ದಾವಣಗೆರೆ: ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದರೆ ಪ್ರತಿ ಕುಟುಂಬದ ಮಕ್ಕಳಿಗೆ ಎಲ್.ಕೆ.ಜಿ.ಯಿಂದ ಪಿಯುಸಿವರೆಗೆ ಉಚಿತ ಶಿಕ್ಷಣ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಕೊಂಡಜ್ಜಿಯಲ್ಲಿ ಪಂಚರತ್ನ ರಥಯಾತ್ರೆ ಅಂಗವಾಗಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ವಿಕಲಚೇತನರಿಗೆ 2,500 ರೂ., ವಿಧವೆಯರಿಗೆ 2000 ರೂ. ಮಾಸಾಶನ ನೀಡಲಾಗುವುದು. ಕೃಷಿ ವಿಮೆ ಯೋಜನೆ ಬದಲಾವಣೆ ಮಾಡಿ ಹೊಸ ರೂಪದಲ್ಲಿ ಜಾರಿಗೊಳಿಸಲಾಗುವುದು. ತೆಲಂಗಾಣ ಮಾದರಿಯಲ್ಲಿ ರೈತ ಬಂಧು ಯೋಜನೆಯಡಿ ರೈತರಿಗೆ ಎಕರೆಗೆ 10,000 ರೂ.ನಂತೆ 10 ಎಕರೆಗೆ 1 ಲಕ್ಷ ರೂ. ನೀಡುವ ಯೋಜನೆ ಜಾರಿಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಬಡವರಿಗೆ 5 ಲಕ್ಷ ರೂಪಾಯಿ ಮೌಲ್ಯದ ಉಚಿತ ಮನೆ ವಿತರಿಸಲಾಗುವುದು. ದಿನದ 24 ಗಂಟೆಯೂ ರೈತರಿಗೆ ಉಚಿತ ವಿದ್ಯುತ್ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ.
إرسال تعليق