ಮಂಗಳೂರು: "ಯಕ್ಷಗಾನ ಸಂಘವನ್ನು ನಿರಂತರ ನೂರು ವರ್ಷಗಳಿಂದ ನಡೆಸಿಕೊಂಡು ಬಂದದ್ದು ಅಚ್ಚರಿ ಹಾಗೂ ಸಂಭ್ರಮದ ಸಂಗತಿ. ದೇವಸ್ಥಾನದ ಪ್ರೋತ್ಸಾಹದಿಂದ ಇದು ಸಾಧ್ಯ. ಪ್ರತಿಫಲಾಪೇಕ್ಷೆ ಇಲ್ಲದೆ ಕಲಾ ಸೇವೆ ಮಾಡುವ ಹವ್ಯಾಸಿ ತಾಳಮದ್ದಳೆ ಕಲಾವಿದರ ಕೊಡುಗೆ ಸ್ಮರಣೀಯ" ಎಂದ ಹಿರಿಯ ಅರ್ಥಧಾರಿ, ಪ್ರಸಂಗಕರ್ತ, ಸಾಹಿತಿ ಪೊಳಲಿ ನಿತ್ಯಾನಂದ ಕಾರಂತರು ವಾಗೀಶ್ವರೀ ಸಂಘದಲ್ಲಿ ನಾಲ್ಕು ದಶಕಗಳ ಹಿಂದೆ ಅರ್ಥ ಹೇಳಿದ್ದ ನೆನಪನ್ನು ಹಂಚಿಕೊಂಡರು.
ಮಂಗಳೂರಿನ ವಾಗೀಶ್ವರೀ ಯಕ್ಷಗಾನ ಕಲಾವರ್ಧಕ ಸಂಘದ ಶತಮಾನೋತ್ಸವ ಪ್ರಶಸ್ತಿ- 11ರಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಹಿರಿಯ ವಕೀಲ, ಕಲಾಪೋಷಕ ದಯಾನಂದ ರೈ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಲಾವಿದ ಅರ್ಥಧಾರಿ, ಭಾಗವತ ರಮೇಶ ಆಚಾರ್ಯ ಕಾವೂರು ಅವರನ್ನು ಸಂಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸಂಜಯ ಕುಮಾರ್ ರಾವ್ ಅಭಿನಂದಿಸಿದರು.
ಸಂಘಟಕ ಲಿಂಗಪ್ಪ ಸೀತಾದೇವ್ ಅವರು ಶ್ರೀ ವಾಗೀಶ್ವರೀ ಶತಮಾನೋತ್ಸವದ ಸರಣಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೃಷ್ಣಪ್ಪ ಕರ್ಕೇರ ಸಂಸ್ಮರಣೆ:
ಉರ್ವಾಸ್ಟೋರಿನ ಶ್ರೀ ಶಾರದಾಂಬಾ ಯಕ್ಷಗಾನ ಸಂಘವನ್ನು ಐದು ದಶಕಗಳ ಕಾಲ ನಡೆಸಿದ್ದ ಸಂಘಟಕ, ಭಾಗವತ, ಯಕ್ಷಗಾನ ಪ್ರಸಂಗ ಸಂಗ್ರಾಹಕ ಕೃಷ್ಣಪ್ಪ ಕರ್ಕೇರ ಅವರ ಸಂಸ್ಮರಣೆ ಮಾಡಲಾಯಿತು.
ಕರ್ನಾಟಕ ಯಕ್ಷಗಾನ ಅಕಾಡಮಿಯ ಸಹಭಾಗಿತ್ವದಲ್ಲಿ 50 ಭಾನುವಾರ ನಿರಂತರ "ಸಂಮಾನ, ಸಂಸ್ಮರಣೆ, ತಾಳಮದ್ದಳೆ "ಯು ಮಹಾಮಾಯಾ ದೇವಸ್ಥಾನದ ಅಂಗಣದಲ್ಲಿ ನಡೆಯುತ್ತಿದೆ.
ಅಧ್ಯಕ್ಷ ಶ್ರೀನಾಥ್ ಪ್ರಭು, ಶತಮಾನೋತ್ಸವ ಸಮುತಿಯ ಅಧ್ಯಕ್ಷ ಸಿ.ಎಸ್ ಭಂಢಾರಿ, ಸುರಭಿ ಸಂಸ್ಥೆಯ ಶಿವಪ್ರಸಾದ್ ಪ್ರಭು, ಕೃಷ್ಣಪ್ಪ ಕರ್ಕೇರರ ಸುಪುತ್ರಿ ಹರಿಣಾಕ್ಷಿ ಪ್ರವೀಣ್, ಹಿರಿಯ ಅರ್ಥಧಾರಿ ಪ್ರಭಾಕರ ಕಾಮತ್ ಉಪಸ್ಥಿತರಿದ್ದರು.
ಯಕ್ಷಗುರು ಅಶೋಕ ಬೋಳೂರು ಅಭಿನಂದನಾ ಪತ್ರ ವಾಚಿಸಿದರು. ಪ್ರಧಾನ ಸಂಚಾಲಕ ಯಕ್ಷಗಾನ ಅಕಾಡಮಿ ಸದಸ್ಯ ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.
ಪುತ್ತೂರು ನಾರಾಯಣ ಹೆಗ್ಡೆ ನೆನಪು:
ಶ್ರೀ ವಿಶ್ವನಾಥ ಯಕ್ಷಗಾನ ಮಂಡಳಿ, ಬದವಿದೆ, ಬೈಕಂಪಾಡಿ ಸಂಘದವರು ನಡೆಸಿಕೊಟ್ಟ "ಸುಗ್ರೀವ ಸಖ್ಯ- ವಾಲಿ ವಧೆ" ತಾಳಮದ್ದಳೆಯಲ್ಲಿ ವಾಲಿಯ ಪಾತ್ರ ನಿರ್ವಹಿಸಿದ ಪುತ್ತೂರು ದೇವರಾಜ ಹೆಗ್ಡೆಯವರು ತಮ್ಮ ಕಂಠ ಸಿರಿಯಿಂದ ಕೀರ್ತಿಶೇಷ ಕಲಾವಿದ ಪುತ್ತೂರು ನಾರಾಯಣ ಹೆಗ್ಡೆ ಯವರ ಮಾತುಗಾರಿಕೆಯನ್ನು ನೆನಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق