ಉಪ್ಪಳ: ಧರ್ಮತ್ತಡ್ಕ ಶ್ರೀ ದುರ್ಗಾ ಪರಮೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 76ನೆಯ ಸ್ವಾತಂತ್ರ್ಯ ಮಹೋತ್ಸವವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಆಚರಿಸಲಾಯಿತು.
ಹೈಯರ್ ಸೆಕೆಂಡರಿ ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ದ್ವಜಾರೋಹಣ ಗೈದರು. ಶಾಲಾ ಮಕ್ಕಳು ವಿವಿಧ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಸಂಚರಿಸಿ ಸಂಭ್ರಮದ ಆಚರಣೆಯ ಮೆರುಗನ್ನು ಹೆಚ್ಚಿಸಿದರು.
ನಂತರ ಜರಗಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀ ಎನ್ ಸುಬ್ರಾಯ ಭಟ್ "ಸಮರ ವೀರರ ಬಲಿದಾನದ ಫಲಿತಾಂಶವೇ ಇಂದಿನ ನಮ್ಮ ಸ್ವಾತಂತ್ಯ; ಇದನ್ನು ಅತಂತ್ರವಾಗಲು ಬಿಡಬಾರದು, ಸ್ವಾತಂತ್ರ್ಯ ಸಿಗುವುದರ ಹಿಂದಿನ ನಮ್ಮ ಹಿರಿಯರ ತ್ಯಾಗವನ್ನು ಇಂದಿನ ಮಕ್ಕಳು ಅರಿತು ಗೌರವಿಸಬೇಕು" ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮಕ್ಕೆ ಆಗಮಿಸಿದ ನಿವೃತ್ತ ಸೈನಿಕರಾದ "ಶ್ರೀ ಜಿ ಅಪ್ಪಯ್ಯ ಮಣಿಯಾಣಿ" ಇವರು- "ಭಾರತದ ವೀರ ಯೋಧರ ತ್ಯಾಗ ಬಲಿದಾನಗಳು, ಅವರ ಬದುಕಿನ ಮಾರ್ಗ ನಮಗೆ ಆದರ್ಶವಾಗಬೇಕು, ಭವಿಷ್ಯದಲ್ಲಿ ಹೆಚ್ಚು ಹೆಚ್ಚು ಯುವಕರು ಸೇನೆಯನ್ನು ಸೇರಿ ರಾಷ್ಟ್ರ ಸೇವೆಯನ್ನು ಗೈಯುವಲ್ಲಿ ಮನ ಮಾಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಗಣ್ಯ ವ್ಯಕ್ತಿ, ಕೃಷಿಕ " ಶ್ರೀ ಸುಧಾಕರ ಪಾರಿಂಜೆ" ಇವರು ಶುಭ ಹಾರೈಸಿದರು. ಈರ್ವರನ್ನೂ ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.
ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಶ್ರೀ ಇಬ್ರಾಹಿಂ ಎನ್ ಅಧ್ಯಕ್ಷೀಯ ನುಡಿಗಳನ್ನಾಡಿದರು. ಪ್ರಾಂಶುಪಾಲ ಶ್ರೀ ಎನ್ ರಾಮಚಂದ್ರ ಭಟ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವ್ಯವಸ್ಥಾಪಕರಾದ ಶ್ರೀ ಎನ್ ಶಂಕರ ನಾರಾಯಣ ಭಟ್ ಶುಭ ಹಾರೈಸಿದರು.ಅಭ್ಯಾಗತರ ಕಿರು ಪರಿಚಯವನ್ನು ಶ್ರೀಮತಿ ವಿಚೇತ ಬಿ ಹಾಗೂ ಶ್ರೀಮತಿ ಉಷಾಪದ್ಮ ವಾಚಿಸಿದರು.
ಈ ವೇಳೆಯಲ್ಲಿ, ಕೋವಿಡ್ ಸಂದಿಗ್ಧತೆಯ ಕಾಲದಲ್ಲಿ ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು, ಪ್ರಸ್ತುತವೂ ಹವ್ಯಾಸವಾಗಿ ಅದನ್ನು ಮುಂದುವರಿಸುತ್ತಿರುವ ಶಾಲಾ ವಿದ್ಯಾರ್ಥಿ "ಅದ್ವಿತ್" ನನ್ನು ಗಣ್ಯರ ಸಮ್ಮುಖದಲ್ಲಿ ಅಭಿನಂದಿಸಿ ಸನ್ಮಾನಿಸಲಾಯಿತು.ಈತನ ಆಸಕ್ತಿ,ಪರಿಶ್ರಮದ ಕುರಿತಾದ ವರದಿ ದೃಶ್ಯ ಮಾದ್ಯಮಗಳಲ್ಲಿ ಈಗಾಗಲೇ ಬಿತ್ತರಗೊಂಡಿದ್ದವು. ಶ್ರೀಮತಿ ಶ್ವೇತಕುಮಾರಿ ಇವರು ಈತನ ಕುರಿತಾದ ವಿವರವನ್ನು ವಾಚಿಸಿದರು.
ಎಪ್ಪತ್ತೈದರ ಭಾರತದ ಸ್ವಾತಂತ್ಯ ಅಮೃತ ಮಹೋತ್ಸವದ ಪ್ರಯುಕ್ತ ಸಮಾಜ ವಿಜ್ಞಾನ ಕ್ಲಬ್, ಆರ್ಟ್ಸ್ ಕ್ಲಬ್ ವತಿಯಿಂದ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಈ ಸಂದರ್ಭದಲ್ಲಿ ಅತಿಥಿಗಳ ಮೂಲಕ ಬಹುಮಾನವನ್ನು ವಿತರಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು. ನೃತ್ಯ, ಭಾಷಣ, ದೇಶಭಕ್ತಿಗೀತೆ ಮುಂತಾದವುಗಳ ಮೂಲಕ ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವದ ಆಚರಣೆಯಲ್ಲಿ ಕಳೆಮೂಡಿಸಿದರು. ವಿದ್ಯಾರ್ಥಿಗಳಾದ ರಾಮ್ ಸ್ವರೂಪ್ ಆಳ್ವ ಹಾಗೂ ಪ್ರವೀಕ್ಷಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿನಿಯರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯ ಶ್ರೀ ಇ ಎಚ್ ಗೋವಿಂದ ಭಟ್ ಸ್ವಾಗತಿಸಿ, ಶಿವನಾರಾಯಣ ಭಟ್, ಪ್ರಶಾಂತ ಹೊಳ್ಳ ಎನ್ ಹಾಗೂ ಶಶಿಧರ ಕೆ ನಿರೂಪಿಸಿದರು. ಶ್ರೀಮತಿ ಸುನೀತಾ ಕೆ ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق