ಬೆಂಗಳೂರು: ಆಸ್ತಿ ನೋಂದಣಿಗಾಗಿ ಜನ ಅಲೆಯುವುದನ್ನು ತಪ್ಪಿಸಲು ಕೇವಲ ಐದೇ ನಿಮಿಷಗಳ ನೋಂದಣಿ ಪದ್ಧತಿಯನ್ನು ಜಾರಿಗೊಳಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಅವರು, ಆಸ್ತಿನೋಂದಣಿಗಾಗಿ ರಾಜ್ಯಾದ್ಯಂತ ಜನರ ಅಲೆದಾಟ ನಡೆಯುತ್ತಲೇ ಇದ್ದು ಇದನ್ನು ತಪ್ಪಿಸಲು ಕಾವೇರಿ-2 ಎಂಬ ಕಾರ್ಯಕ್ರಮ ಜಾರಿಗೊಳಿಸಲಾಗುವುದು.
ಇದರಡಿ ಇನ್ನು ಮುಂದೆ ಆಸ್ತಿ ನೋಂದಣಿ ಮಾಡಿಸಲು ಜನ ಉಪನೋಂದಣಾಧಿಕಾರಿಗಳ ಕಚೇರಿಗೆ ಅಲೆದಾಡಬೇಕಿಲ್ಲ. ಬದಲಿಗೆ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಆಸ್ತಿ ನೋಂದಣಿ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿಯ ಜತೆ ದಾಖಲೆ ಸಲ್ಲಿಸಿದರೆ ಉಪನೋಂದಣಾಧಿಕಾರಿಗಳು ಅದನ್ನು ಪರಿಶೀಲಿಸುತ್ತಾರೆ.
ಅದರಲ್ಲಿ ಏನಾದರೂ ಕೊರತೆ ಇದ್ದರೆ, ತಪ್ಪಿದ್ದರೆ ಅರ್ಜಿದಾರರಿಗೆ ತಿಳಿಸುತ್ತಾರೆ ಎಂದು ವಿವರಿಸಿದರು. ನಂತರ ಸದರಿ ದಾಖಲೆ ಪತ್ರದ ನೋಂದಣಿಗೆ ಸಮಯಾವಕಾಶವನ್ನು ನಿಗದಿಗೊಳಿಸಲಾಗುತ್ತದೆ. ಹೀಗೆ ನಿಗದಿ ಮಾಡಿದ ಸಮಯಕ್ಕೆ ಸರಿಯಾಗಿ ಅರ್ಜಿದಾರರು ಹೋದರೆ ಅವರ ಹೆಬ್ಬೆಟ್ಟು ಗುರುತು ಮತ್ತು ಸಹಿ ಪಡೆದು ನೋಂದಣಿ ಪ್ರಕ್ರಿಯೆಯನ್ನು ಐದೇ ನಿಮಿಷಗಳಲ್ಲಿ ಪೂರ್ಣಗೊಳಿಸಲಾಗುತ್ತದೆ. ಇದೇ ನವೆಂಬರ್ 1 ರಿಂದ ಜಾರಿಗೊಳಿಸಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
إرسال تعليق