ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಮಳೆಗಾಲದ ಪೂರ್ವ ಸಿದ್ದತಾ ಸಭೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಜಿಲ್ಲೆಯ ಸಮಾದೇಷ್ಟರಾದ ಡಾ. ಮುರಲೀ ಮೋಹನ್ ಚೂಂತಾರು ಇವರ ನೇತೃತ್ವದಲ್ಲಿ ಬುಧವಾರ (ಜೂನ್ 1) ಘಟಕಾಧಿಕಾರಿಗಳ ಸಭೆಯನ್ನು ನಡೆಸಲಾಯಿತು ಮತ್ತು ಪ್ರವಾಹ ರಕ್ಷಣಾ ತಂಡ ರಚನೆ ಮಾಡಲಾಯಿತು. ಪ್ರಾರಂಭದಲ್ಲಿ ಜೂನ್ ನಿಂದ ಪ್ರಾರಂಭವಾಗುವ ಮಾನ್ಸೂನ್ ಸಿದ್ಧತೆಯ ಬಗ್ಗೆ ಪ್ರತಿ ಘಟಕಗಳಲ್ಲಿ ಸಿಬ್ಬಂದಿಗಳನ್ನು ಗುರುತಿಸಿ ಸಿದ್ಧವಾಗಿರುವಂತೆ ಸೂಚಿಸಿದರು.
ಮಂಗಳೂರಿನ ತಾಲೂಕಿನ ಸಮುದ್ರದ ಕಿನಾರೆಗಳಾದ ಸೋಮೇಶ್ವರ, ಉಳ್ಳಾಲ, ಮೊಗವೀರ ಪಟ್ನ, ಪಣಂಬೂರು, ತಣ್ಣೀರುಬಾವಿ, ಸಸಿಹಿತ್ಲು, ಸುರತ್ಕಲ್ ಮತ್ತು ಫಾತಿಮಾ ಬೀಚ್ ಗಳಲ್ಲಿ ಗೃಹರಕ್ಷಕರನ್ನು ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಧಿಕಾರಿಗಳ ಆದೇಶದಂತೆ ಪ್ರತಿ ಬೀಚ್ ಗೆ 2 ಗೃಹರಕ್ಷಕರನ್ನು ನಿಯೋಜಿಸಲಾಗುವುದು ಎಂದು ಸಮಾದೇಷ್ಟರು ನುಡಿದರು. ನೆರೆ ಪೀಡಿತ ಪ್ರದೇಶಗಳಾದ ಉಪ್ಪಿನಂಗಡಿ, ಬೆಳ್ತಂಗಡಿ, ಸುಳ್ಯ, ಬಂಟ್ವಾಳ, ಮೂಲ್ಕಿ, ಕಡಬ ಪ್ರದೇಶಗಳಲ್ಲಿ ಗೃಹರಕ್ಷಕರು ಸನ್ನದ್ದರಾಗಿರುವಂತೆ ಘಟಕಾಧಿಕಾರಿಗಳಿಗೆ ಮತ್ತು ಗೃಹರಕ್ಷಕರಿಗೆ ಸೂಚಿಸಿದರು.
ಎಲ್ಲಾ ಘಟಕಗಳಲ್ಲಿಯೂ ಲೈಫ್ ಬಾಯ್, ಲೈಫ್ ಜಾಕೆಟ್, ರೋಪ್, ವುಡ್ ಕಟರ್, ಟಾರ್ಚ್ ಲೈಟ್ ಗಳನ್ನು ಸಿದ್ದಪಡಿಸಿ ಮುಂಜಾಗರೂಕತಿ ತೆಗೆದುಕೊಳ್ಳಲು ಘಟಕಧಿಕಾರಿಗಳಿಗೆ ಅದೇಶಿಸಿದರು. ಜೂನ್, ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಜಿಲ್ಲೆಯಾದ್ಯಂತ60 ಗೃಹರಕ್ಷಕರು ಪ್ರವಾಹ ರಕ್ಷಣಾ ತಂಡ ರಚಿಸಿ ಜನರ ಮತ್ತು ಆಸ್ತಿ ಪಾಸ್ತಿ ರಕ್ಷಣೆಗೆ ಸದಾ ಸನ್ನದ್ದರಾಗಿರಬೇಕು ಎಂದು ಸಮಾದೇಷ್ಟರಾದ ಡಾ || ಮುರಲೀ ಮೋಹನ್ ಚೂಂತಾರು ಅವರು ಕರೆ ನೀಡಿದರು.
ನುರಿತ ಈಜುಗಾರರನ್ನು ಗುರುತಿಸಲಾಗಿದ್ದು, ಜಿಲ್ಲಾಧಿಕಾರಿಗಳ ಆದೇಶದಂತೆ ಸರ್ವ ಸಿದ್ಧತೆಯನ್ನು ಮಾಡಲಾಗಿದೆ ಎಂದು ತಿಳಿಸಿದರು. ಸಾಕಷ್ಟು ಪೂರ್ವ ತಯಾರಿ ಮಾಡಿ ಮಾನಸಿಕವಾಗಿ ಸಿದ್ದವಾಗಿದ್ದಲ್ಲಿ ಮುಂಬರುವ ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ತಡೆಗಟ್ಟಬಹುದು ಮತ್ತು ಹಾನಿಯನ್ನು ಕಡಿತಗೊಳಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಡಲ ತೀರದಲ್ಲಿ ಪ್ರವಾಸಿಗರ ರಕ್ಷಣೆಗೂ, ಗೃಹರಕ್ಷಕರು ಬೀಚ್ ಗಾರ್ಡ್ ಗಳಾಗಿ ಕೆಲಸ ನಿರ್ವಹಿಸಲಿದ್ದಾರೆ. ಒಟ್ಟಿನಲ್ಲಿ ಜನರ ಮತ್ತು ಆಸ್ತಿ ಪಾಸ್ತಿ ರಕ್ಷಣೆಯಲ್ಲಿ ಗೃಹರಕ್ಷಕರ ಮತ್ತು ಪೌರರಕ್ಷಣಾ ಪಡೆ ಕಟಿಬದ್ಧವಾಗಿದೆ ಎಂದರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಪ ಸಮಾದೇಷ್ಟರಾದ ರಮೇಶ್, ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ ಶೇರಾ, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಕಡಬ ಘಟಕದ ಘಟಕಾಧಿಕಾರಿ ತೀರ್ಥೇಶ್ ಹಾಗೂ ಪ್ರವಾಹ ರಕ್ಷಣಾ ತಂಡದ 40 ಮಂದಿ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.
Post a Comment