ಮಂಗಳೂರು: ತೆಂಕುತಿಟ್ಟಿನ ಪರಂಪರೆಯ ಪ್ರಾತಿನಿಧಿಕ ಯಕ್ಷಗಾನ ಕಲಾವಿದ ಪೆರುವಾಯಿ ನಾರಾಯಣ ಶೆಟ್ಟಿ (82) ಇಂದು (ಜ.24) ಬಂಟ್ವಾಳ ತಾಲೂಕಿನ ಪೆರುವಾಯಿಯಲ್ಲಿ ನಿಧನರಾದರು.
ಅಳಿಕೆ ರಾಮಯ್ಯ ರೈಯವರಲ್ಲಿ ಯಕ್ಷಗಾನ ಅಭ್ಯಾಸ ಮಾಡಿ 12ರ ಹರೆಯದಲ್ಲಿ ಯಕ್ಷಗಾನ ರಂಗ ಪ್ರವೇಶಿಸಿದ ಇವರು ಇರಾ, ಧರ್ಮಸ್ಥಳ, ಕಟೀಲು, ಬಪ್ಪನಾಡು, ಕದ್ರಿ, ಪುತ್ತೂರು ಮೇಳಗಳಲ್ಲಿ ಸುಮಾರು ಆರು ದಶಕಗಳ ಕಲಾಸೇವೆಗೈದಿರುತ್ತಾರೆ ದಕ್ಷ, ಕೌರವ, ಅತಿಕಾಯ, ಕರ್ಣ, ಭೀಷ್ಮ, ರಕ್ತಬೀಜ, ಹಿರಣ್ಯಾಕ್ಷ, ಹಿರಣ್ಯಕಶಿಪು, ಕಂಸ, ಋತುಪರ್ಣ, ಹನುಮಂತ ಮೊದಲಾದ ಪೌರಾಣಿಕ ಪಾತ್ರಗಳಲ್ಲಿ ಸಿದ್ಧಿ-ಪ್ರಸಿದ್ಧಿ ಪಡೆದಿದ್ದರು. ತುಳು ಪ್ರಸಂಗದಲ್ಲಿಯೂ ತಮ್ಮದೇ ಆದ ಛಾಪನ್ನು ಮೂಡಿಸಿದವರು.
ತಾಳ ಮದ್ದಲೆ, ಅರ್ಥಧಾರಿಯಾಗಿಯೂ ಭಾಗವಹಿಸುತ್ತಿದ್ದರು. ಇವರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ, ಉಡುಪಿ ಯಕ್ಷಗಾನ ಕಲಾರಂಗ, ಪಟ್ಲ ಫೌಂಡೇಶನ್, ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಅಳಿಕೆ- ಬೋಳಾರ ಪ್ರತಿಷ್ಠಾನಗಳು, ಪುಳಿಂಚ ಸೇವಾ ಪ್ರತಿಷ್ಠಾನ ಇತ್ಯಾದಿ ಸಂಘ-ಸಂಸ್ಥೆಗಳಿಂದ ಅವರಿಗೆ ಪ್ರಶಸ್ತಿ ಲಭಿಸಿದೆ.
ಯಕ್ಷಾಂಗಣ ಸಂತಾಪ:
ಪೆರುವಾಯಿ ನಾರಾಯಣ ಶೆಟ್ಟರ ನಿಧನಕ್ಕೆ ಯಕ್ಷಾಂಗಣದ ಅಧ್ಯಕ್ಷ ಪ್ರೊ ಭಾಸ್ಕರ ರೈ ಕುಕ್ಕುವಳ್ಳಿ ಸಂತಾಫ ವ್ಯಕ್ತಪಡಿಸಿದ್ದಾರೆ.
ಗಂಡುಗತ್ತಿನ ವೇಷಧಾರಿ, ಠೇಂಕಾರದ ಅರ್ಥಧಾರಿ- ದಕ್ಷ, ರಕ್ತಬೀಜ, ಹಿರಣ್ಯಾಕ್ಷ, ಹಿರಣ್ಯಕಶ್ಯಪ, ಅರುಣಾಸುರ, ಕೌರವ, ಕರ್ಣ, ಭೀಷ್ಮ, ವೀರಮಣಿ, ಕೊಂಡೆ, ಕೊಡ್ಸರಾಳ್ವ ಇತ್ಯಾದಿ ಪಾತ್ರಗಳಿಗೆ ಜೀವ ತುಂಬಿದ ತೆಂಕುತಿಟ್ಟಿನ ಪ್ರಾತಿನಿಧಿಕ ನಟ ಪೆರುವಾಯಿ ನಾರಾಯಣ ಶೆಟ್ಟಿ ಅವರ ಕಣ್ಮರೆಯಿಂದ ನಮ್ಮ ಪರಂಪರೆಯ ಮತ್ತೊಂದು ಕೊಂಡಿ ಕಳಚಿ ಹೋಯಿತು. ಇಂತಹ ಶ್ರೇಷ್ಠ ಕಲಾವಿದರ ನಷ್ಟ ನಮ್ಮ ತಲೆಮಾರು ಭರಿಸಲಾಗದ್ದು!
ಕಳೆದ ಅಕ್ಟೋಬರ್ ತಿಂಗಳಲ್ಲಿ ಅಚಾನಕ್ ಫೋನ್ ಮಾಡಿ 'ಎಂಚ ಈ ಸರ್ತಿಯಾಂಡಲ ನಮ್ಮ ಚೀಟ್ ಮಿತ್ತ್ ಬೂರ್ವಾ ರೈಕ್ಲೇ' ಅಂತ ಮುಗ್ಧವಾಗಿ ಕೇಳಿದ್ದರು. ವಾಸ್ತವಿಕತೆಯ ಅರಿವಿದ್ದರೂ ನಾನವರಿಗೆ ಕಣ್ಣೊರೆಸುವ ಮಾತು ಹೇಳಿದ್ದೆ 'ಆಪುಂಡಣ್ಣ..ತೂಕ' ಅಂತ! ಆದರೆ ಅಂಥಾ ಮಹಾನ್ ಕಲಾವಿದನಿಗೆ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ ರಾಜ್ಯೋತ್ಸವ ಪ್ರಶಸ್ತಿ ಹೇಗೆ ಬಂದೀತು ಹೇಳಿ!!? ಆ ಚೀಟು ವರ್ಷ ವರ್ಷವೂ ಮೇಲೆದ್ದು ಬಿದ್ದು ಮತ್ತೆ ಅಡಿಯಲ್ಲೇ ಉಳಿಯಿತು! ಕನಿಷ್ಠ ಅವರ ಕೊಡುಗೆಯಾದರೂ ಸದಾ ನಮ್ಮ ನೆನಪಿನಲ್ಲಿರಲಿ. ಅಗಲಿದ ಧೀಮಂತ ಕಲಾವಿದನಿಗೆ ಭಾವಪೂರ್ಣ ನಮನ ಎಂದು ಪ್ರೊ ಕುಕ್ಕುವಳ್ಳಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق