ಮಂಗಳೂರು: ಈ ಭೂಮಿ ಬರೀ ಮನುಷ್ಯರಿಗೆ ಮಾತ್ರ ಸೇರಿದ ಸೊತ್ತಲ್ಲ. ಇದರಲ್ಲಿ ಕ್ರಿಮಿ ಕೀಟಗಳಿಗೆ ಮತ್ತು ಪ್ರಾಣಿ ಪಕ್ಷಿಗಳಿಗೂ ಸಮಾನವಾದ ಹಕ್ಕು ಇದೆ. ಆದರೆ ಮನುಷ್ಯ ತನ್ನ ದುರಾಸೆಯಿಂದಾಗಿ ಎಲ್ಲವನ್ನೂ ತನಗೇ ಸೇರಬೇಕು ಎಂದು ತನ್ನ ಹಕ್ಕು ಪ್ರತಿಪಾದಿಸಿ ಗಿಡ ಮರಗಳನ್ನು ಕಡಿದು ಪರಿಸರ ಮಾಲಿನ್ಯಕ್ಕೆ ಕಾರಣವಾಗಿ ಭೂಮಿಯ ಫಲವತ್ತತೆಯನ್ನು ಹಾಳುಗೆಡವುತ್ತಿದ್ದಾನೆ. ನಾವು ಈ ಭೂಮಿಯನ್ನು ಬರಡು ಮಾಡದೆ, ಅದರಲ್ಲಿನ ಸಂಪನ್ಮೂಲಗಳನ್ನು ಜಾಗೃತಿಯಿಂದ ಬಳಸಿ, ಮುಂದಿನ ಪೀಳಿಗೆಗೂ ಫಲವತ್ತಾದ ಭೂಮಿಯನ್ನು, ಹಸಿರು ತುಂಬಿದ ಪರಿಸರವನ್ನು ಹಸ್ತಾಂತರಿಸಬೇಕು. ಇಲ್ಲವಾದಲ್ಲಿ ಭೂಗರ್ಭದಲ್ಲಿನ ಸಂಪನ್ಮೂಲ ಬರಿದಾಗಿ, ಭೂಮಿ ಬರಡಾಗಿ, ಅಂತರ್ಜಲ ಕುಸಿದು ಹೋಗಿ ಭೂಮಿ ಮರು ಭೂಮಿಯಾಗುವ ಎಲ್ಲಾ ಸಾಧ್ಯತೆಗಳು ಮುಕ್ತವಾಗಿದೆ ಎಂದು ಖ್ಯಾತ ಪರಿಸರ ಪ್ರೇಮಿ ಅರಣ್ಯ ಮಿತ್ರ ಪ್ರಶಸ್ತಿ ವಿಜೇತ ಶ್ರೀ ಮಾಧವ ಉಳ್ಳಾಲ ಅವರು ಅಭಿಪ್ರಾಯ ಪಟ್ಟರು.
ದಿನಾಂಕ 07-08-2022ರ ಭಾನುವಾರದಂದು ನಗರದ ಬಾರೆಬೈಲ್ ಬಡಾವಣೆಯ ಗ್ರೀನ್ ಎಕರೆ ಲೇಔಟ್ ನಲ್ಲಿ ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ನಡೆದ ವನಮಹೋತ್ಸವ ಮತ್ತು ಮನೆಗೊಂದು ಮರ, ಅಭಿಯಾನವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಬಡಾವಣೆಯ ಪ್ರತಿ ಮನೆಗೂ ಮಾವು, ಬೇವು, ಹಲಸು, ಹೆಬ್ಬಲಸು, ಪೇರಳೆ, ನೇರಳೆ ಮುಂತಾದ ಔಷಧೀಯ ಮತ್ತು ಹಣ್ಣಿನ ಸಸ್ಯಗಳನ್ನು ಹಂಚಿ ಅಭಿಯಾನಕ್ಕೆ ಚಾಲನೆ ನೀಡಿದರು. ಪ್ರತಿಯೊಬ್ಬರು ತಮ್ಮ ಮನೆಯ ಆವರಣದಲ್ಲಿ ಹಣ್ಣು ಮತ್ತು ಔಷಧೀಯ ಸಸ್ಯ ನೆಟ್ಟು ಬೆಳೆಸಿ ಪೋಷಿಸಿ ಎಂದು ಕರೆ ನೀಡಿದರು.
ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಅವರು ಪ್ರಾಸ್ತಾಮಿಕವಾಗಿ ಮಾತನಾಡಿ ವನಮಹೋತ್ಸವದ ಅವಶ್ಯಕತೆ ಬಗ್ಗೆ ಮನವರಿಕೆ ಮಾಡಿದರು. ಶ್ರೀ ಅರ್ತಿಕಜೆ ಸುಬ್ರಮಣ್ಯ ಭಟ್ ವಂದಿಸಿದರು. ಬಡಾವಣೆಯ ನಿವಾಸಿಗಳಾದ ರಾಜೇಂದ್ರ, ಶ್ರೀ ಕೃಷ್ಣ ಭಟ್, ಶಶಿಧರ್, ಮಹೇಶ್, ಪ್ರೋ.ಸುರೇಶ್‍ನಾಥ್, ದೇವದಾಸ್ ಪೈ, ಡಾ|| ದೀಪಕ್ ಪೈ, ಪರಿಸರ ಪ್ರೇಮಿ ಕೃಷ್ಣಪ್ಪ, ಅರುಣ್ ಕೊಯ್ಲೊ ಮತ್ತು ಡಾ|| ರಾಜಶ್ರೀ ಮೋಹನ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸುಮಾರು 25ಕ್ಕೂ ಹೆಚ್ಚು ಗಿಡಗಳನ್ನು ಗ್ರೀನ್ ಎಕರೆ ಲೇಔಟ್‍ನಲ್ಲಿ ನೆಡಲಾಯಿತು. ಕಳೆದ 5 ವರ್ಷಗಳಿಂದ ಬಾರೆಬೈಲ್ ಬಡಾವಣೆಯ ಜನರು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನದ ವತಿಯಿಂದ ನಿರಂತರವಾಗಿ ವನಮಹೋತ್ಸವ ಆಚರಿಸಿ, ಗಿಡ ನೆಟ್ಟು, ಬೆಳೆಸಿ ಪೋಷಿಸುತ್ತಿದ್ದಾರೆ.
إرسال تعليق