ಮಂಗಳೂರು: ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳ ಕಾರ್ಯದರ್ಶಿ ಡಾ|ಯಶೋವರ್ಮರಿಗೆ ಇಂದು ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಲ್ಕೂರ ಪ್ರತಿಷ್ಠಾನ ದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನ ನಿಕಟಪೂರ್ವ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ದಿವಂಗತರ ಭಾವ ಚಿತ್ರಕ್ಕೆ ಪುಷ್ಪ ನಮನಗೈದು, ನುಡಿ ನಮನ ಸಲ್ಲಿಸಿದರು.
ವಿಶ್ವದಾದ್ಯಂತ ಭಾರತೀಯ ಜೀವನ ಮೌಲ್ಯಗಳಿಗೆ ಬೆಳಕನ್ನು ತಂದಿತ್ತ ಶ್ರೀ ಕ್ಷೇತ್ರ ಧರ್ಮಸ್ಥಳದ ಮಂಜುನಾಥೇಶ್ವರ ವಿದ್ಯಾಸಂಸ್ಥೆಗಳನ್ನು ಉತ್ತಮ ಆಡಳಿತಗಾರನಾಗಿ ಅತ್ಯಂತ ಪರಿಣಾಮಕಾರಿಯಾಗಿ ಮುನ್ನಡೆಸಿದ ಕೀರ್ತಿ ಯಶೋವರ್ಮರಿಗೆ ಸಲ್ಲಬೇಕು, ಅವರ ಉದಾತ್ತ ಚಿಂತನೆಗಳು, ಸಾತ್ವಿಕ ಬದುಕಿನ ಪುಟಗಳು ಸ್ಮರಣೀಯವಾಗಿತ್ತು, ಕನ್ನಡ ಸಾಹಿತ್ಯ ಪರಿಷತ್ ನ ತಾಲೂಕು ಅಧ್ಯಕ್ಷರಾಗಿ ಮಾತ್ರವಲ್ಲ ಸಾಂಸ್ಕೃತಿಕ ವಲಯದಲ್ಲೂ ಅವರ ವಸ್ತುನಿಷ್ಠ ವಾದ ಮಾರ್ಗದರ್ಶನ ಶ್ಲಾಘನೀಯವಾಗಿತ್ತು ಎಂದು ಕಲ್ಕೂರ ಸ್ಮರಿಸಿದರು.
ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಯಶೋವರ್ಮರ ಕುರಿತಾದ ತಮ್ಮ ಅಂತರಾಳದ ಅನುಭವವನ್ನು ಹಂಚಿಕೊಳ್ಳುವ ಮೂಲಕ ನುಡಿ ನಮನ ಸಲ್ಲಿಸಿದರು. ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು, ಸೀತಾರಾಮ ಭಟ್ ದಂಡತೀರ್ಥ, ನಿವೃತ್ತ ಅಧಿಕಾರಿ ಎಸ್.ಎ.ಪ್ರಭಾಕರ ಶರ್ಮ, ಕರ್ಣಾಟಕ ಬ್ಯಾಂಕ್ ನ ಜಿ.ಎಂ.ನಿರ್ಮಲ್ ಕುಮಾರ್, ಡಾ.ಕೆ.ವಿ.ರಾವ್, ಪ್ರೊ|ಎಂ.ಬಿ.ಪುರಾಣಿಕ್, ನಂದಳಿಕೆ ಬಾಲಚಂದ್ರ ರಾವ್, ರತ್ನಾಕರ ಜೈನ್ ಮೊದಲಾದವರು ನುಡಿ ನಮನದೊಂದಿಗೆ ಪುಷ್ಪಾಂಜಲಿಗೈದರು.
ಜಿ.ಕೆ.ಭಟ್ ಸೇರಾಜೆ, ಸುಧಾಕರ ರಾವ್ ಪೇಜಾವರ, ಚಂದ್ರಶೇಖರ ಮಯ್ಯ, ವಿಜಯಲಕ್ಷ್ಮಿ ಬಿ.ಶೆಟ್ಟಿ, ಡಾ.ಮಂಜುಳಾ ಶೆಟ್ಟಿ, ಜ್ಞಾನಚಂದ್ರ ಕದ್ರಿ, ವೀಣಾ ಕೆ., ಅಖಿಲಾ, ವಿವೇಕ್ ಶೆಟ್ಟರ್, ಗಂಗಾಧರ್ ಬಿಜೈ ಮತ್ತಿತರರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment