ಮಂಗಳೂರು : ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವದ ಪ್ರಯುಕ್ತ ಮಂಗಳೂರಿನ ಇತಿಹಾಸ ಪ್ರಸಿದ್ಧ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆವರಣದಲ್ಲಿ ಪುಷ್ಪ ಹಾಗೂ ಧಾನ್ಯಗಳನ್ನು ಬಳಸಿ ರಚಿಸಿದ ತ್ರಿವರ್ಣ ಧ್ವಜದ ಚಿತ್ರಾಕೃತಿ ಎಲ್ಲರ ಗಮನಸೆಳೆಯುತ್ತಿದ್ದು, ಬರೋಬ್ಬರಿ 900 ಕೆ.ಜಿ ಧಾನ್ಯಗಳನ್ನು ಬಳಸಿ ಇದನ್ನು ರಚಿಸಿರುವುದು ಮತ್ತೊಂದು ದಾಖಲೆ.
ಕಲಾವಿದ ಹಾಗೂ ಛಾಯಾಗ್ರಾಹಕ ಪುನಿಕ್ ಶೆಟ್ಟಿ ಅವರ ನೇತೃತ್ವದಲ್ಲಿ ಗುರುಬೆಳದಿಂಗಳು ಸಮಿತಿಯ ಮೂವತ್ತು ಸದಸ್ಯರು ಸೇರಿ 38 ಫೀಟ್ ವೃತ್ತದಲ್ಲಿ ಈ ವಿಶಿಷ್ಟ ರಚನೆಯನ್ನು ನಿರ್ಮಿಸಿದ್ದಾರೆ.
300ಕೆಜಿ ಸಾಗು , 300ಕೆಜಿ ಹೆಸರುಕಾಳು, 300 ಕೆಜಿ ಕೆಂಪು ತೊಗರಿ ಬಳಸಿ ಒಟ್ಟು 900 ಕೆಜಿ ಧಾನ್ಯಗಳ ಜೊತೆಗೆ ಸಾಬಕ್ಕಿ, ಬೆಂಡೆಕಾಯಿ, ಮೂಲಂಗಿ, ಅಡಕೆ, ಕ್ಯಾರೆಟ್ ಮುಂತಾದ ತರಕಾರಿಗಳನ್ನೂ ಸೇರಿಸಿ ನವ ವಿಧಾನದಲ್ಲಿ ಸುಮಾರು 54 ಕಳಶವಿಟ್ಟು ಅಲಂಕರಿಸಿದ ಸುಂದರ ವಿಭಿನ್ನ ಶೈಲಿಯ ಈ ತಿರಂಗ ಚಿತ್ರಾಕೃತಿ ನೋಡಲು ಜನರು ಉತ್ಸಾಹದಿಂದ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ಕಲಾಸೊಬಗಿಗೆ 108 ಬಾಳೆ ಎಲೆಯನ್ನೂ ಕೂಡಾ ಉಪಯೋಗಿಸಿ ಎಲ್ಲರ ಚಿತ್ತ ಅದರತ್ತ ಆಕರ್ಷಿಸುವಂತೆ ಮಾಡಿದ ಈ ವಿಭಿನ್ನ ಚಿತ್ರಾಕೃತಿಗೆ ಉಪಯೋಗಿಸಿದ ಚೆಂಡು ಹೂ ಮತ್ತಷ್ಟು ಮೆರುಗು ನೀಡುತ್ತಿದೆ.
ತಾಜಾ ತರಕಾರಿ, ಧಾನ್ಯ ಹಾಗೂ ಹೂಗಳನ್ನು ಬಳಸಿ ಅಮೃತಮಹೋತ್ಸವದ ಶುಭ ಘಳಿಗೆಯಲ್ಲಿ ನಿರ್ಮಿಸಿದ ಈ ಚಿತ್ರಾಕೃತಿ ಬರೋಬ್ಬರಿ ಅಂದಾಜು ಸಾವಿರ ಕೆ.ಜಿ ತೂಗುತ್ತದೆ.
Post a Comment