ಪಾಟ್ನಾ: ಬಿಹಾರದ ಪೂರ್ವ ಚಂಪಾರಣ್ ಜಿಲ್ಲೆಯ ನರೀರ್‌ಗಿರ್ ಗ್ರಾಮದ ಇಟ್ಟಿಗೆ ಭಟ್ಟಿಯೊಂದರಲ್ಲಿ ಶುಕ್ರವಾರ ಸಂಜೆ ಭೀಕರ ಸ್ಫೋಟ ಸಂಭವಿಸಿದ್ದು, ಕನಿಷ್ಠ ಆರು ಮಂದಿ ಮೃತಪಟ್ಟು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಇಟ್ಟಿಗೆ ಭಟ್ಟಿಯ ಮಾಲೀಕ ಮೊಹ್ಮದ್ ಇರ್ಷಾದ್ ಕೂಡಾ ಸ್ಫೋಟದಲ್ಲಿ ಮೃತಪಟ್ಟಿದ್ದಾರೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಜಿತೇಂದ್ರ ಸಿಂಗ್ ಗಂಗ್ವಾರ್ ಹೇಳಿದ್ದಾರೆ.
ಘಟನೆಯಲ್ಲಿ ಆರು ಮಂದಿ ಮೃತಪಟ್ಟಿರುವುದನ್ನು ಅವರು ದೃಢಪಡಿಸಿದ್ದಾರೆ.
ಸ್ಫೋಟದ ಮಾಹಿತಿ ಲಭ್ಯವಾದ ತಕ್ಷಣ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಕ್ಕೆ ಧುಮುಕಿದೆ.
ಎಲ್ಲ ಗಾಯಾಳುಗಳನ್ನು ತಕ್ಷಣವೇ ಆಸ್ಪತ್ರೆಗಳಿಗೆ ಸಾಗಿಸಿ ಸೂಕ್ತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಆದರೆ ಆ ವೇಳೆಗಾಗಲೇ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಗಂಗ್ವಾರ್ ವಿವರಿಸಿದ್ದಾರೆ.
10 ಮಂದಿ ಗಾಯಾಳುಗಳನ್ನು ರಕ್ಸಾಲ್ ಎಸ್‌ಆರ್‌ಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂವರು ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
Post a Comment