರ್ಣವಾಗಿ ಬೆಸೆದುಕೊಂಡಿದ್ದರು.


ವೃಂದಾ ಅವರು ಸುಶ್ರಾವ್ಯ, ಶಾಸ್ತ್ರೀಯಬದ್ಧ ಸಂಗೀತ ಕಚೇರಿಗಳಿಗೆ ಹೆಸರಾದಂತೆಯೇ, ಸಂಗೀತ ಪ್ರಾತ್ಯಕ್ಷಿಕೆಗಳಿಗೆ, ಉಪನ್ಯಾಸಗಳಿಗೆ, ಕಾರ್ಯಾಗಾರಗಳಿಗೆ ಪ್ರಸಿದ್ಧರಾಗಿದ್ದರು. ದೇಶ ವಿದೇಶಗಳಲ್ಲಿ ಅವರಿಂದ ಸಂಗೀತ ಕಲಿಯುತ್ತಿದ್ದ ಅಪಾರ ವಿದ್ಯಾರ್ಥಿವೃಂದವಿತ್ತು.  ತಮ್ಮ ಪತಿ ವಿದ್ವಾನ್ ಅರ್ಜುನ್ ಕುಮಾರ್ ಅವರೊಂದಿಗೆ 'ಅನುಭೂತಿ' ಎಂಬ ಸಂಗೀತ ಪ್ರಧಾನ ಸಂಸ್ಥೆ ನಡೆಸುತ್ತಿದ್ದರು.


ನಮ್ಮ ರಾಗ ಧನ ಸಂಸ್ಥೆಯಲ್ಲಿ ಸಂಗೀತ ಕಚೇರಿ, ಕನಕ ಅಧ್ಯಯನ ಪೀಠದ ವತಿಯಿಂದ 'ವಾದಿರಾಜ ಕನಕದಾಸ' ಕೀರ್ತನ ಶಿಬಿರವನ್ನು ನಡೆಸಿದ್ದರು. ನಮ್ಮ ಸರಿಗಮ ಭಾರತಿಯಲ್ಲಿಯೂ ಸಂಗೀತ ಕಚೇರಿ ನೀಡಿರುವುದು ಮರೆಯಲಾರದ ನೆನಪುಗಳು. ಇತ್ತೀಚೆಗೆ ಫೆಬ್ರವರಿಯಲ್ಲಿ ನಮ್ಮ ಮನೆಗೆ ಬಂದಿದ್ದ ವೃಂದಾ ಆಚಾರ್ಯ, ಉಡುಪಿ ಕೃಷ್ಣನ ದರ್ಶನ ಪಡೆದು ಬನ್ನಂಜೆ ಗೋವಿಂದಾಚಾರ್ಯರ ಮನೆಗೆ ತೆರಳಿ ಮರಳಿದ್ದು ಕಣ್ಣಿಗೆ ಕಟ್ಟಿದಂತಿದೆ.


ಇಷ್ಟು ಸಣ್ಣ ವಯಸ್ಸಿನಲ್ಲಿ ವೃಂದಾ ಅವರು ತಮ್ಮ ಸಮಸ್ತ ಅಭಿಮಾನಿ ಬಳಗವನ್ನು ಅಗಲಿರುವುದು ದುಃಖ ತಂದಿದೆ. ಈ ನಷ್ಟವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಪತಿ ವಿದ್ವಾನ್ ಅರ್ಜುನ್ ಕುಮಾರ್ ಮತ್ತು ಕುಟುಂಬಕ್ಕೆ ಬರಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

0 Comments

Post a Comment

Post a Comment (0)

Previous Post Next Post