ಮುಡಿಪು: ಬಂಟ್ವಾಳ ತಾಲೂಕಿನ ಮುಡಿಪು ಶ್ರೀ ಭಾರತಿ ಅನುದಾನಿತ ಶಾಲೆಯಲ್ಲಿ ಈ ಸಲದ ಗಾಂಧಿ ಜಯಂತಿ ಆಚರಣೆ ವಿಶೇಷಲಾಗಿ ಸಂಪನ್ನಗೊಂಡಿತು.
ಈ ವರ್ಷ ಅ.2ರಂದು ಭಾನುವಾರ ಎಂದಿನ ಹಾಗೆ ಮಕ್ಕಳು ಮತ್ತು ಶಿಕ್ಷಕರು ಮಾತ್ರ ಶಾಲೆಗೆ ಬಂದದ್ದಲ್ಲ... ಗ್ಲೌಸ್, ಕತ್ತಿ, ಪ್ಲಾಸ್ಟಿಕ್ ಚೀಲಗಳನ್ನು ಹಿಡಿದು ಹಳೆ ವಿದ್ಯಾರ್ಥಿಗಳು ಶಾಲೆಗೆ ಭೇಟಿ ನೀಡಿದರು. ಗಾಂಧಿ ಜಯಂತಿ ಪ್ರಯುಕ್ತ ಶಾಲೆಯಲ್ಲಿ ಸುಮಾರು 2 ಗಂಟೆಗಳ ಕಾಲ ಸ್ವಚ್ಛತಾ ಕಾರ್ಯಕ್ರಮದ ಮೂಲಕ ಶ್ರಮದಾನ ನಡೆಯಿತು.
ಶಾಲೆಯ ಪ್ರಸ್ತುತ ಸಿಬ್ಬಂದಿ ಸಹಕರಿಸಿದರು. ಶ್ರಮದಾನದ ಬಳಿಕ ಹಳೆ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಲಘು ಉಪಹಾರ ನೀಡಲಾಯಿತು. ಬಳಿಕ ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು, ಸಿಬ್ಬಂದಿ ಜೊತೆಗೆ ಗಾಂಧಿಜಯಂತಿ ಆಚರಣೆ, ಸಭಾ ಕಾರ್ಯಕ್ರಮ ನಡೆಯಿತು.
ಈ ಸಭೆಯಲ್ಲಿ ಹಳೆ ವಿದ್ಯಾರ್ಥಿಗಳ ಸಂಘದ ಸಲಹೆಗಾರ ಕೊಣಾಜೆ ಶಂಕರನಾರಾಯಣ ಭಟ್, ಭಾರತಿ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಭಟ್ ಕೊಡಕ್ಕಲ್ಲು, ಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಹಿರಿಯ ಶಿಕ್ಷಕ ರಾಮಕೃಷ್ಣ ಭಟ್, ಇಂಗ್ಲಿಷ್ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯಿನಿ ಶಕುಂತಳಾ ಶೆಟ್ಟಿ, ನಿವೃತ್ತ ಶಿಕ್ಷಕಿ ಶ್ರೀಮತಿ ಶಶಿಕಲಾ ಮತ್ತಿತರರು ಪಾಲ್ಗೊಂಡರು.
ಹಳೆ ವಿದ್ಯಾರ್ಥಿಗಳಾದ ಸಾಕ್ಷಾತ್ ಶೆಟ್ಟಿ, ಮಹೇಶ್ ಭಟ್, ನಿವೃತ್ತ ಸೈನಿಕ ಸಂತೋಷ್ ಕುಮಾರ್, ಸಾಮಾಜಿಕ ಜಾಲತಾಣ ಸಮಿತಿಯ ಸಂಚಾಲಕರಾದ ಅಸ್ಗರ್, ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ನಿಶ್ಚಲ್ ಶೆಟ್ಟಿ ಮತ್ತಿತರರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಮುಡಿಪಿನ ಶ್ರೀಭಾರತಿ ಅನುದಾನಿತ ಹಿ.ಪ್ರಾ.ಶಾಲೆ 1948ರಲ್ಲಿ ಸ್ಥಾಪನೆಯಾಗಿದ್ದು, 2023ರಲ್ಲಿ ಅಮೃತ ಮಹೋತ್ಸವ ಆಚರಿಸುವ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ರಚಿಸಿದ ಹಳೆ ವಿದ್ಯಾರ್ಥಿ ಸಂಘದ ಸಹಯೋಗದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
إرسال تعليق