ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಖ್ಯಾತ ಬರಹಗಾರ, ಭಾಷಾ ವಿಜ್ಞಾನಿ ಡಾ.ಕೆ.ವಿ. ತಿರುಮಲೇಶ್ ನಿಧನ

ಖ್ಯಾತ ಬರಹಗಾರ, ಭಾಷಾ ವಿಜ್ಞಾನಿ ಡಾ.ಕೆ.ವಿ. ತಿರುಮಲೇಶ್ ನಿಧನ


ಮಂಗಳೂರು:  ಕನ್ನಡದ ಹಿರಿಯ ಸಾಹಿತಿ ಡಾ. ಕೆ.ವಿ ತಿರುಮಲೇಶ್‌ ಅವರು ಇಂದು (ಸೋಮವಾರ, ಜ.30) ಬೆಳಗಿನ ಜಾವ ಹೈದರಾಬಾದ್‌ನಲ್ಲಿ ತಮ್ಮ ಮಗಳ ನಿವಾಸದಲ್ಲಿ ನಿಧನರಾದರು.

ಸಾಹಿತ್ಯ, ಅನುವಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ, ಭಾಷಾ ವಿಜ್ಞಾನಿಯಾಗಿ ಗುರುತಿಸಿಕೊಂಡಿದ್ದ ಕನ್ನಡದ ಪ್ರಮುಖ ಬರಹಗಾರರಲ್ಲಿ ಒಬ್ಬರಾಗಿದ್ದ ತಿರುಮಲೇಶ್‌ ಅವರಿಗೆ 82 ವರ್ಷ ವಯಸ್ಸಾಗಿತ್ತು. ಅವರು ಪತ್ನಿ ಮತ್ತು ಮೂವರು ಹೆಣ್ಣು ಮಕ್ಕಳು ಹಾಗೂ ಅವರ ಬರಹಗಳ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.

ಹೃದಯ ಸಂಬಂಧಿ ತೊಂದರೆ ಹೊಂದಿದ್ದ ಡಾ.ಕೆ.ವಿ. ತಿರುಮಲೇಶ್ ಇತ್ತೀಚೆಗೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರು ಭಾನುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದರು.

ಕಾಸರಗೋಡು ಜಿಲ್ಲೆಯ ಮುಳ್ಳೇರಿಯಾ ಸಮೀಪದ ಕಾರಡ್ಕದ ತಿರುಮಲೇಶರು 1940 ಸೆಪ್ಟೆಂಬರ್ 12ರದು ಜನಿಸಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಕಾಸರಗೋಡಿನಲ್ಲಿ ಪಡೆದಿದ್ದರು. ಕಾಸರಗೋಡು ಮತ್ತು ತಿರುವನಂತಪುರದಲ್ಲಿ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯದ ವಿಷಯಗಳಲ್ಲಿ ಅಧ್ಯಯನ ನಡೆಸಿದ್ದರು. ಕೇರಳದ ವಿವಿಧ ಕಾಲೇಜುಗಳಲ್ಲಿ ಇಂಗ್ಲಿಷ್‌ ಪ್ರೊಫೆಸರ್‌ ಆಗಿ ಕಾರ್ಯನಿರ್ವಹಿಸಿದ್ದರೂ ಕನ್ನಡ ಸಾಹಿತ್ಯ ಲೋಕದಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದರು.

1975ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಹೈದರಾಬಾದಿಗೆ ತೆರಳಿದರು. ಅಲ್ಲಿ ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ ಪದವಿ ಪಡೆದರು. ಕನ್ನಡದ ವಾಕ್ಯರಚನೆ ಮತ್ತು ಕರ್ಮಣಿ ಪ್ರಯೋಗದ ಕುರಿತ ಅಧ್ಯಯನವು ಅವರ ಪಿಎಚ್‌.ಡಿ ವಿಷಯದ ವಸ್ತುವಾಗಿತ್ತು.

ಕೃತಿಗಳು- ಸಮ್ಮಾನ: ತಿರುಮಲೇಶರು ಆರೋಪ, ಮುಸುಗು ಎಂಬ ಕಾದಂಬರಿಗಳನ್ನು ಬರೆದಿದ್ದಾರೆ. ವಠಾರ, ಮುಖವಾಡಗಳು ಸೇರಿದಂತೆ ಹಲವು ಕವನ ಸಂಕಲನಗಳನ್ನು ಹೊರತಂದಿದ್ದಾರೆ. ವಠಾರ, ಮುಖವಾಡಗಳು, ತಿರುಮಲೇಶರ ಮುಖ್ಯ ಕವನ ಸಂಕಲನಗಳು.  'ಅಕ್ಷಯ ಕಾವ್ಯ' ಕೃತಿಗೆ 2015ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರಕಿತ್ತು.

ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ನಿರಂಜನ ಪ್ರಶಸ್ತಿ, ಕೇರಳದ ಕುಮಾರನ್ ಆಶಾನ್ ಪ್ರಶಸ್ತಿ, ವರ್ಧಮಾನ್ ಪ್ರಶಸ್ತಿ, ಗೋವಿಂದ ಪೈ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಪಡೆದಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


0 تعليقات

إرسال تعليق

Post a Comment (0)

أحدث أقدم