ಬೆಂಗಳೂರು: ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಅವರ ಸೇವಾವಧಿಯನ್ನು ಮತ್ತೊಂದು ವರ್ಷ ವಿಸ್ತರಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಅವರು 2023ರರ ಜುಲೈ 19ರವರೆಗೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿಯವರು ಡಾ. ಸಿ ಎನ್ ಮಂಜುನಾಥ್ ಅವರ ಸಾಧನೆ ಮತ್ತು ಆಡಳಿತ ವೈಖರಿ ಪರಿಗಣಿಸಿ ಅವರ ಸೇವಾವಧಿಯನ್ನು ಮುಂದಿನ ಒಂದು ವರ್ಷಕ್ಕೆ ವಿಸ್ತರಿಸಿದ್ದಾರೆ.
ತಮ್ಮ ಸೇವಾವಧಿ ವಿಸ್ತರಣೆ ಮಾಡಿದ ಹಿನ್ನೆಲೆ ಮುಖ್ಯಮಂತ್ರಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರಿಗೆ ಡಾ. ಸಿ ಎನ್ ಮಂಜುನಾಥ್ ಅಭಿನಂದನೆ ತಿಳಿಸಿದ್ದಾರೆ.
ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿರುವ ಡಾ.ಸಿ.ಎನ್. ಮಂಜುನಾಥ್ ಅವರು ನಿವೃತ್ತಿಯಾಗುತ್ತಿರುವುದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಸಿಬ್ಬಂದಿಗೆ ಅಪಾರವಾದ ನೋವನ್ನುಂಟು ಮಾಡಿದೆ.
ಅದಕ್ಕೆ ಸಿಬ್ಬಂದಿ ವರ್ಗವು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು ಮಂಜುನಾಥ್ ಅವರನ್ನೇ ನಿರ್ದೇಶಕರನ್ನಾಗಿ ಮುಂದುವರಿಸುವಂತೆ ಮನವಿ ಮಾಡಿದ್ದರು. ನ್ಯಾಷನಲ್ ಮೆಡಿಕಲ್ ಕೌನ್ಸಿಲ್ ಪ್ರಕಾರ 70 ವರ್ಷದವರೆಗೆ ಸೇವೆ ಸಲ್ಲಿಸಲು ಅವಕಾಶ ಕೊಡಿ ಎಂದು ಕೇಳಿಕೊಂಡಿದ್ದರು.
Post a Comment