ಇಂದು ಮಾರ್ಚ್ 8 ಮಹಿಳಾ ದಿನ ಎಲ್ಲಾ ಮಹಿಳೆಯರಿಗೆ ವಿಶೇಷ ಹಾಗಾಗಿ ಈ ವಿಶೇಷ ದಿನದಲ್ಲಿ ಮಹತ್ತರ ಕಾರ್ಯ ಮಾಡಿದ ಸಾಧಕಿ ರಜನಿ ಅವರನ್ನು ನೆನಪು ಮಾಡಲೇ ಬೇಕಾಗುತ್ತದೆ.
ಪ್ರಾಣಿ ಪಕ್ಷಿಗಳಲ್ಲಿ ಸಹಜವಾಗಿ ಎಲ್ಲರಿಗೂ ಪ್ರೀತಿ ಇರುವುದು ನಿಜ ನೋಡಲು ಚಂದ ಕ್ಯಾಮರಾದಲ್ಲಿ ಸೆರೆ ಹಿಡಿಯಲು ಬಲು ಅಂದ.
ಆದರೆ ಇಲ್ಲೊಬ್ಬರು ಮಹಿಳೆಯ ಮನಸ್ಸು ವಿಭಿನ್ನವಾದದ್ದು, ಬಾವಿಗೆ ಬಿದ್ದದ್ದನ್ನು ಹಗ್ಗದ ಸಹಾಯದಿಂದ ಇಳಿದು ರಕ್ಷಣೆ ಮಾಡಿದ್ದು, ಇದೆ. ತನ್ನ ಪ್ರಾಣ ಲೆಕ್ಕಿಸದೆ ಮೂಕ ಪ್ರಾಣಿಯ ವೇದನೆಗೆ ತನ್ನನ್ನು ತಾನು ತೊಡಗಿಸಿಕೊಂಡ ಅಪರೂಪದ ಮಹಿಳೆ ಎಂದರೂ ತಪ್ಪಾಗಲಾರದು.
ಅವರೇ ಮಂಗಳೂರಿನ ಮಣ್ಣಗುಡ್ಡೆಯಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ತನ್ನ ಪತಿ ಹಾಗೂ ಮೂವರು ಮಕ್ಕಳೊಂದಿಗೆ ಜೀವನ ಸಾಗಿಸುತ್ತಿರುವ ರಜನಿ ಶೆಟ್ಟಿ, ಇವರು ತಮ್ಮ ಮನೆಯನ್ನು ಗಾಯಗೊಂಡ, ರೋಗಗ್ರಸ್ತ ನಾಯಿ, ಬೆಕ್ಕು, ಹಕ್ಕಿಗಳಿಗೆ ಮೀಸಲಿಟ್ಟಿದ್ದಾರೆ.
ಅಮ್ಮ ಹೇಗೆ ತನ್ನ ಮಕ್ಕಳನ್ನು ಪ್ರೀತಿಯಿಂದ ಮುದ್ದಾಡಿಸುತ್ತಾಳೆ ಅದೇ ರೀತಿ ಇವರು ಪ್ರಾಣಿ ಪಕ್ಷಿಗಳನ್ನು ಒಂದು ಸ್ವಲ್ಪ ನೋವಾಗದಂತೆ ಮುದ್ದು ಮಾಡುತ್ತಾರೆ.
ಕೆಲವರು ತಮ್ಮ ಮನೆಯ ನಾಯಿ ಅನಾರೋಗ್ಯಕ್ಕೆ ತುತ್ತಾದಾಗ ಅದನ್ನು ವೈದ್ಯರ ಬಳಿ ಕರೆದೊಯ್ಯಲು ಹಣದ ಸಮಸ್ಯೆ ಇನ್ನಾವುದೋ ಸಮಸ್ಯೆಯಿಂದ ಔಷಧಿ ಕೊಡಿಸಲಾಗದೆ ಕೊನೆಗೆ ನಾಯಿ ಸತ್ತು ಹೋದದ್ದು ಇದೆ. ಆದರೆ ಬೀದಿಯಲ್ಲಿರುವ ನಾಯಿಯನ್ನು ತಂದು ಸಾಕುವ ಇವರ ಸಾಧನೆ ಅಪಾರವಾದದ್ದು.
ಬೀದಿ ಬದಿ ಬರಡಾಗುವ ಬದುಕು, ವಾಹನಗಳ ಅಡಿಗೆ ಸಿಲುಕಿಯೋ, ವಿಷ ತಿಂದು ಸಾಯುವ ಪರಿಸ್ಥಿತಿಯ ಬೀದಿ ನಾಯಿಗಳಿಗೂ ಬದುಕುವ ಹಕ್ಕಿದೆ ಎನ್ನುವುದನ್ನು ಅರಿತು, ತಮ್ಮ ಪಾಡಿಗೆ ಪ್ರಾಣಿಗಳ ಸೇವೆ ಮಾಡಿಕೊಂಡು ಬಂದವರು ರಜನಿ ಶೆಟ್ಟಿ.
ನಾಯಿ, ಬೆಕ್ಕು ಬಾವಿಗೆ ಬಿದ್ದಾಗ ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಬರುವ ಮೊದಲೇ ದೂರವಾಣಿ ಕರೆ ಸ್ವೀಕರಿಸಿ, ಸರ ಸರನೆ ಬಾವಿಗಿಳಿದು ಮೇಲೆತ್ತುವುದರಲ್ಲಿ ರಜನಿ ಶೆಟ್ಟಿಯವರದ್ದು ಎತ್ತಿದ ಕೈ.
ಅನೇಕ ನಾಯಿ, ಬೆಕ್ಕುಗಳನ್ನು ಅವರು ರಕ್ಷಣೆ ಮಾಡಿದ್ದಾರೆ. ಮರ ಕಡಿಯುವಾಗ ಗಾಯಗೊಂಡ ಹಕ್ಕಿಗಳನ್ನೂ ತಮ್ಮ ಮನೆಯ ಗೂಡಿನಲ್ಲಿರಿಸಿ ಆರೈಕೆ ಮಾಡುತ್ತಿದ್ದಾರೆ. ಗಿಳಿ, ಹದ್ದುಗಳಿಗೂ ಇವರ ಮನೆಯಲ್ಲಿ ಆಸರೆ ಸಿಕ್ಕಿದೆ.
ರಜನಿ ಅವರ ಮನೆಯಲ್ಲಿ ಪ್ರತಿದಿನ ೬೦ ಕೆಜಿ ಅಕ್ಕಿಯಿಂದ ಚಿಕನ್ ಮಿಶ್ರಿತ ಅನ್ನ ಬೇಯುತ್ತಿರುತ್ತದೆ. ಇದನ್ನು ಅವರು ೮೦೦ಕ್ಕೂ ಹೆಚ್ಚು ನಾಯಿಗಳಿಗೆ ಬಡಿಸುತ್ತಾರೆ.
ಮಗಳು ಅಥವಾ ಪತಿ ದಾಮೋದರ್ ಶೆಟ್ಟಿಯವರ ಜೊತೆ ಸ್ಕೂಟರ್‌ನಲ್ಲಿ ತೆರಳಿ ನಾಯಿಗಳ ಮೈದಡವಿ, ಊಟ ಹಾಕಿ ಬರುತ್ತಾರೆ. ಗೂಡ್ಸ್ ಶೆಡ್‌ನಂತಹ ಮಂಗಳೂರಿನ ಮೂಲೆಗೂ ತೆರಳಿ, ಆಹಾರ ಹಾಕುತ್ತಾರೆ.
ರಜನಿಯವರನ್ನು ಕಂಡ ಕೂಡಲೇ ನಾಯಿಗಳು ಬಾಲವನ್ನಾಡಿಸುತ್ತಾ ಓಡೋಡಿ ಬಂದು ಸುತ್ತುವರಿದು ಪ್ರೀತಿ ತೋರುತ್ತವೆ. ೧೬ ವರ್ಷಗಳಿಂದ ನಾಯಿಗಳಿಗೆ ಊಟ ಹಾಕುವ ಅವರು, ೨೫೦೦ರಷ್ಟು ಪ್ರಾಣಿಗಳನ್ನು ರಕ್ಷಿಸಿದ್ದಾರೆ.
ಇವರು ಸ್ವಂತ ದುಡಿಮೆಯಿಂದ ಬಂದ ಹಣದಿಂದ ನಾಯಿಗಳಿಗೆ ಊಟ ಬೇಯಿಸಿ ಹಾಕುತ್ತಿದ್ದು, ಸಾರ್ವಜನಿಕರು ಮನೆಯವರು ಸಹಕಾರ ನೀಡುತ್ತಿದ್ದಾರೆ.
ಹಾಗೆಯೇ ಗಾಯಗೊಂಡ ಪ್ರಾಣಿಗಳಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಔಷಧಿ ನೀಡುತ್ತಿದ್ದು, ಈ ಸಾಧನೆಗೆ ಈಗಾಗಲೇ ಹಲವಾರು ಪ್ರಶಸ್ತಿಗಳು ಹರಸಿ ಬಂದಿವೆ.
ಹೀಗೆ ಅವರ ಸಾಧನೆ ಎಲ್ಲೆಡೆ ಪಸರಿಸಲಿ. ಬರಡಾದ ಪ್ರಾಣಿ ಪಕ್ಷಿಗಳ ರಕ್ಷಣೆ ಎಲ್ಲೆಡೆಯೂ ಮುಂದುವರಿಯಲಿ.
ಬರಹ: ಹರ್ಷಿತಾ ಹರೀಶ್ ಕುಲಾಲ್ ಐವರ್ನಾಡು ಸುಳ್ಯ
Post a Comment