ಮಂಗಳೂರು: ಮಾನವೀಯತೆಯಿಂದ ಶಾಂತಿ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಾಚರಣೆ ನಡೆಸುವ ರೆಡ್ ಕ್ರಾಸ್ ಸಂಸ್ಥೆಯ ಮೂಲ ತತ್ವಗಳಾದ ಮಾನವೀಯತೆ, ನಿಷ್ಪಕ್ಷಪಾತ, ತಟಸ್ಥತೆ, ಸ್ವಾತಂತ್ರ್ಯ, ಸ್ವಯಂಸೇವೆ, ಏಕತೆ ಮತ್ತು ವಿಶ್ವ ವ್ಯಾಪಕತೆಗಳನ್ನು ಜೀವನದಲ್ಲಿ ನಾವು ಅಳವಡಿಸಿಕೊಂಡಲ್ಲಿ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಸಬಹುದು. ಜಾತಿ, ಮತ, ಭಾಷೆ, ಧರ್ಮ, ಜನಾಂಗ, ಪಂಗಡ, ಪಕ್ಷ ಎಂದು ಹೊಡೆದಾಡುವ ನಾವುಗಳು ಮೊದಲು ಮಾನವೀಯತೆಯನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯ ಕಾಲಘಟ್ಟದಲ್ಲಿ ಬಂದು ನಿಂತಿದ್ದೇವೆ. ಇನ್ನೂ ಕಾಲ ಮಿಂಚಿಲ್ಲ. ತಕ್ಷಣ ಕಾರ್ಯ ಪ್ರವೃತ್ತರಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮಾದೇಷ್ಟರಾದ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯ ಮಾಜಿ ಸಭಾಪತಿಗಳಾದ ಡಾ|| ಮುರಲೀ ಮೋಹನ್ ಚೂಂತಾರು ನುಡಿದರು.
ನಗರದ ಮೇರಿಹಿಲ್ ನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳದ ಕಚೇರಿಯಲ್ಲಿ ಅಂತರಾಷ್ಟ್ರೀಯ ರೆಡ್ ಕ್ರಾಸ್ ದಿನದ ಅಂಗವಾಗಿ ಇಂದು (ಮೇ 8) ಸ್ವಚ್ಛತಾ ಅಭಿಯಾನ ಮತ್ತು ಗಿಡ ನೆಡುವ ಕಾರ್ಯಕ್ರಮ ಲಯನ್ಸ್ ಕ್ಲಬ್ ಮಂಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣಾ ಪಡೆಯ ವತಿಯಿಂದ ಉಳ್ಳಾಲ ಘಟಕದ ಸಹಕಾರದೊಂದಿಗೆ ಜರುಗಿತು. ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಬಿ. ಸತೀಶ್ ರೈ ಮಾತನಾಡಿ ಪರಿಸರದ ಸ್ವಚ್ಛತೆಗೆ ಹೆಚ್ಚಿನ ಆಧ್ಯತೆ ನೀಡಬೇಕು ಎಂದು ನುಡಿದರು.
ಲಯನ್ಸ್ ಸಂಸ್ಥೆ ಈ ನಿಟ್ಟಿನಲ್ಲಿ ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು. ಖ್ಯಾತ ಪರಿಸರ ಪ್ರೇಮಿ ಮಾಧವ ಉಳ್ಳಾಲ್ ಅವರು ಮಾತನಾಡಿ ಗಿಡ ನೆಟ್ಟು ಪರಿಸರ ಉಳಿಸದಿದ್ದಲ್ಲಿ ಮನುಷ್ಯನಿಗೆ ಉಳಿಗಾಲವಿಲ್ಲ. ಜನರು ಇನ್ನಾದರೂ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಹಾಗೂ ಜಾಗ್ರತ ರಾಗಬೇಕು ಎಂದು ಎಚ್ಚರಿಕೆ ನೀಡಿದರು. ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್, ಸುನೀಲ್, ದಿವ್ಯಾ, ದಿವಾಕರ್, ದುಷ್ಯಂತ್, ಮಹೇಶ್ ಮುಂತಾದವರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق