ಮುಡಿಪು: ಕನ್ನಡ ಸಾಹಿತ್ಯ ಪರಿಷತ್ತು ತನ್ನ ಮೌಲಿಕ ಪ್ರಕಟಣೆಗಳ ಮೂಲಕ ಶೈಕ್ಷಣಿಕ ನೆಲೆಯನ್ನು ಹಾಗೂ ಸಾಹಿತ್ಯ ಸಮ್ಮೇಳನಗಳ ಮೂಲಕ ಸಾಮಾಜಿಕ ಸಂಘಟನಾತ್ಮಕ ನೆಲೆಯನ್ನು ಬಲಗೊಳಿಸಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕ್ರತಿಯ ಘನತೆಯನ್ನು ಹೆಚ್ಚಿಸಿದೆ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ ಚಿನ್ನಪ್ಪ ಗೌಡ ಹೇಳಿದರು.
ಅವರು ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಳ್ಳಾಲ ತಾಲ್ಲೂಕು ಘಟಕದ ವತಿಯಿಂದ ಗುರುವಾರ ದೇರಳಕಟ್ಟೆಯ ದಿ ಕಂಫರ್ಟ್ ಇನ್ ಸಭಾಂಗಣದಲ್ಲಿ ನಡೆದ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಚರಣೆ ಮತ್ತು ಸನ್ಮಾನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದ ಎಲ್ಲಾ ಗ್ರಾಮ ಗ್ರಾಮಗಳ ಜನರು ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾಗಿ ಸಾಹಿತ್ಯ ಪರಿಷತ್ತನ್ನು ಬಲಗೊಳಿಸಬೇಕು, ಕಳೆದ ಒಂದು ಶತಮಾನಗಳಿಂದ ಪರಿಷತ್ತು ಕನ್ನಡದ ಅಭಿಮಾನವನ್ನು ಜನಸಾಮಾನ್ಯರಲ್ಲಿ ಬಿತ್ತುವ ಕಾರ್ಯವನ್ನು ನಡೆಸಿದೆ ಎಂದರು.
ಸಮಾರಂಭವನ್ನು ಪದ್ಮಶ್ರೀ ಹರೇಕಳ ಹಾಜಬ್ಬ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಉಳ್ಳಾಲ ತಾಲ್ಲೂಕು ಕಸಾಪ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಬಡತನವಿದ್ದರೂ ಎಳೆಯ ಮಕ್ಕಳು ಕನ್ನಡ ಕಲಿಯಬೇಕೆನ್ನುವ ಆಸೆಯಿಂದ ಹಣ್ಣನ್ನು ಮಾರಿದ ದುಡ್ಡಿನಿಂದ ಶಾಲೆಗೆ ಸಹಾಯ ಮಾಡಿದೆ. ಅದು ಇಷ್ಟು ದೊಡ್ಡ ಗೌರವವನ್ನು ತಂದು ಕೊಡುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ನನಗೆ ಸಿಕ್ಕಿದ ಗೌರವ ಕನ್ನಡ ಶಾಲೆಗೆ ಸಿಕ್ಕಿದ ಗೌರವ ಎಂದರು.
ನಿಟ್ಟೆ ಪರಿಗಣಿತ ವಿಶ್ವವಿದ್ಯಾನಿಲಯದ ಮಾನವಿಕ ವಿಭಾಗದ ಮುಖ್ಯಸ್ಥೆ ಡಾ. ಸಾಯಿಗೀತಾ ಅವರು 'ಸಾಹಿತ್ಯ ಪರಿಷತ್ತು ಮತ್ತು ಸಮಾಜ' ಎಂಬ ವಿಷಯದಲ್ಲಿ ಉಪನ್ಯಾಸ ನೀಡಿ ಕರಾವಳಿಯ ತುಳು ನಾಡು ಕನ್ನಡವನ್ನು ಪೋಷಿಸಿದೆ. ತುಳು, ಕನ್ನಡ ಎರಡೂ ಭಾಷೆಗಳು ಪರಸ್ಪರ ಗೌರವದಿಂದ ಬದುಕುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ನಿಗಮದ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಇವರು ಸಾಹಿತ್ಯ ಪರಿಷತ್ತಿನ ಸದಸ್ಯತನ ಅಭಿಯಾನವನ್ನು ಚುರುಕುಗೊಳಿಸಿ ಸಾಮಾನ್ಯ ಜನರೂ ಕನ್ನಡದ ಕಾರ್ಯಗಳಲ್ಲಿ ಭಾಗವಹಿಸುವಂತೆ ಮಾಡಬೇಕು ಎಂದು ಹೇಳಿದರು.
ದಕ ಜಿಲ್ಲಾ ಕಸಾಪ ಉಳ್ಳಾಲ ತಾಲೂಕು ಘಟಕದ ಅಧ್ಯಕ್ಷ ಡಾ. ಧನಂಜಯ ಕುಂಬ್ಳೆ, ಕಾರ್ಯದರ್ಶಿಗಳಾದ ರವೀಂದ್ರ ರೈ ಕಲ್ಲಿಮಾರು, ಎಡ್ವರ್ಡ್ ಲೋಬೋ, ಕೋಶಾಧಿಕಾರಿ ಲಯನ್ ಚಂದ್ರಹಾಸ ಶೆಟ್ಟಿ ಉಪಸ್ಥಿತರಿದ್ದರು. ಉಳ್ಳಾಲ ತಾಲೂಕು ಘಟಕದ ಪೆರ್ಮನ್ನೂರು ಗ್ರಾಮ ಸಂಚಾಲಕಿ ವಿಜಯಲಕ್ಷ್ಮಿ ಕಟೀಲು ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق