ಬೆಂಗಳೂರು: ಗಾಂಧಿ ಶಾಂತಿ ಪ್ರತಿಷ್ಠಾನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ, ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜು, ಗಾಂಧಿ ಅಧ್ಯಯನ ಕೇಂದ್ರ, ಅಮರ ಬಾಪು ಚಿಂತನ ಸಹಯೋಗದಲ್ಲಿ ಸತ್ಯವ್ರತ, ಶ್ಯಾಮರಾಜ ಅಯ್ಯಂಗಾರ್, ಟಿ.ಆರ್.ಶಾಮಣ್ಣ, ಸೀತಾ ಶರಣ್ ಶರ್ಮ ಸ್ಮಾರಕ ದತ್ತಿ ಉಪನ್ಯಾಸವನ್ನು ಜೂನ್ 18 ಶನಿವಾರದಂದು ನಗರದ ಶೇಷಾದ್ರಿಪುರಂನ ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಭಾಂಗಣ ಆಯೋಜಿಸಲಾಗಿತ್ತು.
ಹಿರಿಯ ಶಿಕ್ಷಣ ತಜ್ಞ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಹಾಗೂ ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌ. ಪ್ರಧಾನ ಕಾರ್ಯದರ್ಶಿ, ನಾಡೋಜ ಡಾ. ವೂಡೇ.ಪಿ. ಕೃಷ್ಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ಗಾಂಧಿ ಕಲ್ಪನೆಯ ಭಾರತ ಇಂದು ಸಾಧ್ಯವಾಗಿದೇಯೇ? ನವಭಾರತ ನಿರ್ಮಾಣದಲ್ಲಿ ಗಾಂಧಿ ಚಿಂತನೆಗಳ ಪಾತ್ರ ಬಹಳ ದೊಡ್ಡದು. ಗ್ರಾಮಸ್ವರಾಜ್ಯದ ಕಲ್ಪನೆ ಮುಂದಿಟ್ಟು ಶ್ರೀಸಾಮಾನ್ಯನ ಬದುಕು ಹಸನಾಗಬೇಕು ಎಂದು ಆಶಿಸಿದ್ದ ಗಾಂಧಿ ವಿಚಾರಧಾರೆ ಇಂದಿಗೂ ಪ್ರಸ್ತುತ ಎಂದು ಅಭಿಪ್ರಾಯ ಪಟ್ಟರು.
`ವರ್ತಮಾನ ಭಾರತ ಮತ್ತು ಗಾಂಧಿ’ ವಿಷಯದ ಕುರಿತು ದತ್ತಿ ಉಪನ್ಯಾಸವನ್ನು ಕಲಬುರ್ಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ.ವಿಕ್ರಂ ವಿಸಾಜಿ ನೀಡುತ್ತ ‘ನನ್ನ ಜೀವನವೇ ನನ್ನ ಸಂದೇಶ’ ಎಂದು ನುಡಿದಂತೆ ನಡೆದ ಗಾಂಧಿ ಸತ್ಯಾಗ್ರಹ – ಅಹಿಂಸೆ ಎಂಬ ಎರಡು ತತ್ವಗಳಿಂದ ನೈತಿಕ ಮೌಲ್ಯಗಳ ಅರಿವನ್ನು ಉಂಟು ಮಾಡಿದರು. ಆತ್ಮಶುದ್ದಿಯಿಂದ ಬಾಳಲು ಅಂತರ್ ದೃಷ್ಠಿಹೊಂದಿ ಎಲ್ಲ ವಲಯಗಳ ಜನರಲ್ಲಿ ಸ್ವತಂತ್ರ ಆಲೋಚನಾಕ್ರಮದಿಂದ ವಿವೇಚಿಸಿ ಮುನ್ನಡೆಯಬೇಕೆಂದು ನಾವು ಜೀವನದಿಂದ ತಿಳಿಯಬಹುದು ಎಂದು ಹೇಳಿದರು.
ವಿಶೇಷಾಹ್ವನಿತರಾಗಿ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ ಭಾಗವಹಿಸಿ ಭವಿಷ್ಯದ ಅಪಾಯಗಳಿಗೆ ಗಾಂಧಿ ಚಿಂತನೆಗಳಲ್ಲಿ ಪರಿಹಾರವಿದೆ, ಗಾಂಧಿ- ಅಂಬೇಡ್ಕರ್ – ವಿವೇಕಾನಂದರ ಚಿಂತನೆಗಳನ್ನು ಓದುವುದರಿಂದ ವರ್ತಮಾನದ ಭಾರತ ಓದಿದಂತೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಗಾಂಧಿ ತತ್ವ ಪ್ರಸರಣದ ದ್ವಿಭಾಷಾ-ದ್ವೈಮಾಸಿಕ ಪತ್ರಿಕೆ ‘ಅಮರ ಬಾಪು ಚಿಂತನ’ದ ದಶಮಾನೋತ್ಸವ ವಿಶೇಷ ಸಂಚಿಕೆಯನ್ನು ವೇದಿಕೆ ಮೇಲಿನ ಗಣ್ಯರು ಬಿಡುಗಡೆ ಮಾಡಿದರು.
ಗಾಂಧೀ ಶಾಂತಿ ಪ್ರತಿಷ್ಠಾನದ ಅಧ್ಯಕ್ಷ ಜೀರಿಗೆ ಲೋಕೇಶ್ ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಗಾಂಧಿ ಶಾಂತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಸತ್ಯಮಂಗಲ ಮಹಾದೇವ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ.ಎನ್.ಎಸ್.ಸತೀಶ್, ಡಾ.ರಾಮಲಿಂಗೇಶ್ವರ (ಸಿಸಿರಾ) ಉಪಸ್ಥಿತರಿದ್ದರು. ಅನುಷಾ ನಾಡಿಗೇರ್ ತಂಡದಿಂದ ಪ್ರಾರ್ಥನೆ ನಡೆಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment