ಪುತ್ತೂರು: ಯಕ್ಷಗಾನ ರಂಗದ ಹಾಸ್ಯಬ್ರಹ್ಮ ಎಂದೇ ಖ್ಯಾತವಾಗಿದ್ದ ಬಪ್ಪಳಿಗೆ ತೆಂಕಿಲ ನೂಜಿ ನಿವಾಸಿ ಪೆರುವೋಡಿ ನಾರಾಯಣ ಭಟ್ (96) ಇಲ್ಲಿನ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು. ಆರನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದ ಅವರು ಎಂಟನೇ ವರ್ಷದಲ್ಲೇ ತಾಳಮದ್ದಳೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದ್ದರು. 14ನೇ ವರ್ಷದಲ್ಲೇ ಧರ್ಮಸ್ಥಳ ಮೇಳದಲ್ಲಿ ಮೊದಲ ತಿರುಗಾಟವನ್ನು ನಡೆಸಿದ್ದರು.
ಇತ್ತೀಚೆಗೆ ಬಿಡುಗಡೆಗೊಂಡ ಬಹಳ ಜನಪ್ರಿಯ ಸಿನಿಮಾ 'ದಾಮಾಯಣ'ದಲ್ಲೂ ಒಂದು ಪಾತ್ರದಲ್ಲಿ ಭಟ್ಟರು ನಟಿಸಿ ಸೈ ಎನಿಸಿಕೊಂಡಿದ್ದರು.
ಅವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸೇರಿದಂತೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಉಜಿರೆ: ಖ್ಯಾತ ಹಾಸ್ಯ ಕಲಾವಿದ ಪೆರುವಡಿ ನಾರಾಯಣ ಭಟ್ ನಿಧನರಾದ ಸುದ್ದಿ ತಿಳಿದು ವಿಷಾದವಾಯಿತು. ಯಕ್ಷಗಾನದಲ್ಲಿ ಹಾಸ್ಯದ ಮೂಲಕ ಅವರು ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು. ನಮ್ಮ ಧರ್ಮಸ್ಥಳ ಯಕ್ಷಗಾನ ಮಂಡಳಿಯಲ್ಲಿ ಕೂಡಾ ಅವರು ಕಲಾವಿದರಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ. ಇದೇ ಜುಲೈಯಲ್ಲಿ ಅವರು ಧರ್ಮಸ್ಥಳದಲ್ಲಿ ವಾಚನ-ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಅವರ ನಿಧನದಿಂದ ಪ್ರತಿಭಾವಂತ ಹಾಸ್ಯ ಕಲಾವಿದರನ್ನು ಕಳೆದುಕೊಂಡಂತಾಗಿದೆ. ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ, ಅವರ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಕುಟುಂಬವರ್ಗದವರನ್ನು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ ಎಂದು ಹೆಗ್ಗಡೆಯವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಕುಡ್ಲ ತುಳುಕೂಟ ಸಂತಾಪ:
ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪುರಸ್ಕೃತ ಹಾಸ್ಯಗಾರ ನಾರಾಯಣ ಭಟ್ಟರಿಗೆ ಕುಡ್ಲ ತುಳುಕೂಟದ ಅಧ್ಯಕ್ಷ ಮರೋಳಿ ಬಿ. ದಾಮೋದರ ನಿಸರ್ಗ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಶ್ರೀಮತಿ ಹೇಮಾ ನಿಸರ್ಗ, ವರ್ಕಾಡಿ ರವಿ ಅಲೆವೂರಾಯ, ತ್ರಿದೇವ್ ನಿಸರ್ಗರೂ ಸಂತಾಪ ವ್ಯಕ್ತ ಪಡಿಸಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق