ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಉಡುಪಿ: ನಿವೇಶನ ಹಗರಣ ಸಂತ್ರಸ್ತರಿಗೆ ನ್ಯಾಯ ಕೊಡಿಸಿ

ಉಡುಪಿ: ನಿವೇಶನ ಹಗರಣ ಸಂತ್ರಸ್ತರಿಗೆ ನ್ಯಾಯ ಕೊಡಿಸಿಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಪ್ರದೇಶದಲ್ಲಿ ನಡೆದ ಅನಧಿಕೃತ ಬಡಾವಣೆ ಮತ್ತು ಏಕ ನಿವೇಶನ ವಿನ್ಯಾಸ ಹಗರಣದ ಸಂತ್ರಸ್ತರ ನೋವಿನ, ಗೋಳಿನ ಮೇಲೆ ಅದ್ಯಾವ ಸಂಭ್ರಮವನ್ನು ಆಚರಿಸುತ್ತಿದ್ದೀರಿ!? ನಿಮಗೆ ನೆನಪಿರಲಿ, ಕೊನೆಯ ಕ್ಷಣದವರೆಗೂ ಇಬ್ಬರು ಸಂತ್ರಸ್ತರು ನ್ಯಾಯಕ್ಕಾಗಿ ಪರಿತಪಿಸಿ ಅಸುನೀಗಿದ್ದಾರೆ! ಅವರ ಶವಪೆಟ್ಟಿಗೆಯ ಮೇಲೆ ಅದ್ಯಾವ ಸಂಭ್ರಮವನ್ನು ಆಚರಿಸುತ್ತಿದ್ದೀರಿ?!


ಹೌದು. ಉಡುಪಿ ಜಿಲ್ಲೆಯ ಉದಯಕ್ಕೂ ಈ ಹಗರಣಕ್ಕೂ ಸಂಬಂಧವಿದೆ. ನೂತನವಾಗಿ ಉದಯವಾದ ಉಡುಪಿ ಜಿಲ್ಲೆ ಮತ್ತು ಜಿಲ್ಲಾ ಕೇಂದ್ರ ಉಡುಪಿಯ ಅಭಿವೃದ್ಧಿಗಾಗಿ ಸುತ್ತಮುತ್ತಲಿನ ಆರೆಂಟು ಗ್ರಾಮಗಳನ್ನು ಪ್ರಾಧಿಕಾರದ ತೆಕ್ಕೆಗೆ ತೆಗೆದುಕೊಂಡು ಅಭಿವೃದ್ಧಿಗೊಳಿಸುವ ಸಮಯದಲ್ಲಿ ನಡೆದ ಹಗರಣವಿದು. ಅಪಾರ ದುರ್ಲಾಭ ಗಳಿಸುವ ಸಂಚು ಹೂಡಿ ಭೂಮಾಫಿಯಾದ ವ್ಯಕ್ತಿಗಳು ಜನಪ್ರತಿನಿಧಿಗಳ ಮತ್ತು ಕಂದಾಯ ಇಲಾಖೆಯ ಜತೆ ಷಾಮೀಲಾಗಿ ಮಾಡಿದ ವಂಚನೆಯಿದು! ಸಿಕ್ಕಸಿಕ್ಕ ಕಡೆ ಕೃಷಿ ಜಮೀನನ್ನು ಪರಿವರ್ತಿಸಿ ಬಡಾವಣೆ ನಿರ್ಮಿಸಿ ನಿವೇಶನಗಳನ್ನು ಮಾರಿದರು. ಅನಧಿಕೃತ, ಅಪೂರ್ಣ ಎಂದು ತಿಳಿದೂ ಕಂದಾಯ ಇಲಾಖೆ ಅವುಗಳನ್ನು ಅಮಾಯಕ ಜನರಿಗೆ ಮಾರಲು ವಂಚಕರಿಗೆ ಅನುಕೂಲ ಮಾಡಿಕೊಟ್ಟಿತು!


ಹಾಗಿದ್ದೂ ಪ್ರಾಧಿಕಾರವು ಸಂತ್ರಸ್ತರಾದ ನಮ್ಮಿಂದಲೇ ಅಕ್ರಮ ಸಕ್ರಮಕ್ಕೆ ಅರ್ಜಿ ಬರೆಯಲು ಒತ್ತಡ ಹಾಕುವ ಹಾಸ್ಯಾಸ್ಪದ ಮತ್ತು ಅಸಹ್ಯ ಕೆಲಸಕ್ಕೆ ಕೈಹಾಕಿತು. ಇದು ಪ್ರಜಾಪ್ರಭುತ್ವಕ್ಕೆ ಭೂಷಣವೇ!? ಉಸ್ತುವಾರಿ ಸಚಿವರಾಗಿ ಇದನ್ನು ಸರಿಪಡಿಸಲು ತಾವು ಯಾವ ಕ್ರಮ ಕೈಗೊಂಡಿದ್ದೀರಿ!? ಸಂತ್ರಸ್ತರಾದ ನಮಗೆ ನ್ಯಾಯ ಇನ್ನೂ ಮರೀಚಿಕೆಯಾಗಿದೆ. 15-20 ವರ್ಷ ಕಳೆದರೂ ನಮ್ಮ ನಿವೇಶನದಲ್ಲಿ ಮನೆಯನ್ನೂ ಕಟ್ಟಲಾಗದೆ, ನಿವೇಶನವನ್ನು ಮಾರಲೂ ಆಗದೆ ಸಂಕಟಪಡುತ್ತಿದ್ದೇವೆ.


ಮಾನ್ಯ ಸಚಿವರೇ, ದಯವಿಟ್ಟು ಅರಿತುಕೊಳ್ಳಿ, ಇದು ರಜತ ಸಂಭ್ರಮ ಅಲ್ಲ! ಇದು ನ್ಯಾಯ ನಿರಾಕರಣೆಯ, ವಂಚನೆಯ ಸೂತಕ! ನಿಮಗೆ ಆತ್ಮಸಾಕ್ಷಿ ಇದ್ದರೆ ದಯವಿಟ್ಟು ಜಿಲ್ಲೆಯ ಉಗಮದ ರಜತ ಸಂಭ್ರಮವನ್ನು ಆಚರಿಸಬೇಡಿ. ಬದಲಾಗಿ ನ್ಯಾಯ ನಿರೀಕ್ಷೆಯಲ್ಲಿಯೇ ನಿಧನರಾದ ಇಬ್ಬರು ಸಂತ್ರಸ್ತರ ನೆನಪಿನಲ್ಲಿ ಮತ್ತು ನಮ್ಮ ನೋವಿನ ನೆನಪಿನಲ್ಲಿ ಸೂತಕ ಆಚರಿಸಿ.


ಇದನ್ನೂ ಮೀರಿ ನೀವು ರಜತ ಸಂಭ್ರಮವನ್ನು ಆಚರಿಸಿದ್ದೇ ಆದರೆ ನಾವು ಶಾಂತಿಯುತ, ಮೌನ ಪ್ರತಿಭಟನೆಗೆ  ಇಳಿಯುತ್ತೇವೆ ಮತ್ತು ಅದರಲ್ಲಿ ಭಾಗಿಯಾಗದಂತೆ ಎಲ್ಲ ಗಣ್ಯರನ್ನು ಕೋರಿಕೊಳ್ಳುತ್ತೇವೆ.


-ಉಡುಪಿ ನಿವೇಶನ ಹಗರಣದಿಂದ ನೊಂದ ಸಂತ್ರಸ್ತರು

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

0 Comments

Post a Comment

Post a Comment (0)

Previous Post Next Post