ಉಜಿರೆ: ಪ್ರತಿಯೊಬ್ಬ ವ್ಯಕ್ತಿಯೂ ಒಂದು ಕೌಶಲ್ಯವನ್ನು ಹೊಂದಿರಲೇಬೇಕು, ಮಾತ್ರವಲ್ಲ ಅದರಲ್ಲಿ ಮುಂದುವರಿಯುವ ಪ್ರಬಲವಾದ ಇಛ್ಚಾಶಕ್ತಿ ಮಾತ್ರ ಆತನನ್ನು ಸ್ವಾವಲಂಬಿಯನ್ನಾಗಿಸುತ್ತದೆ. ಈ ಜಗತ್ತಿನಲ್ಲಿ ಮನುಷ್ಯನೊಬ್ಬನನ್ನು ಬಿಟ್ಟು ಉಳಿದವೆಲ್ಲವೂ ಸ್ವಾವಲಂಬಿಗಳೇ, ಉದ್ಯೋಗಂ ಪುರುಷ ಲಕ್ಷಣಂ ಎನ್ನುತ್ತಿದ್ದ ನಾವು ಉದ್ಯೋಗಂ ಸ್ತ್ರೀ ಲಕ್ಷಣಂ ಎನ್ನಬೇಕಿದೆ. ಸ್ವಾವಲಂಬೀ ಮಹಿಳೆ ಮಾತ್ರ ಬಲಿಷ್ಠ ಮಹಿಳೆಯಾಗಲು ಸಾಧ್ಯ, ಮಹಿಳೆಯರಾಗಿ ನಮ್ಮಲ್ಲಿ ಸಕಾರಾತ್ಮಕ ಭಾವನೆಗಳು ಹೆಚ್ಚಾದರೆ ಮಾತ್ರ ಪ್ರಯತ್ನ ಮುಖೇನ ನಮ್ಮ ಸಾಮರ್ಥ್ಯವನ್ನು ಅರಿಯಲು ಸಾಧ್ಯ. ಮಹಿಳೆ ಮನೆಗಷ್ಟೇ ಸೀಮಿತವಾಗಿದ್ದ ಕಾಲದಲ್ಲಿ ಮಹಿಳಾ ಸ್ವ ಸಹಾಯ ಸಂಘಗಳ ಸ್ಥಾಪನೆಯ ಮೂಲಕ ಅವರಲ್ಲಿಯೂ ಸಾಮರ್ಥ್ಯವಿದೆ ಎಂಬುದನ್ನು ತೋರಿಸಿಕೊಡುವಲ್ಲಿ ಗ್ರಾಮಾಭಿವೃದ್ಧಿ ಯೋಜನೆ ಯಶಸ್ವಿಯಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದ ಅಧ್ಯಕ್ಷರಾದ ಡಾ| ಹೇಮಾವತಿ ವಿ. ಹೆಗ್ಗಡೆ ರವರು ಅಭಿಪ್ರಾಯಪಟ್ಟರು.
ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ (ರಿ.) ಮತ್ತು ರುಡ್‍ಸೆಟ್ ಸಂಸ್ಥೆ ಉಜಿರೆಯ ಸಹಯೋಗದಲ್ಲಿ ನಡೆದ 1 ದಿನದ ಸ್ವ ಉದ್ಯೋಗ ಪ್ರೇರಣಾ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ ರಾಜ್ಯಮಟ್ಟದಲ್ಲಿ ಜ್ಞಾನವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ರುಡ್‍ಸೆಟ್ ಸಂಸ್ಥೆಯ ಮುಖಾಂತರ ಮಹಿಳೆಯರಿಗೆ ಸ್ವ ಉದ್ಯೋಗದ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆಯನ್ನು ರುಡ್‍ಸೆಟ್ ಸಂಸ್ಥೆ ಉಜಿರೆಯಲ್ಲಿ ನೀಡಿದರು .
ಮಾತೃಶ್ರೀ ಡಾ| ಹೇಮಾವತಿ ವಿ. ಹೆಗ್ಗಡೆ ಯವರ ಆಶಯದಂತೆ ಜ್ಞಾನವಿಕಾಸದ ಮೂಲಕ ಮಹಿಳೆಯರಲ್ಲಿ ಸ್ವ ಉದ್ಯೋಗದ ಚಿಂತನೆ ಮೂಡಿಸಲು ನಡೆದ ಈ ಕಾರ್ಯಕ್ರಮದಲ್ಲಿ ಶ್ರೀ ಅನಿಲ್ ಕುಮಾರ್, ಮುಖ್ಯ ನಿರ್ವಹಣಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.) ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ರುಡ್‍ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಎಂ. ಸುರೇಶ್‍ರವರು ಅತಿಥಿಗಳನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಜ್ಞಾನವಿಕಾಸ ವಿಭಾಗದ ನಿರ್ದೇಶಕರು, ಯೋಜನಾಧಿಕಾರಿ, ಪ್ರಾದೇಶಿಕ ಸಮನ್ವಯಾಧಿಕಾರಿ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಹಿರಿಯ ಉಪನ್ಯಾಸಕರಾದ ಶ್ರೀಮತಿ ಅನಸೂಯರವರು ಕಾರ್ಯಕ್ರಮ ನಿರೂಪಿಸಿದರೆ, ಶ್ರೀ ಸತೀಶ್ ಶೆಟ್ಟಿ, ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ. ಟ್ರಸ್ಟ್ (ರಿ.), ದಕ್ಷಿಣ ಕನ್ನಡ–1 ರವರು ವಂದಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ಸಹಕರಿಸಿದರು. ಒಂದು ದಿನದ ಈ ಪ್ರೇರಣಾ ಶಿಬಿರದಲ್ಲಿ 101 ಮಂದಿ ಭಾಗವಹಿಸಿ ಪ್ರಯೋಜನ ಪಡೆದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
إرسال تعليق