ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಹೆಸರಾಂತ ಕಾದಂಬರಿಕಾರ ಕೆ.ಟಿ ಗಟ್ಟಿ ನಿಧನ; ದ.ಕ ಜಿಲ್ಲಾ ಕಸಾಪ ಸಂತಾಪ

ಹೆಸರಾಂತ ಕಾದಂಬರಿಕಾರ ಕೆ.ಟಿ ಗಟ್ಟಿ ನಿಧನ; ದ.ಕ ಜಿಲ್ಲಾ ಕಸಾಪ ಸಂತಾಪ




ಮಂಗಳೂರು: ಹೆಸರಾಂತ ಕಾದಂಬರಿಕಾರ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಜನಪ್ರಿಯ ಕತೆಗಾರ ಕೂಡ್ಲು ತಿಮ್ಮಪ್ಪ ಗಟ್ಟಿ (ಕೆ.ಟಿ. ಗಟ್ಟಿ) ಅವರು ಇಂದು ನಿಧನರಾದರು. ಅವರಿಗೆ 85 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಕೆಲವು ವರ್ಷಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು.


ಮೂಲತಃ ಕಾಸರಗೋಡು ಜಿಲ್ಲೆಯ ಕೂಡ್ಲುವಿನವರಾದ ತಿಮ್ಮಪ್ಪ ಗಟ್ಟಿಯವರು ಕನ್ನಡ ಸಾಹಿತ್ಯ ಲೋಕದಲ್ಲಿ ಕೆ.ಟಿ ಗಟ್ಟಿ ಎಂದೇ ಖ್ಯಾತರಾಗಿದ್ದಾರೆ. ಪ್ರಾಧ್ಯಾಪಕರಾಗಿ ನಿವೃತ್ತರಾಗಿದ್ದ ಅವರು ಸಣ್ಣ ವಯಸ್ಸಿನಲ್ಲೇ ಪತ್ರಿಕೆಗಳಿಗೆ ಸರಣಿ ಕಾದಂಬರಿಗಳನ್ನು, ಬಾನುಲಿ ನಾಟಕಗಳನ್ನು ಬರೆದು ಹೆಸರು ಗಳಿಸಿದ್ದರು.


ವೃತ್ತಿ ಜೀವನದ ಆರಂಭದಲ್ಲಿ ಉಡುಪಿಯ ಟಿ.ಎಂಎ ಪೈ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಬಳಿಕ ಭಾರತ ಸರಕಾರದಿಂದ ನಿಯೋಜಿತರಾಗಿ ಇಥಿಯೋಪಿಯಾಗೆ ತೆರಳಿ ಅಲ್ಲಿ ಅಧ್ಯಾಪನ ಕಾರ್ಯ ನಡೆಸಿದರು. ಇಂಗ್ಲೆಂಡಿನ ಟ್ರಿನಿಟಿ ಮತ್ತು ಆಕ್ಸ್‌ಫರ್ಡ್ ಕಾಲೇಜುಗಳಿಂದ ಇಂಗ್ಲಿಷ್ ಕಲಿಕೆಯಲ್ಲಿ ಡಿಪ್ಲೋಮ ಪದವಿ ಪಡೆದಿದ್ದರು.


ಇಥಿಯೋಪಿಯಾದಿಂದ ವಾಪಸಾದ ಬಳಿಕ ಅವರು ಉಜಿರೆಯಲ್ಲಿ ವಾಸವಾಗಿದ್ದುಕೊಂಡು ಕೃಷಿ ಮತ್ತು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಶಬ್ದಗಳು, ಸೌಮ್ಯ, ರಾಮಯಜ್ಞ, ಮನೆ, ನಿರಂತರ, ಅಬ್ರಾಹ್ಮಣ, ಅಮುಕ್ತ, ಅವಿಭಕ್ತರು, ಕರ್ಮಣ್ಯೇವಾಧಿಕಾರಸ್ತೇ, ಕೂಪ, ಪೂಜಾರಿ, ಬಿಸಿಲುಗುದುರೆ, ಮೃತ್ಯೋರ್ಮಾ ಅಮೃತಂಗಮಯ, ಯುಗಾಂತರ, ಶಿಲಾತಪಸ್ವಿ, ಸ್ವರ್ಣಮೃಗ, ಅರಗಿನ ಮನೆ- ಅವರು ಬರೆದ ಕಾದಂಬರಿಗಳಾಗಿದ್ದವು.


ಕೆ.ಟಿ.ಗಟ್ಟಿ ನಿಧನಕ್ಕೆ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ

ಕಾದಂಬರಿಕಾರ ಕೆ.ಟಿ ಗಟ್ಟಿ ಅವರ ನಿಧನಕ್ಕೆ ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ಕೆ.ಟಿ ಗಟ್ಟಿಯವರನ್ನು ಸ್ಮರಿಸಿ ಸಂತಾಪ ಸೂಚಿಸಿದ್ದಾರೆ.



ಕೆ.ಟಿ ಗಟ್ಟಿ ಅವರನ್ನು ಇತ್ತೀಚೆಗೆ ದ.ಕ ಜಿಲ್ಲಾ ಕಸಾಪ ವತಿಯಿಂದ ಸನ್ಮಾನಿಸಿ ಗೌರವಿಸಿದ ಸಂದರ್ಭದ ಚಿತ್ರ.


ಕರ್ನಾಟಕ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಖ್ಯಾತ ಕಾದಂಬರಿಕಾರ, ಭಾಷಾ ತಜ್ಞ, ನಿವೃತ್ತ ಪ್ರಾಧ್ಯಾಪಕ ಕೆ.ಟಿ.ಗಟ್ಟಿ (ಕೂಡ್ಲು ತಿಮ್ಮಪ್ಪ ಗಟ್ಟಿ) ನಿಧನ ಸಾಹಿತ್ಯ, ಸಂಶೋಧನ ಲೋಕಕ್ಕೆ ತುಂಬಲಾರದ ನಷ್ಟ. 1957ರಿಂದ ಸಾಹಿತ್ಯ ಕೃಷಿ ಆರಂಭಿಸಿದರು. ಇವರ ಸುಮಾರು 14 ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಇದೊಂದು ಸಾಧನೆಯೇ ಸರಿ.  ಸವಣೂರಿನಲ್ಲಿ ನಡೆದ 10ನೇ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸಾಹಿತ್ಯಕ್ಕೆ ನೀಡಿದ ಕೊಡುಗೆ ಸದಾ ಸ್ಮರಣೀಯ. ಅವರ ನಿಧನ ಅತೀವ ದುಃಖ ತಂದಿದೆ. ಮೃತರ ಆತ್ಮಕ್ಕೆ ದ. ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಿರಶಾಂತಿ ಕೋರುತ್ತದೆ. ಅವರ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಎಂ.ಪಿ ಶ್ರೀನಾಥರು ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter  

0 تعليقات

إرسال تعليق

Post a Comment (0)

أحدث أقدم