ಉಜಿರೆ: ಸ್ಥಳೀಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ನಿವೃತ್ತ ಹಿಂದಿ ಉಪನ್ಯಾಸಕ ಹಾಗೂ ಉಜಿರೆ ಗ್ರಾಮದ ವಿದ್ಯಾನಗರ ನಿವಾಸಿ ಪ್ರೊ. ನಾ’ವುಜಿರೆ (ಪ್ರೊ. ಎನ್. ನಾಗರಾಜ ಪೂವಣಿ (87) ಅಲ್ಪಕಾಲದ ಅನಾರೋಗ್ಯದಿಂದ ಸೋಮವಾರ ಸ್ವಗೃಹದಲ್ಲಿ ನಿಧನರಾದರು. ಅವರಿಗೆ ಪತ್ನಿ ಮತ್ತು ಮಗ ಇದ್ದಾರೆ.
ಮೂಲತಃ ಅವರು ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಗ್ರಾಮದ ಹೊಸಬೆಟ್ಟು ನಿವಾಸಿ. 1938ರ ಫೆಬ್ರವರಿ 12 ರಂದು ಅವರು ನಾರಾವಿಯಲ್ಲಿ ಜನಿಸಿದರು.
ಧರ್ಮಸ್ಥಳದ ಅಂದಿನ ಧರ್ಮಾಧಿಕಾರಿಗಳಾಗಿದ್ದ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಕಾಲದಲ್ಲಿ ಉಜಿರೆಯಲ್ಲಿ ಸಿದ್ಧವನ ಗುರುಕುಲದ ವಿದ್ಯಾರ್ಥಿಯಾಗಿದ್ದ ಅವರು ಎಸ್.ಎಸ್.ಎಲ್.ಸಿ. ಉತ್ತೀರ್ಣರಾದ ಬಳಿಕ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.
ಮುಂದೆ ಕನ್ನಡ ಹಾಗೂ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದು ಉಜಿರೆಯಲ್ಲಿ ಪ್ರೌಢಶಾಲೆಯಲ್ಲಿ ಹಿಂದಿ ಪಂಡಿತರಾಗಿ ಬಳಿಕ ಎಸ್.ಡಿ.ಎಂ. ಕಾಲೇಜಿನಲ್ಲಿ ಹಿಂದಿ ಉಪನ್ಯಾಸಕರಾಗಿ, ವಿಭಾಗ ಮುಖ್ಯಸ್ಥರಾಗಿ ನಿವೃತ್ತರಾದ ಬಳಿಕ ಮಂಜುವಾಣಿ ಮಾಸಪತ್ರಿಕೆಯ ಸಹಸಂಪಾದಕರಾಗಿ ಸೇವೆ ಸಲ್ಲಿದ್ದಾರೆ.
40 ವರ್ಷಗಳ ಕಾಲ ಉದಯವಾಣಿ ದೈನಿಕ ಪತ್ರಿಕೆಗೆ ಬೆಳ್ತಂಗಡಿ ತಾಲ್ಲೂಕು ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಬೆಳ್ತಂಗಡಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾಗಿಯೂ ಅವರು ಸೇವೆ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತ, ರತ್ನಾಕರವರ್ಣಿ ಪುರಸ್ಕಾರ, ಜಿನವಾಣಿ ಪುರಸ್ಕಾರ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ “ತುಳು ಮಹನೀಯರು” ಪುರಸ್ಕಾರ, ಅಖಿಲ ಭಾರತ ಗೋಮಟೇಶ್ವರ ವಿದ್ಯಾಪೀಠ ಪುರಸ್ಕಾರ, ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅಖಿಲ ಭಾರತ ಜೈನ್‌ಮಿಲನ್ ಸನ್ಮಾನ, ಕಲ್ಕೂರ ಪ್ರತಿಷ್ಠಾನದ ಸನ್ಮಾನ ಇತ್ಯಾದಿ ಪುರಸ್ಕಾರಗಳು ಅವರಿಗೆ ದೊರಕಿವೆ.
ಸನ್ಮಾನಪತ್ರ ಬರೆಯುವುದರಲ್ಲಿ ಪರಿಣತರು. ಕವಿಯಾಗಿ, ಕಥೆಗಾರರಾಗಿ, ಅನುವಾದಕರಾಗಿ, ಸಾಹಿತಿಯಾಗಿ, ಉತ್ತಮ ಕಾರ್ಯಕ್ರಮ ನಿರ್ವಾಹಕರಾಗಿ ಅವರು ಚಿರಪರಿಚಿತರು. ಮಂಗಳೂರು ವಿ.ವಿ. ಹಿಂದಿ ಅಧ್ಯಯನ ಮಂಡಳಿ ಅಧ್ಯಕ್ಷರಾಗಿ, ಕರ್ನಾಟಕ ಪ್ರೌಢಶಾಲಾ ಹಿಂದಿ ಪಠ್ಯಪುಸ್ತಕ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಬರೆದ ೬೦ಕ್ಕೂ ಮಿಕ್ಕಿ ಕಥೆಗಳು, ೮೦ ಕವಿತೆಗಳು ಹಾಗೂ ಪ್ರಬಂಧಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
1999 ರಲ್ಲಿ ಅವರು ಬೆಳ್ತಂಗಡಿ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು.
38 ವರ್ಷಗಳ ಕಾಲ ಆದರ್ಶ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅವರು ಶಿಕ್ಷಣ ತಜ್ಞರೂ, ಆಪ್ತ ಸಲಹೆಗಾರರೂ ಆಗಿ ತಮ್ಮ ಸಹೋದ್ಯೋಗಿಗಳೆಲ್ಲ ಖಾಸಗಿಯಾಗಿ ಪರೀಕ್ಷೆ ಬರೆದು ಪದವಿ, ಸ್ನಾತಕೋತ್ತರ ಪದವಿ ಪಡೆಯುವಂತೆ ನಿರಂತರ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದರು. ಸರಳ ಜೀವನ, ಉನ್ನತ ಚಿಂತನೆ ಅವರ ಜೀವನ ತತ್ವವಾಗಿದ್ದು, ಹಾಸ್ಯಪ್ರಜ್ಞೆಯನ್ನೂ ಹೊಂದಿದ್ದ ಅವರು ಕನ್ನಡ, ತುಳು, ಹಿಂದಿ, ಸಂಸ್ಕೃತದಲ್ಲಿ ಭಾಷಾಪ್ರಭುತ್ವ ಹೊಂದಿದ್ದು, ಎಲ್ಲರೊಂದಿಗೂ ಮುಕ್ತವಾಗಿ ಬೆರೆಯುತ್ತಿದ್ದ ಸ್ನೇಹ ಜೀವಿ, ಉತ್ತಮ ವಾಗ್ಮಿಯಾಗ್ಮಿಯೂ ಅವರು ಪ್ರಸಿದ್ಧರಾಗಿದ್ದರು.
ಹೆಗ್ಗಡೆ ಸಂತಾಪ:
ನಾ'ವುಜಿರೆ ಅವರ ನಿಧನಕ್ಕೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಾಧ್ಯಮ ಪ್ರಕಟಣೆಯಲ್ಲಿ ಅವರು,
ನಾ’ವುಜಿರೆ ಎಂದೇ ಚಿರಪರಿಚಿತರಾಗಿದ್ದ ನಾಗರಾಜ ಪೂವಣಿ ಅವರು ನಮ್ಮದೇ ಸಂಸ್ಥೆಯಾದ ಉಜಿರೆಯ ಶ್ರೀ ಸಿದ್ಧವನ ಗುರುಕುಲ, ಎಸ್.ಡಿ.ಎಂ. ಸೆಕೆಂಡರಿ ಶಾಲೆ (ಅಂದಿನ ಡಿ.ಕೆ.ವಿ. ಪ್ರೌಢಶಾಲೆ), ಎಸ್.ಡಿ.ಎಂ. ಕಾಲೇಜು ಮೊದಲಾದ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿ ನಮ್ಮ ಪ್ರೀತಿ-ವಿಶ್ವಾಸ, ಅಭಿಮಾನಕ್ಕೆ ಪಾತ್ರರಾಗಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.
ಸರಳ ವ್ಯಕ್ತಿತ್ವವನ್ನು ಹೊಂದಿದ್ದ ಅವರು ನಮ್ಮ ಸಂಸ್ಥೆಗಳಲ್ಲಿ ದೊರಕಿದ ಎಲ್ಲಾ ಅವಕಾಶಗಳ ಸದುಪಯೋಗ ಪಡೆದು ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಂಡರು. ನಾವು “ಮಂಜುವಾಣಿ” ಮಾಸಪತ್ರಿಕೆಯ ಪ್ರಕಾಶನ ಆರಂಭಿಸಿದಾಗ, ಉತ್ತಮ ಸೇವೆ ನೀಡಿದ್ದಾರೆ. ಅವರ ಸರಳ ವ್ಯಕ್ತಿತ್ವ, ಸೌಜನ್ಯಪೂರ್ಣ ಸೇವೆ, ನಮಗೆ ಸಂತೋಷ ಮತ್ತು ಅಭಿಮಾನವನ್ನು ಉಂಟುಮಾಡಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ಅವರ ಅಗಲುವಿಕೆಯಿಂದ ಕುಟುಂಬವರ್ಗದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆಯವರು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق