ಮಂಗಳೂರು: ಮಕ್ಕಳ ಬಾಲ್ಯದ ಶಿಕ್ಷಣ ಪಡೆಯುವ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿಪಡಿಸುವುದು ಮತ್ತು ಅಗತ್ಯವಿರುವ ಕಡೆಗಳಲ್ಲಿ ನೂತನ ಅಂಗನವಾಡಿ ಕೇಂದ್ರ ಸ್ಥಾಪಿಸುವ ಕಡೆಗೆ ವಿಶೇಷ ಗಮನ ನೀಡಲಾಗಿದೆ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ಕೊಡಿಯಾಲಬೈಲ್ ವಾರ್ಡಿನಲ್ಲಿ ನವೀಕರಣಗೊಳಿಸಿದ ಅಂಗನವಾಡಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಳೆಯ ಮಕ್ಕಳು ಪ್ರಾಥಮಿಕ ಶಿಕ್ಷಣ ಪಡೆಯುವ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ಧಿಪಡಿಸುವ ಮೂಲಕ ಶಿಕ್ಷಣ ವ್ಯವಸ್ಥೆಯಲ್ಲಿನ ಬದಲಾವಣೆಗೆ ಯೋಜನೆ ರೂಪಿಸಲಾಗುವುದು. ಈಗಾಗಲೇ ಕೆಲವೆಡೆಗಳಲ್ಲಿ ನೂತನ ಅಂಗನವಾಡಿ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಅಂಗನವಾಡಿ ಕೇಂದ್ರಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಮಕ್ಕಳ ಪ್ರಾಥಮಿಕ ಶಿಕ್ಷಣ ಅವರ ಮುಂದಿನ ಭವಿಷ್ಯದ ಮೊದಲ ಹೆಜ್ಜೆ. ಹಾಗಾಗಿ ಅವುಗಳ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಈಗಾಗಲೇ ಸ್ಮಾರ್ಟ್ ಸ್ಕೂಲ್ ಪರಿಕಲ್ಪನೆಯನ್ನು ಸರಕಾರಿ ಶಾಲೆಯಲ್ಲಿ ಸಾಕಾರಗೊಳಿಸಿದಂತೆ ಅಂಗನವಾಡಿ ಕೇಂದ್ರವನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು ಎಂದರು.
ಸ್ಥಳೀಯ ಕಾರ್ಪೋರೇಟರ್ ಸುಧೀರ್ ಶೆಟ್ಟಿಯವರು ಮಾತನಾಡಿ, ಕದ್ರಿ ದೇವಸ್ಥಾನ ನ್ಯೂರೋಡ್ ನಲ್ಲಿ ಅಂಗನವಾಡಿ ನವೀಕರಣಕ್ಕಾಗಿ ಅನುದಾನ ಬಿಡುಗಡೆಗೊಳಿಸಲು ಶಾಸಕರಲ್ಲಿ ಮನವಿ ಮಾಡಿಕೊಂಡ ಕೂಡಲೆ 12 ಲಕ್ಷ ಬಿಡುಗಡೆಗೊಳಿಸಿದ್ದಾರೆ. ಅಂಗನವಾಡಿ ಅಭಿವೃದ್ಧಿಯಿಂದ ಈ ಭಾಗದ ಮಕ್ಕಳಿಗೆ ಹಾಗೂ ಪೋಷಕರಿಗೆ ಸಾಕಷ್ಟು ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಕದ್ರಿ ದಕ್ಷಿಣ ವಾರ್ಡಿನ ಕಾರ್ಪೋರೇಟರ್ ಕದ್ರಿ ಮನೋಹರ್ ಶೆಟ್ಟಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ಪಾಪ ಭೂವಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾಧಿಕಾರಿ ಶೋಭಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಜುಳಾ, ಕದ್ರಿ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಸಂಘದ ಅಧ್ಯಕ್ಷರಾದ ಸಚಿನ್ ಕದ್ರಿ, ಕದ್ರಿ ಶ್ರೀ ಕೃಷ್ಣ ಜನ್ಮ ಮಹೋತ್ಸವ ಅಧ್ಯಕ್ಷರಾದ ದಿನೇಶ್ ದೇವಾಡಿಗ, ಕದ್ರಿ ಗುಡ್ಡೆ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷರಾದ ವಾಸುದೇವ, ನವೋದಯ ಮಹಿಳಾ ಮಂಡಳಿ, ನವೋದಯ ಅಂಗನವಾಡಿ, ನವೋದಯ ಸಲಹಾ ಸಮಿತಿ ಮತ್ತು ಬಾಲವಿಕಾಸ ಸಮಿತಿ ಇದರ ಪ್ರಮುಖರುಗಳಾದ ಮಮತಾ ದೇವದಾಸ್, ಪ್ರದೀಪ್ತಾ ಅಜಿತ್, ರಾಜೇಶ್ವರಿ, ಸವಿತಾ, ಸಾವಿತ್ರಿ, ಸುಜಾತ ಎಸ್, ಇಂದಿರಾ ಕುಮಾರಿ ಎಂ,ಎನ್, ಜಯಲಕ್ಷ್ಮಿ ಬಿ.ಆರ್, ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق