ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಾಹಿತ್ಯ ಹಾಗೂ ಕಲಾ ಕ್ಷೇತ್ರದ ಸಾಧಕ ನಾರಾಯಣ ರೈ ಕುಕ್ಕುವಳ್ಳಿಯವರು

ಸಾಹಿತ್ಯ ಹಾಗೂ ಕಲಾ ಕ್ಷೇತ್ರದ ಸಾಧಕ ನಾರಾಯಣ ರೈ ಕುಕ್ಕುವಳ್ಳಿಯವರು

 ಜ್ಞಾನ ಎಂಬುದು ಎಲ್ಲರಿಗೂ ಸಿದ್ಧಿಸುವುದಿಲ್ಲ..ಅದು ಸಾಧನೆಯ ಕೊನೆಗೆ ಬರುವ ಅಮೃತದಂತೆ"....

ಎನ್ನುವ ಅಮೂಲ್ಯವಾದ ನುಡಿಮುತ್ತಿನಂತೆ ಸಾಹಿತ್ಯ,ಭಾಷಣ ಹಾಗೂ ವ್ಯಂಗ್ಯಚಿತ್ರಕಲೆ ..ಹೀಗೆ ವಿವಿಧ ಕ್ಷೇತ್ರಗಳಲ್ಲಿ  ಗುರುತಿಸಲ್ಪಟ್ಟ ,ಸಾಹಿತಿ- ಕಲಾವಿದ ನಾರಾಯಣ ರೈ ಕುಕ್ಕುವಳ್ಳಿಯವರು.


ಪುತ್ತೂರು ತಾಲೂಕಿನ ಏಕೈಕ ವ್ಯಂಗ್ಯ ಚಿತ್ರಗಾರರಾಗಿ,ಅಂಕಣಗಾರ,ಕವಿ,ಸಾಹಿತಿ,ನಿವೃತ್ತ ಶಿಕ್ಷಕರಾಗಿ ಇವರು ಚಿರಪರಿಚಿತರು.


ಇವರು ಮೂಲತ: ಪುತ್ತೂರು ತಾಲೂಕಿನ ಇರ್ದೆ ಬೆಂದ್ರ್ ತೀರ್ಥ ಬಳಿಯ ಕುಕ್ಕುವಳ್ಳಿಯವರು.


ಕೀ.ಶೇ.ಕಲ್ಲಡ್ಕ ಕರಿಯಪ್ಪ ರೈ ಮತ್ತು ಶ್ರೀಮತಿ ಕುಕ್ಕುವಳ್ಳಿ ಗಿರಿಜ ಕೆ.ರೈಯವರ ಎಂಟುಜನ ಮಕ್ಕಳಲ್ಲಿ ಎರಡನೆಯವರು.


ಇವರ ಪ್ರಾಥಮಿಕ ಶಿಕ್ಷಣ ಬೆಟ್ಟಂಪಾಡಿ,ದರ್ಬೆತ್ತಡ್ಕ ಹಿರಿಯಪ್ರಾಥಮಿಕ ಶಾಲೆಗಳಲ್ಲಿ ಪೂರ್ಣಗೊಂಡಿತು.


ಮುಂದೆ ಪ್ರೌಢಶಿಕ್ಷಣವನ್ನು ಬೆಟ್ಟಂಪಾಡಿ ನವೋದಯ ಪ್ರೌಢಶಾಲೆಯಲ್ಲಿ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ಇವರಿಗೆ ಅಧ್ಯಾಪಕನಾಗಬೇಕೆಂಬ ಕನಸಿನಂತೆ ಮಡಿಕೇರಿ ವಿರಾಜಪೇಟೆಯ ಸರ್ವೋದಯ ಶಿಕ್ಷಕರ ತರಬೇತಿ ಕಾಲೇಜಿನಲ್ಲಿ ಎರಡುವರ್ಷ ಟಿ.ಸಿ.ಎಚ್ ತರಬೇತಿ ಮುಗಿಸಿ ಎಕ್ಸಾಂಪ್ಲರಿ ವಿಶಿಷ್ಟ ಸ್ಥಾನದೊಂದಿಗೆ ಉತ್ತೀರ್ಣರಾಗಿ ಹೊರಬಂದು ಖಾಸಗಿ ವಿದ್ಯಾಸಂಸ್ಥೆ ವಿಟ್ಲ ಶ್ರೀ ಸತ್ಯಸಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಮಾರು ಎರಡು ವರ್ಷ ಸೇವೆ ಸಲ್ಲಿಸಿದರು


ಮುಂದೆ ಡಿ.ಎಲ್.ಆರ್.ಸಿಯ ಆಯ್ಕೆಯ ಮೊದಲ ಪಟ್ಟಿಯಲ್ಲೇ ನೇಮಕಗೊಂಡು ಕಡಬ ತಾಲೂಕಿನ ಕೊಣಾಜೆ ಶಾಲಾಮುಖ್ಯೋಪಾಧ್ಯಾಯರಾಗಿ ಊರವರ ನೆರವಿನೊಂದಿಗೆ ಹಿರಿಯ ಪ್ರಾಥಮಿಕ ಶಾಲೆಯನ್ನಾಗಿ ಉನ್ನತಿಗೊಳಿಸಿ,ಹುಟ್ಟೂರಾದ ಬೆಟ್ಟಂಪಾಡಿಗೆ ವರ್ಗಾವಣೆಗೊಂಡು ಸುಮಾರು 25ವರ್ಷಗಳ ಕಾಲ ಸೇವೆ ಸಲ್ಲಿಸಿದರು.


ಇದೇ ಸಂದರ್ಭದಲ್ಲಿ ಬಿ.ಎ.ಬಿಎಡ್ ಪದವಿಯನ್ನು ಖಾಸಗಿಯಾಗಿ ಮೈಸೂರು ಮುಕ್ತ ವಿಶ್ವವಿದ್ಯಾನಿಲಯ ಮಾನಸಗಂಗೋತ್ರಿಯಲ್ಲಿ ಪೂರ್ಣಗೊಳಿಸಿ,ಮತ್ತೆ ಎರಡು ವರ್ಷಗಳಕಾಲ ಅಭ್ಯಾಸ ಮಾಡಿ ಸಮಾಜಶಾಸ್ತ್ರದಲ್ಲಿ ಎಂ.ಎ.ಪದವಿ ಪಡೆದು ಭಡ್ತಿಹೊಂದಿದರು.


ಆದರೆ..! ಇವರ ಶಿಕ್ಷಣ,ಸಾಹಿತ್ಯ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹನೀಡುತ್ತಿದ್ದ ಇವರ ಪತ್ನಿ ಶ್ರೀಮತಿ ನಾಗರತ್ನ ಎನ್.ರೈ ನುಳಿಯಾಲು ಇವರ ಅಕಾಲಿಕ ನಿಧನವು ನಾರಾಯಣ ರೈ ಕುಕ್ಕುವಳ್ಳಿಯವರಿಗೆ ತೀವ್ರ ಆಘಾತವನ್ನುಂಟುಮಾಡಿತ್ತು.


ಇವರ ಮಕ್ಕಳಾದ ನಿತಿನ್ ರೈ ಕುಕ್ಕುವಳ್ಳಿ ಮತ್ತು ಶ್ರೀಮತಿ ನೀನಾ ರಮಾನಾಥ ರೈವರಿಗೆ ಉತ್ತಮ ಶಿಕ್ಷಣಕೊಡಿಸಿ ಅವರ ಬಾಳಿಗೂ ಬೆಳಕಾದರು.


ಎಂ.ಎ.ಬಿ.ಎಡ್ ಪದವೀಧರರಾಗಿರುವ ಇವರು ಅಳಿಕೆ, ಕೊಣಾಜೆ,ಬೆಟ್ಟಂಪಾಡಿ, ಮುಂಡೂರು-1,ಪುತ್ತೂರು ಸರಕಾರಿ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗ,ಸರಕಾರಿ ಪ್ರೌಢಶಾಲೆ ಇರ್ದೆ-ಉಪ್ಪಳಿಗೆಯ ಸ್ಥಾಪಕ ಮುಖ್ಯಗುರುಗಳಾಗಿಯೂ  ಸೇವೆ ಸಲ್ಲಿಸಿದ್ದಾರೆ.


ನಿವೃತ್ತ ಶಿಕ್ಷಕರಾಗಿರುವ ಇವರು ತನ್ನ ಸೇವಾವಧಿಯಲ್ಲಿ ಶಿಕ್ಷಣ ಇಲಾಖೆ ನೀಡಿದ ಅವಕಾಶದಿಂದ,ಕನ್ನಡ,ತುಳು ಪಠ್ಯಪುಸ್ತಕ ರಚನೆಯ ಗೌರವ ಸದಸ್ಯರಾಗಿ,ಉಜಿರೆ ಮಕ್ಕಳ  ಸಾಹಿತ್ಯ ರಚನಾ ಕಮ್ಮಟದ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ ಹಿರಿಮೆ ಇವರದು.


ಇವರು ತನ್ನ ವಿದ್ಯಾರ್ಥಿ ಜೀವನದಲ್ಲೇ ಸ್ವ- ಪ್ರಯತ್ನದಿಂದ ಆರಂಭಿಸಿ 69-70 ರ ಇಳಿವಯಸ್ಸಿನಲ್ಲಿಯೂ ದಣಿವರಿಯದೇ... ಶಿಕ್ಷಣ,ಕಲೆ,ಸಾಹಿತ್ಯ ಕ್ಷೇತ್ರಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ.


ಅನೇಕ ಹಿರಿಯ ಯುವ- ಲೇಖಕರ ಕವನ ಸಂಗ್ರಹ,ಕನ್ನಡ-ತುಳು ಸಾಹಿತ್ಯ ಕೃತಿಗಳಿಗೆ ಮಾರ್ಗದರ್ಶನ,ತಿದ್ದುಪಡಿ,ಮುನ್ನುಡಿ,ಹಿನ್ನುಡಿ ಬರೆದು ಸಹಕಾರ ನೀಡಿದ್ದಾರೆ.


ಅಕ್ಷಯ,ತುಷಾರ,ಸುದ್ದಿಬಿಡುಗಡೆ,

ಬಂಟರವಾಣಿ,ಸಂಪರ್ಕ,

ಮಲ್ಲಿಗೆ,ತರಂಗ,ಮಧುಪ್ರಪಂಚ, ಮೊಗವೀರ,ಮದಿಪು ಮುಂತಾದ ಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ,ಲೇಖನ, ಕವನ,ಹನಿಗವನಗಳನ್ನು ಬರೆದು ಪ್ರಕಟಿಸುವ ಇವರು ಪ್ರತಿಭಾರಂಗ, ಬರಹದಂಗಣ ಅಂಕಣದ ನಿರ್ವಾಹಕರಾಗಿ ಅನೇಕ ಮಕ್ಕಳ -ಹಿರಿಯ ಪ್ರತಿಭೆಗಳನ್ನು ನಾಡಿಗೆ ಪರಿಚಯಿಸುವ ಕಾರ್ಯ ಮಾಡುತ್ತಿದ್ದಾರೆ.


ಪ್ರಕೃತ ದ.ಕ.ಜಿಲ್ಲಾ ಜೇನುವ್ಯವಸಾಯಗಾರರ ಸಂಘ (ರಿ) ಪುತ್ತೂರು ಇಲ್ಲಿಂದ ಪ್ರಕಟವಾಗುತ್ತಿರುವ ಏಕೈಕ ಜೇನು ವ್ಯವಸಾಯಗಾರರ ತ್ರೈಮಾಸಿಕ ಪತ್ರಿಕೆ ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿರುವರು.

ಅನೇಕ ಕನ್ನಡ-ತುಳು ಕವನ ಸಂಕಲನಗಳಲ್ಲಿ ಇವರ ಅನೇಕ ಕವನಗಳು ಪ್ರಕಟವಾಗಿವೆ.

 ಮಂಗಳೂರು ಆಕಾಶವಾಣಿಯಲ್ಲಿ ಇವರ ಸಂದರ್ಶನ,ತುಳುಕತೆ,ಕವನ, ರಸಪ್ರಶ್ನೆ,ಗುಬ್ಬಿದ ಗೂಡು ಮಕ್ಕಳ ಕಾರ್ಯಕ್ರಮ, ಯಕ್ಷಗಾನ ಮೊದಲಾದ ಕಾರ್ಯಕ್ರಮಗಳು ಪ್ರಸಾರವಾಗಿ ಅಪಾರ ಜನಮನ್ನಣೆ ಪಡೆದಿವೆ.


ಚಂದನ ದೂರದರ್ಶನ ಬೆಂಗಳೂರು,ನಮ್ಮ ಕುಡ್ಲ ವಾಹಿನಿಗಳಲ್ಲಿ ಕವಿಗೋಷ್ಠಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತಾರೆ.

ಪುತ್ತೂರು ಪಿ.ಸಿ.ಎನ್ ಚಾನೆಲ್ ನಲ್ಲಿ ತುಳುಚಾವಡಿಯ ನಿರ್ದೇಶಕರಾಗಿ ಎರಡು-ಮೂರುವರ್ಷ ಅನೇಕ ಬಾಲಪ್ರತಿಭೆ,ಯುವ ಪ್ರತಿಭೆಗಳ ಕಾರ್ಯಕ್ರಮಗಳಿಗೆ ಪ್ರೋತ್ಸಾಹ ನೀಡಿದ ಕಲೆ-ಸಾಹಿತ್ಯ ಮನಸ್ಸು ಇವರದು.


ನಾರಾಯಣ ರೈ ಕುಕ್ಕುವಳ್ಳಿಯವರಿಗೆ ಸಂದ ಪ್ರಶಸ್ತಿ- ಪುರಸ್ಕಾರ,ಗೌರವಗಳು.


▪️ಆರ್ಯಭಟ ರಾಜ್ಯ ಪ್ರಶಸ್ತಿ.

▪️ಕಲಾಶ್ರಯ ಪುರಸ್ಕಾರ.

▪️ತಾಲ್ಲೂಕು ಹಾಗೂ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ.

▪️ಶಿಕ್ಷಣದಲ್ಲಿ ಹಿರಿಮೆಗೆ ಸತತವಾಗಿ ಎರಡು ಬಾರಿ ರಾಜ್ಯ ಪುರಸ್ಕಾರ.

ಮದರಾಸು ಬಂಟರ ಸಂಘದ ವತಿಯಿಂದ ಉತ್ತಮ ಶಿಕ್ಷಕ ಸನ್ಮಾನ.

▪️ಗಡಿನಾಡ ಶಿಕ್ಷಕ ಪ್ರಶಸ್ತಿ.

▪️ಮುಂಬೈನ ಅಕ್ಷಯ ಮಾಸಪತ್ರಿಕೆಯವರು ನಡೆಸಿದ  ರಾಷ್ಟ್ರ ಮಟ್ಟದ ವ್ಯಂಗ್ಯಚಿತ್ರ ಸ್ಪರ್ಧೆಗಳಲ್ಲಿ ಸತತವಾಗಿ ಆರು ಬಾರಿ ಪ್ರಥಮ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಇವರು ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ರಾಗಸಂಗಮ ಪತ್ರಿಕೆಯವರು ನಡೆಸಿದ ಮೂಕಿ ವ್ಯಂಗ್ಯಚಿತ್ರಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುವರು.

▪️ಗಡಿನಾಡಧ್ವನಿ ಪ್ರಧಾನ ಸಂಪಾದಕರಾಡ ಡಾ/ಹಾಜಿ ಅಬ್ಬು ಬಕರ್ ಆರ್ಲಪದವು ಸಾರಥ್ಯದ "ಗಡಿನಾಡ ಧ್ವನಿ"ವಿಶೇಷ ಸಂಚಿಕೆಯಲ್ಲಿ ಕುಕ್ಕುವಳ್ಳಿಯವರ ಲೇಖನ,ಕವನ,ವ್ಯಂಗ್ಯ ಚಿತ್ರಗಳು ಪ್ರಕಟವಾಗಿವೆ.

▪️ಉದಯವಾಣಿ,ಕರ್ಮವೀರ,ಯುವರಾಜ,ಮನ್ವಂತರ,ವಾರಪತ್ರಿಕೆ,ಹೊಸದಿಗಂತ,ಚೆಲುವು,ಕಸ್ತೂರಿ,ಮುಂಗಾರು,ಪ್ರಜಾವಾಣಿ,ನಿರಂತರ ಪ್ರಗತಿ,ಅಕ್ಷಯ

ಮಂಗಳ,ಬಾಲಮಂಗಳ,ಅಶ್ವಮೇಧ... ಸಂಚಿಕೆಗಳಲ್ಲಿ ಲೇಖನ ಕವನಗಳೊಂದಿಗೆ ಆಗಾಗ ವ್ಯಂಗ್ಯಚಿತ್ರಗಳು, ರಸಪ್ರಶ್ನೆ,ಶಬ್ದ ಚಿತ್ರ ಇತ್ಯಾದಿ ಹೆಚ್ಚು ಪ್ರಕಟವಾಗುತ್ತಿದ್ದವು.ಮಂಗಳದ ಇವರ ವಿಮರ್ಶಾ ಲೇಖನಕ್ಕೂ ಪ್ರಥಮ ಬಹುಮಾನ ಬಂದಿದೆ.

▪️ಅಕ್ಷಯ ಹಾಗೂ ಮೊಗವೀರ ಮಾಸಪತ್ರಿಕೆಯವರು ನಡೆಸಿದ ಲೇಖನ ಸ್ಪರ್ಧೆಗಳಲ್ಲೂ ಅನೇಕ ಲೇಖನಗಳಿಗೆ ಪ್ರಥಮ,ದ್ವಿತೀಯ ಬಹುಮಾನ ಸಂದಿವೆ.

▪️ಸಂಯುಕ್ತ ಕರ್ನಾಟಕ ಪತ್ರಿಕೆಯ ವತಿಯಿಂದ 25 ವರ್ಷಗಳ ಹಿಂದೆ ನಡೆದ "ನೀರ ಕಳಕಳಿ" ಲೇಖನಕ್ಕೆ ರೂ.5000 ಬಹುಮಾನ ಪಡೆದ ಹೆಗ್ಗಳಿಕೆ ಕುಕ್ಕುವಳ್ಳಿಯವರದು.

▪️ಕನ್ನಡ ಸುವರ್ಣ ಚಾನೆಲ್ ನವರು ಚಾನೆಲ್ ಆರಂಭದ ಸಮಯದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಡೆಸಿದ ಕೈ ಬರಹ ಸ್ಪರ್ಧೆಯಲ್ಲಿ ಬಹುಮಾನಿತರಾದ ಕುಕ್ಕುವಳ್ಳಿಯವರು,ಮಕ್ಕಳು ಕೈಬರಹಕ್ಕೆ ಗಮನಕೊಡಬೇಕೆಂದು ಕಿವಿಮಾತು ಹೇಳುವರು.

▪️ವಿಶ್ವವಾಣಿ ಪತ್ರಿಕೆಯವರು ನಡೆಸಿದ ಕೈಬರಹ ಸ್ಪರ್ಧೆಗಳಲ್ಲಿ ವಿಜೇತರಾದ ಮೂವರಲ್ಲಿ ಇವರೂ ಒಬ್ಬರು.

▪️ಚಂದನ ಸಾಹಿತ್ಯ ವೇದಿಕೆ ಸುಳ್ಯ,ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಭಾವೈಕ್ಯತಾ ಕಾರ್ಯಕ್ರಮಗಳಲ್ಲಿ "ಸದ್ಭಾವನಾ ಪುರಸ್ಕಾರ" ಪಡೆದಿರುವ ನಾರಾಯಣ ರೈ ಕುಕ್ಕುವಳ್ಳಿಯವರು,ಚಿದಾನಂದ ಕಾಮತ್ ಕಾಸರಗೋಡು ಅವರ "ಬಾರಿಸು ಕನ್ನಡ ಡಿಂಡಿಮ"ದ ಅನೇಕ ಕಾರ್ಯಕ್ರಮಗಳಲ್ಲಿ,ಮುಖ್ಯ ಅತಿಥಿ,ಅಧ್ಯಕ್ಷಸ್ಥಾನದ ಗೌರವ ಪಡೆದಿದ್ದಾರೆ.

▪️ಬೆಂಗಳೂರಿನ ಯುವ ಜಾನಪದ ವಿದ್ವಾಂಸ ಡಾ.ಬಾಲಾಜಿ ಸಾರಥ್ಯದ ಸಂಸ್ಥೆಯಿಂದ ರಾಷ್ಟ್ರಕವಿ ಕುವೆಂಪು ಸ್ಮರಣೆಯ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರಿನಲ್ಲಿ ವ್ಯಂಗ್ಯಚಿತ್ರ ಸಾಧನೆಗೆ "ರಾಜ್ಯ ಪುರಸ್ಕಾರ" ಸೇರಿದಂತೆ...ಹೀಗೆ ಹತ್ತು ಹಲವು ಬಹುಮಾನ,ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಂದಿರುವುದು ಉಲ್ಲೇಖನೀಯ.

▪️ಪುತ್ತೂರು ಮಕ್ಕಳ ಸಾಹಿತ್ಯ ಸಮ್ಮೇಳನ,ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲಿ ಸನ್ಮಾನ ಗೌರವಗಳಿಗೆ ಪಾತ್ರರಾದ ಕುಕ್ಕುವಳ್ಳಿಯವರನ್ನು ಅನೇಕ ಸಂಘ ಸಂಸ್ಥೆಗಳವರು ಗುರುತಿಸಿ ಈಗಲೂ ಅಭಿನಂದಿಸುತ್ತಿರುವುದು ಇವರ ಸಾಹಿತ್ಯ ಹಿರಿಮೆಗೊಂದು ಗರಿಯೇ ಸರಿ.

▪️ಪುತ್ತೂರಿನಲ್ಲಿ ಜರುಗಿದ "ಗಡಿನಾಡ ಧ್ವನಿ" ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವ ಪಡೆದಿರುವ ಹಿರಿಯ ಸಾಧಕರಾಗಿದ್ದಾರೆ.

▪️ಮಲ್ಲಿಗೆ ಮಾಸಪತ್ರಿಕೆಯಲ್ಲಿ ಲೇಖನ,ಹನಿಗವನಗಳ ಜೊತೆಗೆ ಮೂರನೇಯ ರಕ್ಷಾಪುಟದಲ್ಲಿ ಸತತವಾಗಿ ಪ್ರಕಟವಾಗುತ್ತಿದ್ದ ನಗೆಮಲ್ಲಿಗೆ ವ್ಯಂಗ್ಯಚಿತ್ರ ಅಂಕಣ,ಸುದ್ದಿ ಬಿಡುಗಡೆಯಲ್ಲಿ ಪ್ರಕಟವಾಗುತ್ತಿದ್ದ ವ್ಯಂಗ್ಯರಂಗ ಅಂಕಣಗಳು ಓದುಗರ ಮೆಚ್ಚುಗೆ ಗಳಿಸಿದ್ದವು

▪️ಪ್ರತಿಭಾರಂಗ,ಹನಿ-ಮಿನಿ ಕಾವ್ಯರಂಗ,ಚಿತ್ರರಂಗ ಮಕ್ಕಳ ಗಮನ ಸೆಳೆಯುತ್ತಿದ್ದ ಅಂಕಣಗಳಾಗಿದ್ದವು.

▪️ಚಿಣ್ಣರ ಬಣ್ಣ,ಮಕ್ಕಳಕವನ ಸಂಗ್ರಹ,ಕಾರಂತ ಮಾಸ್ತರ್ ಜೀವನ ಚರಿತ್ರೆ ,ಪ್ರತಿಭಾ,ಸೌಹಾರ್ದ,ನಮನ..ಇವರ ಪ್ರಕಟಿತ ಕೃತಿಗಳಾಗಿವೆ.

▪️ಪ್ರಸ್ತುತ "ಸುದ್ದಿ ಬಿಡುಗಡೆ ಪುತ್ತೂರು"ಸಂಚಿಕೆಯಲ್ಲಿ ಮಕ್ಕಳಿಗಾಗಿ ಯುವಕರಿಗಾಗಿ ಪ್ರತಿಭಾರಂಗ ಅಂಕಣ ವೈವಿಧ್ಯಮಯವಾಗಿ ಮೂಡಿ ಬರುತ್ತಿದೆ.

▪️ಸುಮಾರು 25 ವರ್ಷಗಳ ಕಾಲದಿಂದ ಮಾಧ್ಯಮ ಹಾಗೂ ಸಂಘಸಂಸ್ಥೆಗಳ ಸಹಯೋಗದಲ್ಲಿ ಸುದ್ದಿಬಿಡುಗಡೆ ಪತ್ರಿಕೆಯ ಮೂಲಕ "ಪ್ರತಿಭಾದೀಪ ಪುರಸ್ಕಾರ" ನೀಡಿ ಪ್ರಾಥಮಿಕ ಪ್ರೌಢ ಶಾಲೆಗಳ ನೂರಾರು ವಿದ್ಯಾರ್ಥಿಗಳನ್ನು ಪುರಸ್ಕರಿಸಿದ ಹೆಗ್ಗಳಿಕೆಗೆ ಪಾತ್ರರಾಗಿರುವರು.

▪️ಅನೇಕ ಸಂಘಸಂಸ್ಥೆ,ಶಾಲೆ-ದೇವಾಲಯ ಮೊದಲಾದ ಸ್ಮರಣಸಂಚಿಕೆಗಳ ಪ್ರಧಾನ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿರುವರು.

ತಾಲೂಕು,ಜಿಲ್ಲಾ,ರಾಜ್ಯಮಟ್ಟದ ಯುವಜನ ಮೇಳಗಳಲ್ಲಿ ಪ್ರಧಾನ ತೀರ್ಪುಗಾರರಾಗಿ ಹಾಗೂ ಶಿಕ್ಷಣ ಇಲಾಖೆಯ ತಾಲೂಕು,ಜಿಲ್ಲಾ ಪ್ರತಿಭಾ ಕಾರಂಜಿ ಕಾರ್ಯಕ್ರಮ,ಶ್ರೀ ಕ್ಷೇತ್ರ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಸ್ಪರ್ಧಾ ಕಾರ್ಯಕ್ರಮಗಳಲ್ಲೂ ತೀರ್ಪುಗಾರರಾಗಿ ಭಾಗವಹಿಸಿರುವರು.


▪️ಗಣ್ಯರ ಹಾರೈಕೆಗಳು


▪️ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿ ರಾಜರ್ಷಿ,ಪದ್ಮವಿಭೂಷಣ,ಕರ್ನಾಟಕ ರತ್ನ,ರಾಜ್ಯಸಭಾ ಸದಸ್ಯರಾಗಿರುವ  ಡಾ/ಡಿ.

ವೀರೇಂದ್ರ ಹೆಗ್ಗಡೆಯವರು ಕುಕ್ಕುವಳ್ಳಿಯವರ ಮಕ್ಕಳ ಕವನ ಸಂಕಲನ "ಚಿಣ್ಣರ ಬಣ್ಣ"ಕೃತಿಗೆ ಶುಭ ಹಾರೈಸಿ "ಸರ್ವ ಯಶಸ್ಸನ್ನು ಕೋರುತ್ತೇನೆ...ಶ್ರೀ ಮಂಜುನಾಥ ಸ್ವಾಮಿ ಹರಸಲಿ.."ಎಂದು ಆಶೀರ್ವದಿಸಿದ್ದಾರೆ.

▪️ಕಸ್ತೂರಿ ಮಾಸಪತ್ರಿಕೆಯ ಹಿರಿಯ ವಿಮರ್ಶಕರೂ, ಅಂಕಣಕಾರರೂ ಆಗಿದ್ದ 

ಪಾ.ವೆಂ.ಆಚಾರ್ಯ ಅವರು,ಇವರ "ಅರ್ಲು ಕಬಿತೆಗಳು...ಪೊರ್ಲು ಕಬಿತೆಗಳು.."ತುಳು-ಕನ್ನಡ ಕವನ ಸಂಕಲನದಲ್ಲಿ ಮೂಡಿ ಬಂದ "ಪ್ರೀತಿ"ಎಂಬ ಕವನವನ್ನು ಮೆಚ್ಚಿ "ಈ ಕವನ ಸಂಕಲನದ ಅತ್ಯುತ್ತಮ ಕವನಗಳಲ್ಲಿ ಒಂದಾದ 'ಪ್ರೀತಿ' ಕವನ ಬರೆದಿರುವ ನಾರಾಯಣ ರೈಯವರು ಹೃದಯವನ್ನು ಮುಟ್ಟುವ ಕವಿ..."ಎಂದು ಹರಸಿದ್ದಾರೆ.

▪️ಹಿರಿಯ ಕವಿ,ವಿದ್ವಾಂಸರಾಗಿದ್ದ ರಸಿಕ ಪುತ್ತಿಗೆಯವರು ಬಪ್ಪನಾಡು ಶ್ರೀ ಕ್ಷೇತ್ರದ ವಠಾರದಲ್ಲಿ ಕರ್ನಾಟಕ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ನಡೆದ ಮಕ್ಕಳ ಸಾಹಿತ್ಯ ರಚನಾ ಕಮ್ಮಟದ ಸಹನಿರ್ದೇಶಕರ ಸ್ಥಾನ ನೀಡಿ ಕಥೆ,ಕವನ ಬರೆಯಿಸಿ ಪ್ರೋತ್ಸಾಹಿಸಿರುವರು.

▪️ಸುದ್ದಿ ಬಿಡುಗಡೆಯ ಅಂಕಣಕಾರರಾಗಿದ್ದ ಹಿರಿಯ ಕವಿ,ವಿದ್ವಾಂಸ ಎಂ.ವಿ.ಭಟ್ ಅವರು ತನ್ನ ಪುತ್ತೂರು ವೃತ್ತಾಂತ ಅಂಕಣದಲ್ಲಿ "ಕುಕ್ಕುವಳ್ಳಿಯ ಮಣ್ಣಿನಲ್ಲಿ ಅರಳಿದ ಗಿಡ..."ಎಂದು ಬಣ್ಣಿಸಿದ್ದಾರೆ.

▪️ಜಾನಪದ ವಿದ್ವಾಂಸರೂ  ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಿಸ್ತ್ರಾರ್ ಆಗಿರುವ ಡಾ/ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ರಿಜಾಸ್ತ್ರಾರ್ ಆಗಿರುವ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ/ಡಿ.ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ

 ಧರ್ಮಸ್ಥಳದ ಸಿದ್ಧವನ ಗುರುಕುಲದಲ್ಲಿ  ವಿದ್ಯಾರ್ಥಿ

ಗಳಿಗಾಗಿ ರಚಿಸಲಾದ ತುಳು ಸಾಹಿತ್ಯ ರಚನಾ ಕಮ್ಮಟದ ಸಹನಿರ್ದೇಶಕರನ್ನಾಗಿ ನೇಮಿಸಿ ಕುಕ್ಕುವಳ್ಳಿಯವರನ್ನು ಪ್ರೋತ್ಸಾಹಿಸಿರುವರು.ಅಕಾಡೆಮಿಯ ಅಧ್ಯಕ್ಷರಾದ ಸಂದರ್ಭದಲ್ಲಿ ಮದಿಪು ಸಂಚಿಕೆಗೆ ಕಥೆ,ಕಬಿತೆ,ಲೇಖನ ಬರೆಯಿಸಿ ಪ್ರಕಟಿಸಿರುವರು.

▪️ತುಳು ವಿದ್ವಾಂಸರೂ,ನಾಟ್ಯಗುರುಗಳೂ ಆಗಿದ್ದ ಕುದ್ಕಾಡಿ ವಿಶ್ವನಾಥ ರೈಗಳು,ಜಾನಪದ ವಿದ್ವಾಂಸ,ಆದರ್ಶ ಗುರು,ವಿಶ್ರಾಂತ ಪ್ರೊಫೆಸರ್   ಹಿರಿಯ ಪತ್ರಕರ್ತರೂ ಅಂಕಣಕಾರರೂ ಆಗಿರುವ ಪ್ರೊ/ವಿ.ಬಿ. ಅರ್ತಿಕಜೆಯವರು ಇವರ ವ್ಯಕ್ತಿತ್ವ,ಸಾಹಿತ್ಯಾಸಕ್ತಿಯನ್ನು ವಿವಿಧ ವೇದಿಕೆಗಳಲ್ಲಿ ಕೊಂಡಾಡಿ ಕವಿ,ಸಾಹಿತಿ,ವಾಗ್ಮಿಗಳು..ಎಂದು ಕೊಂಡಾಡಿದ್ದಾರೆ.

▪️ಮಂಗಳೂರು ಆಕಾಶವಾಣಿಯ ನಿಲಯನಿರ್ದೇಶಕರೂ,ಕವಿ-ವಿಮರ್ಶಕರೂ ಆಗಿರುವ ಡಾ/ವಸಂತ ಕುಮಾರ್ ಪೆರ್ಲ ಅವರು ಕುಕ್ಕುವಳ್ಳಿಯವರ ತುಳುಕವನಗಳನ್ನು ಆಹ್ವಾನಿಸಿ ಅನೇಕ ತುಳುಕವನಗಳಲ್ಲಿ ಪ್ರಕಟಿಸಿ ಪ್ರೋತ್ಸಾಹಿಸಿದ್ದಾರೆ.

▪️ಕುಕ್ಕುವಳ್ಳಿಯವರ ಹಿರಿಯ ಸಹೋದರ ಖ್ಯಾತ ಲೇಖಕ,ಯಕ್ಷಗಾನ ಕಲಾವಿದ,ರಂಗಚಾವಡಿಯ ನಿರ್ದೇಶಕ ಪ್ರೊ/ಭಾಸ್ಕರ ರೈ ಕುಕ್ಕುವಳ್ಳಿಯವರು  ಮದಿಪು,ಸಂಪರ್ಕ,ಸದಾಶಯ ಸಂಚಿಕೆಗಳಲ್ಲಿ ಇವರ ಕವನ ಲೇಖನಗಳನ್ನು ಪ್ರಕಟಿಸಿ ಸೋದರ ಪ್ರೀತಿ ಮೆರೆದಿದ್ದಾರೆ.

"ಸಾಮಾಜಿಕ ಜಾಲತಾಣಗಳನ್ನು,ಶೈಕ್ಷಣಿಕವಾಗಿ,

ಕಲಾತ್ಮಕ,ಸಮಾಜಮುಖಿಯಾಗಿ ಬಳಸಿಕೊಳ್ಳ ಬೇಕು...ಬಾಲ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ಅವಕಾಶನೀಡಿ   ಮುಂದೆ ಸಾಧಕ ಕ್ರಿಯಾಶೀಲ ನಾಗರಿಕರಾಗಿ ಬೆಳಗಲು ಅವಕಾಶ ನೀಡಬೇಕು..."ಎಂದು ಕಿವಿಮಾತು ಹೇಳುವ ಕುಕ್ಕುವಳ್ಳಿಯವರು "ವಿದ್ಯಾರ್ಥಿಗಳು ಹೆಚ್ಚು ಓದುವ ಹಾಗೂ ಬರೆಯುವ ಕಡೆಗೆ ಗಮನ ನೀಡಬೇಕಾದ  ಅಗತ್ಯವಿದೆ.."ಎನ್ನುತ್ತಾರೆ.


ಹಿರಿಯ ಸಾಧಕರಾಗಿ ಯುವ ಸಾಧಕರಿಗೆ ಸ್ಫೂರ್ತಿಯಾಗಿರುವ ನಾರಾಯಣ ರೈ ಕುಕ್ಕುವಳ್ಳಿಯವರು ಪ್ರಕೃತ ಮಗ-ಸೊಸೆ,ಮಗಳು-ಅಳಿಯ ಮೊಮ್ಮಕ್ಕಳೊಂದಿಗೆ ಸಂತೃಪ್ತ ಜೀವನ ನಡೆಸುತ್ತಿದ್ದಾರೆ. 


ಇವರ ಮುಂದಿನ ಜೀವನವು ಸುಖಕರವಾಗಿರಲಿ, ಹಾಗೇ ಇವರ ಸಾಧನೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬರುವಂತಾಗಲಿ ಎಂದು ಹಾರೈಸೋಣ.


✍️ ಮನೋಹರ್ ಕುಂಬಾರ ಚಾರ್ವಾಕ ಕೊಪ್ಪ

0 Comments

Post a Comment

Post a Comment (0)

Previous Post Next Post