ಮಂಗಳೂರು: ಕಾರ್ಕಳದ ಆರು ವರ್ಷದ ಮಗು ಮಾನ್ವಿ ಕಾಮತ್ ಅಪರೂಪದ ಅನುವಶೀಯ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಅವಳನ್ನು ಬದುಕಿಸಲು ಆರೋಗ್ಯವಂತ ವ್ಯಕ್ತಿಯ ದೇಹದೊಳಗಿನ ಕಾಂಡ ಕೋಶ {ಸ್ಟೆಮ್ ಸೆಲ್}ಅಗತ್ಯವಿದ್ದು, ಅದಕ್ಕಾಗಿ ಮಂಗಳೂರಿನ ಎರಡು ಕಡೆ ಭಾನುವಾರ ಸ್ಟೆಮ್ ಸೆಲ್ ಅಭಿಯಾನ ಕೈಗೊಳ್ಳಲಾಯಿತು.
ಬೆಳಿಗ್ಗೆ ಮಂಗಳೂರಿನ ಭಾರತ್ ಮಾಲ್ ಮತ್ತು ಸಂಜೆ ಕದ್ರಿ ಪಾರ್ಕಿನಲ್ಲಿ ಯೂತ್ ಆಫ್ ಜಿಎಸ್ ಬಿ ಕಾರ್ಯಕರ್ತರು ಡಿಕೆಎಂಎಸ್ ಬಿಎಂಎಸ್ ಟಿ ಸಹಯೋಗದಲ್ಲಿ ಅಭಿಯಾನ ನಡೆಸಿದರು. ನಮ್ಮ ಬಾಯೊಳಗಿನ ಸಲೈವಾ ತೆಗೆದುಕೊಂಡು ಅದನ್ನು ಜರ್ಮನಿಗೆ ಕಳುಹಿಸಿ ಅಲ್ಲಿ ಪರೀಕ್ಷೆಗೆ ಒಳಪಡಿಸಿ ಅದು ಮಗುವಿನ ದೇಹಕ್ಕೆ ಹೊಂದಾಣಿಕೆಯಾದರೆ ಮುಂದಿನ ವೈದ್ಯಕೀಯ ಪ್ರಕ್ರಿಯೆಗಳನ್ನು ಮಾಡಿ ಮಾನ್ವಿಯನ್ನು ಉಳಿಸಬಹುದು ಎಂದು ಕಾರ್ಯಕರ್ತರು ಜನರಿಗೆ ಮನವರಿಕೆ ಮಾಡಿದರು.
ಹಲವಾರು ಜನ ಸ್ವಯಂಪ್ರೇರಿತರಾಗಿ ಮುಂದೆ ಬಂದು ಸಲೈವ ನೀಡಿ ಮಾದರಿ ಕಾರ್ಯದಲ್ಲಿ ಸಹಕರಿಸಿದರು. ಅಭಿಯಾನದಲ್ಲಿ ಸೇವಾಂಜಲಿ ಚಾರಿಟೇಬಲ್ ಟ್ರಸ್ಟಿನ ಮಂಗಲ್ಪಾಡಿ ನರೇಶ್ ಶೆಣೈ, ಹನುಮಂತ ಕಾಮತ್, ಡಿಕೆಎಂಎಸ್ ಸರಕಾರೇತರ ಸಂಸ್ಥೆಯ ಅಖಿಲಾ, ಮಹಾಮಿತ್ರ, ಯೂತ್ ಆಪ್ ಜಿಎಸ್ ಬಿಯ ಕಿರಣ್ ಶೆಣೈ, ನಾಗೇಂದ್ರ ಶೆಣೈ, ಸಂತೋಷ್ ಶೆಣೈ ಸಹಿತ ಹಲವಾರು ಸ್ವಯಂಸೇವಕರು ಭಾಗವಹಿಸಿದರು. ಮಂಗಳೂರಿನ ಟ್ರಾಫಿಕ್ ಎಸಿಪಿ ನಾಗರಾಜ್, ಮಂಗಳೂರಿನ ವಕೀಲರ ಪರಿಷತ್ತಿನ ರಾಘವೇಂದ್ರ ಸಹಿತ ಹಲವಾರು ಗಣ್ಯರು ಆಗಮಿಸಿ ಅಭಿಯಾನದಲ್ಲಿ ಭಾಗವಹಿಸಿದರು. ಈ ಅಭಿಯಾನ ಮುಂದಿನ ತಿಂಗಳು ಮಂಗಳೂರಿನ ಹಲವಾರು ಕಡೆ ನಡೆಯಲಿದ್ದು, ನಾಗರಿಕರು ಮಗುವಿನ ಜೀವ ಉಳಿಸಲು ಸಹಕರಿಸಬೇಕು ಎಂದು ಆಯೋಜಕರು ಮನವಿ ಮಾಡಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment