ಮಂಗಳೂರು: ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಭವನ ನಿರ್ಮಾಣ ಯೋಜನೆಗೆ ರಾಜ್ಯ ಸರಕಾರದಿಂದ 40 ಲಕ್ಷ ಬಿಡುಗಡೆಯಾಗಿದ್ದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಪ್ರೇಮಾನಂದ ಶೆಟ್ಟಿಯವರು ಆದೇಶ ಪತ್ರವನ್ನು ಸಂಘದ ಪ್ರಮುಖರಿಗೆ ಹಸ್ತಾಂತರಿಸಿದರು.
ಶ್ರೀ ಗೋಕರ್ಣನಾಥ ಪದವಿಪೂರ್ವ ಕಾಲೇಜಿನಲ್ಲಿ ಹಳೆ ವಿಧ್ಯಾರ್ಥಿ ಸಂಘದ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ಆದೇಶ ಪತ್ರ ಹಸ್ತಾಂತರಿಸಿ ಮಾತನಾಡಿದ ಶಾಸಕ ಕಾಮತ್, ಬ್ರಹ್ಮಶ್ರೀ ನಾರಾಯಣ ಗುರುಗಳು ಕಂಡ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದ ಮಕ್ಕಳ ಪ್ರಗತಿಯ ಆಶಯದೊಂದಿಗೆ ಪ್ರಾರಂಭಗೊಂಡ ಶ್ರೀ ಗೋಕರ್ಣನಾಥ ಪದವಿಪೂರ್ವ ಕಾಲೇಜು ನನ್ನಂತಹ ಅನೇಕ ಜನರ ಬದುಕನ್ನು ರೂಪಿಸಲು ಮಾರ್ಗದರ್ಶನ ಮಾಡಿದೆ ಎಂದು ಹೇಳಿದರು.
ಮಕ್ಕಳ ಶಿಕ್ಷಣ ಸಮಾನತೆಯ ಕುರಿತು ಕನಸು ಕಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯದಂತೆ ಗೋಕರ್ಣನಾಥ ಕಾಲೇಜು ಇಂದಿನ ವರೆಗೆ ಅದೆಷ್ಟೋ ವಿಧ್ಯಾರ್ಥಿಗಳ ಬದುಕಿನಲ್ಲಿ ಬೆಳಕು ಚೆಲ್ಲಿದೆ. ಯಾವ ಮಗುವೂ ಕೂಡ ಶಿಕ್ಷಣದಿಂದ ವಂಚಿತವಾಗಬಾರದು ಎಂಬ ಬ್ರಹ್ಮಶ್ರೀ ನಾರಾಯಣ ಗುರುಗಳ ಚಿಂತನೆಯಂತೆ ರಾಜ್ಯ ಸರಕಾರದಿಂದ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಭವನಕ್ಕೆ 40 ಲಕ್ಷ ಬಿಡುಗಡೆಗೊಳಿಸಲಾಗಿದೆ ಎಂದು ಶಾಸಕ ಕಾಮತ್ ಹೇಳಿದರು.
ಮೇಯರ್ ಪ್ರೇಮಾನಂದ ಶೆಟ್ಟಿ ಯವರು ಮಾತನಾಡಿ, ಸಾಮಾಜಿಕ ಸಮಾನತೆಯ ವಿಚಾರದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ಬದುಕನ್ನು ಮುಡಿಪಾಗಿಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವಗಳನ್ನು ಪರಿಪೂರ್ಣವಾಗಿ ಪಾಲಿಸಿ ಅನೇಕ ವಿಧ್ಯಾರ್ಥಿಗಳ ಜೀವನ ರೂಪಿಸಲು ಶ್ರೀ ಗೋಕರ್ಣನಾಥ ಪದವಿಪೂರ್ವ ಕಾಲೇಜು ಶ್ರಮಿಸಿದೆ. ಕಾಲೇಜು ಸಾಮಾಜಿಕ ಸಮಾನತೆ, ಶೈಕ್ಷಣಿಕ ಸಮಾನತೆಯ ಚಿಂತನೆಗಳ ಮೂಲಕ ವಿಧ್ಯಾರ್ಥಿಗಳ ಬದುಕನ್ನು ಕೆತ್ತುವ ಮೂಲಕ ದೇಶಕ್ಕೆ ಪ್ರಜ್ಞಾವಂತ ನಾಗರಿಕರನ್ನು ನೀಡುತ್ತಿದೆ. ಈ ನಿಟ್ಟಿನಲ್ಲಿ ಶ್ರೀ ವೆಂಕಟೇಶ್ವರ ಶಿವಭಕ್ತಿ ಯೋಗ ಸಂಘದ ಭವನ ನಿರ್ಮಾಣಕ್ಕೆ ರಾಜ್ಯ ಸರಕಾರದಿಂದ 40 ಲಕ್ಷ ಅನುದಾನ ಬಿಡುಗಡೆಗೊಳಿಸುವಲ್ಲಿ ಶ್ರಮಿಸಿದ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದರು.
ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಿಗೆ ಬೀಳ್ಕೊಡುಗೆ ಹಾಗೂ ಉತ್ತಮ ಸಾಧನೆಗೈದ ವಿಧ್ಯಾರ್ಥಿಗಳಿಗೆ ಸನ್ಮಾನ ನಡೆಯಿತು.
ಕಾರ್ಯಕ್ರಮದಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಕಾಲೇಜು ಆಡಳಿತ ಸಮಿತಿಯ ಉಪಾಧ್ಯಕ್ಷರಾದ ಶೇಖರ ಪೂಜಾರಿ, ಆಡಳಿತ ಸಮಿತಿಯ ಕಾರ್ಯದರ್ಶಿ ವಸಂತ ಕಾರಂದೂರು, ಗೋಕರ್ಣನಾಥ ಕಾಲೇಜಿನ ಮುಖ್ಯಸ್ಥರಾದ ಡಾ. ಉಮಪ್ಪ ಪೂಜಾರಿ, ಪ್ರಾಂಶುಪಾಲರಾದ ಡಾ. ಸುಜಯ್ ಸುಮರ್ಣ, ಹಳೆ ವಿಧ್ಯಾರ್ಥಿ ಸಂಘದ ಅಧ್ಯಕ್ಷೆ ಜಯಶ್ರೀ, ಗೌರವಾಧ್ಯಕ್ಷ ನಂದಗೋಪಾಲ ಶೆಣೈ, ಕಾರ್ಯದರ್ಶಿ ಅಶೋಕ್ ಎಂ.ಕೆ, ಖಜಾಂಜಿ ಪ್ರಸನ್ನ ಮಲ್ಯ, ನಿವೃತ್ತ ಪ್ರಾಧ್ಯಾಪಕರಾದ ಚಂದ್ರ ಕೆ, ತಾರಾ ಕುಮಾರಿ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
Post a Comment