ಉಡುಪಿ : ಮಾನಸಿಕ ಖಿನ್ನತೆಗೆ ಒಳಗಾದ ಶಿಕ್ಷಕಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಹೆಜಮಾಡಿ ಸಮೀಪ ನಡೆದಿದೆ.
ತೋಕೂರು ತಪೋವನ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಜಯಂತಿ ಸದಾಶಿವ ಗಡಿಯಾರ್(೫೪) ಆತ್ಮಹತ್ಯೆ ಮಾಡಿಕೊಂಡವರು.
ತೋಕೂರು ಖಾಸಗಿ ಶಾಲೆಯ ಶಿಕ್ಷಕಿಯಾಗಿದ್ದ ಅವರು ಶಾಲೆಯಲ್ಲಿ ಅತ್ಯುತ್ತಮ ಶಿಕ್ಷಕಿಯೆಂದೇ ಕರೆಯಲ್ಪಡುತ್ತಿದ್ದರು.
ಅಲ್ಲದೇ ತನ್ನ ಸಹೋದರಿ ಮಾನಸಿಕ ಖಿನ್ನತೆಗೊಳಗಾಗಿದ್ದ ಸಂದರ್ಭ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದ ಜಯಂತಿಯವರು ಅವರು ಗುಣಮುಖರಾದ ಬಳಿಕ ತೀರಾ ಇತ್ತೀಚೆಗಷ್ಟೇ ಸ್ವಯಂ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
ಈ ಹಿನ್ನೆಲೆ ಚಿಕಿತ್ಸೆ ಪಡೆದಿದ್ದ ಅವರು 25 ದಿನಗಳ ಹಿಂದೆ ತನ್ನ ಮಗಳ ಮನೆ ಬೆಂಗಳೂರಿಗೆ ತೆರಳಿ ವಿಶ್ರಾಂತಿ ಪಡೆದಿದ್ದರು.
ಸೋಮವಾರವಷ್ಟೇ ಗಂಡನ ಜೊತೆಗೆ ಹೆಜಮಾಡಿಗೆ ಆಗಮಿಸಿದ್ದರು. ಬೆಳಿಗ್ಗೆ ನೋಡಿದಾಗ ನಾಪತ್ತೆಯಾಗಿದ್ದರು. ಮನೆಯ ಬಾವಿಯಲ್ಲಿ ಪರಿಶೀಲನೆ ಮಾಡಿದಾಗ ಅವರ ಪ್ರಜ್ಞಾಹೀನ ಸ್ಥಿತಯಲ್ಲಿರುವುದು ಕಂಡು ಬಂದಿತ್ತು.
ತಕ್ಷಣ ರಾಧಾಕೃಷ್ಣ ಬಾವಿಗೆ ಹಾರಿ ತಾಯಿಯನ್ನು ಹಿಡಿದು ಪರಿಶೀಲಿಸಿದಾಗ ಮೃತಪಟ್ಟಿರುವುದು ಕಂಡುಬಂದಿತ್ತು. ಇದೇ ಸಂದರ್ಭ ಪಕ್ಕದ ಟೋಲ್ ಸಿಬ್ಬಂದಿಗಳು ಆಗಮಿಸಿ ಇಬ್ಬರನ್ನೂ ಮೇಲಕ್ಕೆತ್ತಿದ್ದರು.
ತಕ್ಷಣ ಜಯಂತಿಯವರನ್ನು ಆಸ್ಪತ್ರೆಗೆ ಕೊಂಡೊಯ್ದ ವೇಳೆ ಅದಾಗಲೇ ಅವರು ಮೃತಪಟ್ಟಿದ್ದರು.ಈ ಬಗ್ಗೆ ಪಡುಬಿದ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
إرسال تعليق