ಬೆಂಗಳೂರು: ಹೆಸರಾಂತ ಚಿತ್ರ ಕಲಾವಿದ ಬಿ.ಕೆ.ಎಸ್ ವರ್ಮಾ ಅವರು ಇಂದು ಬೆಳಗ್ಗೆ (ಫೆ.6, ಸೋಮವಾರ) 9:15ರ ಸುಮಾರಿಗೆ ನಿಧನರಾದರು ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ 73 ವರ್ಷ ವಯಸ್ಸಾಗಿತ್ತು. ಎರಡು ದಿನಗಳಿಂದ ಹೃದಯದ ಸಮಸ್ಯೆಯಿಂದ ಅವರು ಬಳಲುತ್ತಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರ ಅಂತ್ಯ ಸಂಸ್ಕಾರ ಇಂದು ಸಂಜೆಯೊಳಗೆ ನಡೆಯಲಿದೆ. ಅಪರಾಹ್ನ 2:30ರ ವೇಳೆಗೆ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರವೀಂದ್ರ ಕಲಾಕ್ಷೇತ್ರದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಅಭಿನವ ರವಿವರ್ಮ ಎಂದೇ ಜನಮಾನಸದಲ್ಲಿ ನೆಲೆ ನಿಂತ ಬಿ.ಕೆ.ಎಸ್ ವರ್ಮಾ ಅವರ ಮೂಲ ಹೆಸರು ಬುಕ್ಕಸಾಗರ ಕೃಷ್ಣಯ್ಯ ಶ್ರೀನಿವಾಸ ಆಚಾರ್ಯ. ಮೈಸೂರಿನ ಜನ್ಮೋಹನ ಅರಮನೆಯಲ್ಲಿ ನೋಡಿದ ರವಿ ವರ್ಮನ ಚಿತ್ರಕಲೆಯಿಂದ ಸ್ಫೂರ್ತಿ ಪಡೆದು ತಾನೂ ರವಿವರ್ಮನಂತೆ ಪರಿಪೂರ್ಣ ಕಲಾವಿದನಾಗಬೇಕೆಂದು ಬಯಸಿ ತಮ್ಮ ಹೆಸರನ್ನು ಬಿ.ಕೆ ಶ್ರೀನಿವಾಸ ವರ್ಮಾ ಎಂದು ಬದಲಿಸಿಕೊಂಡರು. ಬಳಿಕ ಬಿ.ಕೆ.ಎಸ್ ವರ್ಮಾ ಎಂದೇ ಪ್ರಸಿದ್ಧಿ ಪಡೆದರು.
ಬಿಕೆಎಸ್ ವರ್ಮಾ ಅವರು ರಚಿಸಿದ ಆದಿಗುರು ಶಂಕರಾಚಾರ್ಯರ ಚಿತ್ರ
ಕರ್ನಾಟಕ ಶಾಸ್ತ್ರೀಯ ಸಂಗೀತ ವಿದ್ವಾಂಸರಾದ ಕೃಷ್ಣಮಾಚಾರ್ಯ ಮತ್ತು ಚಿತ್ರ ಕಲಾವಿದೆ ಬಿ.ಎಸ್ ಜಯಲಕ್ಷ್ಮಿ ಅವರ ಪುತ್ರನಾಗಿ 1049ರ ಮೇ 5ರಂದು ಜನಿಸಿದ ಶ್ರೀನಿವಾಸ ಆಚಾರ್ಯರು ಬಾಲ್ಯದಿಂದಲೇ ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದರು. ನೆಲ, ಗೋಡೆ, ರಸ್ತೆ- ಹೀಗೆ ಎಲ್ಲವೂ ಅವರ ಚಿತ್ರಗಳಿಗೆ ಕ್ಯಾನ್ವಾಸ್‌ಗಳಾದವು. ಬಸವನಗುಡಿಯ ರಸ್ತೆ ಆಗ ಅತ್ಯಂತ ವಿರಳ ಸಂಚಾರವಿದ್ದ ರಸ್ತೆಯಾಗಿತ್ತು. ಅಲ್ಲಿ ಶ್ರೀನಿವಾಸ ಆಚಾರ್ಯರು ಬಿಡಿಸಿದ ಚಿತ್ರಗಳನ್ನು ಕಂಡು ಎ.ಎಸ್ ಮೂರ್ತಿ ಅವರು 'ನೆಲವೇ ಕಪ್ಪು ಹಲಗೆ' ಎಂಬ ಲೇಖನವನ್ನು ಪ್ರಕಟಿಸಿ ಇವರ ಬಗ್ಗೆ ಜಗತ್ತಿನ ಗಮನ ಸೆಳೆದರು.
ಬಳಿಕ ಕಲಾಮಂದಿರದಲ್ಲಿ ಅ.ನ. ಸುಬ್ಬರಾಯರ ಕಲಾಶಾಲೆ ಸೇರಿದ ಬಿ.ಕೆ.ಎಸ್. ವರ್ಮಾ ಇನ್ನಷ್ಟು ಕಲಿಕೆಯ ತುಡಿತದಿಂದ ಮದರಾಸಿಗೆ ತೆರಳಿದರು.
ವರ್ಮಾ ಅವರು ರಚಿಸಿದ ಕನ್ನಡಾಂಬೆ, ಡಾ. ರಾಜ್‌ಕುಮಾರ್ ಹಾಗೂ ರಾಘವೇಂದ್ರ ಸ್ವಾಮಿಗಳು, ಶಂಕರಾಚಾರ್ಯರ ಚಿತ್ರಗಳು ಸೇರಿದಂತೆ ಸಾವಿರಾರು ಚಿತ್ರಗಳು ಕಲಾಪ್ರೇಮಿಗಳ ಮನಸೂರೆಗೊಂಡಿದ್ದು, ಕನ್ನಡಿಗರ ಹೃದಯದಲ್ಲಿ ನೆಲೆ ನಿಂತಿವೆ.
ಮೊದ ಮೊದಲು ಬೆರಳಗಳನ್ನೇ ಬಳಸಿ ಚಿತ್ತಾರ ಸೃಷ್ಟಿಸುತ್ತಿದ್ದ ಕನ್ನಡ ನಾಡಿನ ಈ ಮೇರು ಕಲಾವಿದ, ಬಳಿಕ ಎಂಬೋಸಿಂಗ್, ಥ್ರೆಡ್ ಪೇಂಟಿಂಗ್ ಮೂಲಕವೂ ಕಲಾಕೃತಿಗಳನ್ನು ರಚಿಸತೊಡಗಿದರು. ಕೆಲವೇ ನಿಮಿಷಗಳಲ್ಲಿ ಅದ್ಭುತ ಕಲಾಕೃತಿಗಳನ್ನು ಸೃಷ್ಟಿಸುತ್ತಿದ್ದ ಅವರ ಕೈಚಳಕಕ್ಕೆ ಮಾರು ಹೋಗದವರೇ ಇಲ್ಲ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment