ಮಂಗಳೂರು: ಯೋಗ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ದಣಿದ ಮನಸ್ಸಿಗೆ ಮತ್ತು ದೇಹಕ್ಕೆ ಹೊಸ ಚೈತನ್ಯ ನೀಡುವ ಶಕ್ತಿ ಯೋಗ ಧ್ಯಾನ ಮತ್ತು ಪ್ರಾಣಾಯಾಮಕ್ಕೆ ಇದೆ. ಸಣ್ಣ ಮಕ್ಕಳಿಂದ ಹಿಡಿದು ಮುದುಕರ ವರೆಗೆ ಎಲ್ಲರೂ ಯೋಗ ಮಾಡಬಹುದು. ಇಂದಿನ ಒತ್ತಡದ ದಾವಂತದ ಜೀವನಶೈಲಿಗೆ ಯೋಗ ಅತೀ ಅವಶ್ಯಕ. ಪ್ರತಿ ಮನೆಯಲ್ಲಿ ಹಿರಿಯರು, ಕಿರಿಯರು, ಮಹಿಳೆಯರು ಎಲ್ಲರೂ ಯೋಗ ಮಾಡಬೇಕು. ಮನೆ ಮನೆಯಲ್ಲಿ ಯೋಗ ಬೆಳಗಬೇಕು. ಹಾಗಿದ್ದಲ್ಲಿ ಸಮಾಜದ ಸ್ವಾಸ್ಥ್ಯ ಹೆಚ್ಚುವುದರಲ್ಲಿ ಸಂಶಯವೇ ಇಲ್ಲ ಎಂದು ಆರೋಗ್ಯ ಭಾರತಿ ಇದರ ಕ್ಷೇತ್ರ ಸಂಘಟನಾ ಕಾರ್ಯದರ್ಶಿ ಮತ್ತು ಅಖಿಲ ಭಾರತ ಸ್ವಸ್ಥ ಗ್ರಾಮ ಪ್ರಮುಖ್ ಶ್ರೀ ಸದಾಶಿವ್‍ಜಿ ಅವರು ನುಡಿದರು.
ನಗರದ ಲೋಹಿತ್ ನಗರದಲ್ಲಿರುವ ಭಾರತ್ ಆಶ್ರಯ ವಸತಿ ಸಂಕೀರ್ಣದಲ್ಲಿ ಕಳೆದ ಒಂದು ತಿಂಗಳಿನಿಂದ ಆರೋಗ್ಯ ಭಾರತಿ ಮಂಗಳೂರು ವಿಭಾಗ ಮತ್ತು ಚೂಂತಾರು ಸರೋಜಿನಿ ಭಟ್ ಪ್ರತಿಷ್ಠಾನ(ರಿ) ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಮಹಿಳೆಯರಿಗೆ ಯೋಗ ಶಿಬಿರ ನಡೆಯುತ್ತಿದ್ದು, ಮೇ 12 ರಂದು ಈ ಶಿಬಿರದ ಸಮಾರೋಪ ಸಮಾರಂಭ ಜರುಗಿತು.
ಯೋಗ ಶಿಕ್ಷಕಿ ಶ್ರೀಮತಿ ಸುಮಾ ಯೋಗ ತರಬೇತಿ ನೀಡಿದರು. ಸುಮಾರು 15 ಮಂದಿ ಮಹಿಳೆಯರು ಮತ್ತು ಮಕ್ಕಳು ಈ ಶಿಬಿರದ ಪ್ರಯೋಜನ ಪಡೆದರು. ಇದೇ ಸಂದರ್ಭದಲ್ಲಿ ಯೋಗ ಶಿಕ್ಷಕಿ ಸುಮಾ ಅವರನ್ನು ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು. ಆರೋಗ್ಯಭಾರತಿ ಇದರ ಹಿರಿಯರಾದ ಡಾ|| ಸತೀಶ್ ರಾವ್, ಡಾ|| ಈಶ್ವರ ಪಲಾದೆ ಮತ್ತು ಪುರುಷೋತ್ತಮ ದೇವಸ್ಯ ಇವರ ಮಾರ್ಗದರ್ಶನದಲ್ಲಿ ಈ ಶಿಬಿರ ಜರುಗಿತು.
ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ) ಮಂಗಳೂರು ಇದರ ಕಾರ್ಯದರ್ಶಿ ಡಾ|| ಮುರಲೀ ಮೋಹನ್ ಚೂಂತಾರು ಸಮಾರೋಪ ಸಮಾರಂಭದ ಸ್ವಾಗತ ಭಾಷಣ ಮಾಡಿದರು. ಪ್ರದೀಪ್ ಅವರು ವಂದನಾರ್ಪಣೆ ಮಾಡಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment