ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಸಚಿವ ಸುನೀಲ್ ಕುಮಾರ್ ಅವರಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಸಚಿವ ಸುನೀಲ್ ಕುಮಾರ್ ಅವರಿಂದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಅಭಿನಂದನೆ

ಧರ್ಮಕ್ಷೇತ್ರಗಳು ಜನಮಂಗಳ ಕಾರ್ಯಗಳಿಗೆ ಪ್ರೇರಣೆ ನೀಡುತ್ತವೆ.


ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಜನತೆಯ ಪರವಾಗಿ ಸಚಿವ ಸುನೀಲ್ ಕುಮಾರ್ ಮಂಗಳವಾರ ಬೀಡಿನಲ್ಲಿ ಅಭಿನಂದನೆಗಳೊಂದಿಗೆ ಗೌರವಾರ್ಪಣೆ ಮಾಡಿದರು.


ಉಜಿರೆ: ಧರ್ಮಕ್ಷೇತ್ರಗಳು ಧರ್ಮಪ್ರಭಾವನೆ, ಆಧ್ಯಾತ್ಮಿಕ ಜಾಗೃತಿ ಹಾಗೂ ಸಾಮಾಜಿಕ ಸಂಘಟನೆಯೊಂದಿಗೆ ಜನಮಂಗಳ ಕಾರ್ಯಗಳಿಗೆ ಪ್ರೇರಣೆ ನೀಡುತ್ತವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.


ಪ್ರಧಾನಿಯವರಿಂದ ರಾಜ್ಯಸಭಾ ಸದಸ್ಯರಾಗಿ ನಾಮನಿರ್ದೇಶನಗೊಂಡಿರುವ ಹೆಗ್ಗಡೆಯವರನ್ನು ಮಂಗಳವಾರ ಧರ್ಮಸ್ಥಳದಲ್ಲಿ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಕಾರ್ಕಳ ವಿಧಾನ ಸಭಾ ಕ್ಷೇತ್ರದ ಜನತೆಯ ಪರವಾಗಿ ಸಚಿವ ಸುನೀಲ್ ಕುಮಾರ್ ಅಭಿಮಾನಿಗಳೊಂದಿಗೆ ಬಂದು ಭಕ್ತಿಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ ಸಂದರ್ಭ ಹೆಗ್ಗಡೆಯವರು ಮಾತನಾಡಿದರು.


1982 ರಲ್ಲಿ ಧರ್ಮಸ್ಥಳದಲ್ಲಿ ನಡೆದ ಭಗವಾನ್ ಬಾಹುಬಲಿ ಸ್ವಾಮಿಯ ಪ್ರಥಮ ಮಹಾಮಸ್ತಕಾಭಿಷೇಕದ ಸವಿನೆನಪಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಉಜಿರೆಯಲ್ಲಿ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರವನ್ನು ಪ್ರಾರಂಭಿಸಲಾಯಿತು.


ಗ್ರಾಮಾಭಿವೃದ್ಧಿ ಯೋಜನೆಯಿಂದ ನೆಲ, ಜಲ, ಹಾಗೂ ಪ್ರಾಕೃತಿಕ ಸಂಪನ್ಮೂಲಗಳನ್ನು ಬಳಸಿ ಸ್ವಾವಲಂಬಿ ಜೀವನಕ್ಕೆ ಪ್ರೋತ್ಸಾಹ, ಪ್ರೇರಣೆ ಮತ್ತು ಮಾರ್ಗದರ್ಶನದೊಂದಿಗೆ ಗ್ರಾಮರಾಜ್ಯದ ಮೂಲಕ ರಾಮರಾಜ್ಯ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ರಾಜ್ಯಮಟ್ಟದಲ್ಲಿ ಯೋಜನೆಯ 45,000 ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ.


ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರದ 588 ಶಾಖೆಗಳು ದೇಶದೆಲ್ಲೆಡೆ ಸೇವೆ ಸಲ್ಲಿಸುತ್ತಿದ್ದು ನಿರುದ್ಯೋಗ ಸಮಸ್ಯೆ ನಿವಾರಣೆಗೆ ಅಮೂಲ್ಯ ಕೊಡುಗೆ ನೀಡುತ್ತಿವೆ.


ಧರ್ಮಸ್ಥಳದಲ್ಲಿ ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ನ್ಯಾಯದಾನ ಎಂಬ ಚತುರ್ವಿಧ ದಾನಗಳು ನಿತ್ಯೋತ್ಸವವಾಗಿವೆ. ಅಭಯದಾನದ ಮೂಲಕ ನೊಂದವರ ಭಯ, ಆತಂಕ, ಗೊಂದಲ ನಿವಾರಿಸಿ ಧೈರ್ಯ ಮತ್ತು ಆತ್ಮವಿಶ್ವಾಸ ತುಂಬಲಾಗುತ್ತದೆ. ಇದು ಧರ್ಮಸ್ಥಳ ಕ್ಷೇತ್ರದ ಮಹಾತ್ಮೆಯಾಗಿದೆ.


ಬಾಹುಬಲಿ ಮಹಾಮಸ್ತಕಾಭಿಷೇಕ, ಭಜನಾ ತರಬೇತಿ ಕಮ್ಮಟ, ಸತ್ಯನಾರಾಯಣ ಪೂಜೆ, ದೇವಾಲಯಗಳ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಮೊದಲಾದ ಧಾರ್ಮಿಕ ಕಾರ್ಯಗಳು ಸಾಮಾಜಿಕ ಸಂಘಟನೆಯೊಂದಿಗೆ ಜನರಲ್ಲಿ ಧರ್ಮಜಾಗೃತಿ, ಶಿಸ್ತು, ಸಂಯಮ, ಸ್ವಚ್ಛತೆ, ಪರೋಪಕಾರ, ಸೇವಾ ಮನೋಭಾವ ಮೊದಲಾದ ಮಾನವೀಯ ಮೌಲ್ಯಗಳನ್ನು ಮೂಡಿಸುತ್ತವೆ ಎಂದು ಹೆಗ್ಗಡೆಯವರು ಹೇಳಿ, ಧರ್ಮಸ್ಥಳದ ಅಭಿಮಾನಿಗಳು ಹಾಗೂ ಸರ್ವರ ಪ್ರೀತಿ-ವಿಶ್ವಾಸ ಮತ್ತು ನಿರೀಕ್ಷೆಯಂತೆ ರಾಷ್ಟ್ರಮಟ್ಟದಲ್ಲಿ ಸೇವೆ ಮಾಡುವುದಾಗಿ ಆಶಯ ವ್ಯಕ್ತಪಡಿಸಿದರು.


ಕಾರ್ಕಳಕ್ಕೂ, ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧವಿದ್ದು, ಕಾರ್ಕಳದ ಮಂಗಳಪಾದೆಯಲ್ಲಿ ರೆಂಜಾಳ ಗೋಪಾಲ ಶೆಣೈ ಅವರಿಂದ ಬಾಹುಬಲಿ ಮೂರ್ತಿಯನ್ನು ರೂಪಿಸಿ ಧರ್ಮಸ್ಥಳಕ್ಕೆ ತಂದು ಪ್ರತಿಷ್ಠಾಪನೆ ಮಾಡಲಾಗಿದೆ. ಕಾರ್ಕಳದಲ್ಲಿ ಸಚಿವ ಸುನೀಲ್ ಕುಮಾರ್‍ರ ಸಮಾಜ ಸೇವೆಯನ್ನು ಶ್ಲಾಘಿಸಿ ಅವರಿಗೆ ಹೆಗ್ಗಡೆಯವರು ಉಜ್ವಲ ಭವಿಷ್ಯವನ್ನು ಹಾರೈಸಿದರು. 


ಸಚಿವರೊಂದಿಗೆ ಕಾರ್ಕಳದಿಂದ ಸುಮಾರು ಮುನ್ನೂರು ಮಂದಿ ಅಭಿಮಾನಿಗಳು ಬಂದು ಗೌರವ ಸಲ್ಲಿಸಿದರು.

web counter

0 Comments

Post a Comment

Post a Comment (0)

Previous Post Next Post