ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ದೃಢ ಸಂಕಲ್ಪದಿಂದ ಜೀವನ ಪಾವನ, ವಿಕಲ್ಪದಿಂದ ವ್ಯಕ್ತಿತ್ವ ನಾಶ: ಹೇಮಾವತಿ ವೀ ಹೆಗ್ಗಡೆ

ದೃಢ ಸಂಕಲ್ಪದಿಂದ ಜೀವನ ಪಾವನ, ವಿಕಲ್ಪದಿಂದ ವ್ಯಕ್ತಿತ್ವ ನಾಶ: ಹೇಮಾವತಿ ವೀ ಹೆಗ್ಗಡೆ

ಧರ್ಮಸ್ಥಳದಲ್ಲಿ ನವಜೀವನ ಸಮಿತಿ ಸದಸ್ಯರ ಶತದಿನೋತ್ಸವ ಮತ್ತು ಸಾಧಕರ ಅಭಿನಂದನಾ ಕಾರ್ಯಕ್ರಮ


ಧರ್ಮಸ್ಥಳದಲ್ಲಿ ಹೇಮಾವತಿ ವೀ. ಹೆಗ್ಗಡೆಯವರು ಮಂಗಳವಾರ ನವಜೀವನ ಸಮಿತಿ ಸದಸ್ಯರ ಶತದಿನೋತ್ಸವ ಮತ್ತು ಸಾದಕರ ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿದರು.


ಉಜಿರೆ: ದೃಢಸಂಕಲ್ಪದಿಂದ ಬದುಕಿನಲ್ಲಿ ನವಚೈತನ್ಯ ಮೂಡಿ ಬಂದು ಜೀವನ ಪಾವನವಾಗುತ್ತದೆ. ಮದ್ಯ ವ್ಯಸನದಂತಹ ಸಣ್ಣ ದುಶ್ಚಟವಿದ್ದರೂ, ವಿಕಲ್ಪದಿಂದ ವ್ಯಕ್ತಿತ್ವದ ಸರ್ವನಾಶವಾಗುತ್ತದೆ ಎಂದು ಹೇಮಾವತಿ ವೀ. ಹೆಗ್ಗಡೆಯವರು ಹೇಳಿದರು.


ಅವರು ಮಂಗಳವಾರ ಧರ್ಮಸ್ಥಳದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಆಶ್ರಯದಲ್ಲಿ ನವಜೀವನ ಸಮಿತಿ ಸದಸ್ಯರ ಶತದಿನೋತ್ಸವ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.


ರಾವಣ, ದುರ್ಯೋಧನನಂತಹ ಮಹಾಪುರುಷರು ಕೂಡಾ ಹೆಣ್ಣು, ಮಣ್ಣಿನ ವ್ಯಾಮೋಹದಿಂದ ತಮ್ಮ ವ್ಯಕ್ತಿತ್ವವನ್ನು ಕಳೆದುಕೊಂಡು ಪರಿತಪಿಸುವಂತಾಯಿತು. ಇಂತಹ ಸಾಕಷ್ಟು ಪುರಾವೆಗಳು ನಮಗೆ ಪುರಾಣ ಕಥೆಗಳಲ್ಲಿ ಸಿಗುತ್ತವೆ. ಆದುದರಿಂದ ಸಣ್ಣ ಪುಟ್ಟ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ಧೈರ್ಯ, ಆತ್ಮವಿಶ್ವಾಸ ಮತ್ತು ದೃಢಸಂಕಲ್ಪವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು.


ಮದ್ಯವ್ಯಸನದಂತಹ ದುಶ್ಚಟದಿಂದಾಗಿ ವ್ಯಕ್ತಿತ್ವದ ಸರ್ವನಾಶವಾಗುವುದಲ್ಲದೆ ಸಂಸಾರದ ಜೀವನ ಸಸಾರವಾಗುತ್ತದೆ. ಕುಟುಂಬದ ಸದಸ್ಯರ ಬಾಳೆಲ್ಲ ಗೋಳಾಗುತ್ತದೆ ಎಂದು ಅವರು ಹೇಳಿದರು.


ಇಡೀ ಕುಟುಂಬದ ಸುಖ-ಶಾಂತಿ, ನೆಮ್ಮದಿಗಾಗಿ ಸದಾ ಶ್ರಮಿಸುತ್ತಿರುವ ಮಹಿಳೆ ಮನೆಗೆ ಸೂರ್ಯ ಇದ್ದಂತೆ ಸದಾ ಬೆಳಕನ್ನು ನೀಡುತ್ತಾಳೆ. ಮಹಿಳೆಯರ ಮನಸನ್ನು ನೋಯಿಸಬಾರದು. ಸಣ್ಣ ಗೆದ್ದಲು ಇಡೀ ಕಟ್ಟಡವನ್ನೇ ಹಾಳು ಮಾಡುವಂತೆ ಮದ್ಯ ವ್ಯಸನವು ಕೌಟುಂಬಿಕ ಜೀವನವನ್ನು ಕೆಡಿಸುತ್ತದೆ. ಮದ್ಯ ವ್ಯಸನಕ್ಕೆ ಬಲಿಯಾದವರನ್ನು ವ್ಯಸನ ಮುಕ್ತರನ್ನಾಗಿ ಮಾಡುವ ಜನಜಾಗೃತಿಯ ಸೇವೆ ಪವಾಡ ಸದೃಶವಾಗಿ ಕ್ರಾಂತಿಕಾರಿ ಪರಿವರ್ತನೆ ಮಾಡಿ ಅನೇಕ ಕುಟುಂಬಗಳು ನವಜೀವನ ಸಮಿತಿ ಸದಸ್ಯರಾಗಿ ಇಂದು ಶಾಂತಿ-ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.


ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಮಾತನಾಡಿ, ಜನಜಾಗೃತಿ ವೇದಿಕೆ ಕಾರ್ಯಕ್ಕೆ ಆರಂಭದಲ್ಲಿ ವಿರೋಧ, ಟೀಕೆ, ಅಪಹಾಸ್ಯ ವ್ಯಕ್ತವಾದರೂ ಈಗ ಸಮಾಜದಲ್ಲಿ ಕ್ರಾಂತಿಕಾರಿ ಪರಿವರ್ತನೆಯಾಗಿದೆ ಎಂದು ಹೇಳಿ ನವಜೀವನ ಸಮಿತಿ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸಿದರು.


ಉಡುಪಿಯ ಖ್ಯಾತ ಮನೋವೈದ್ಯ ಡಾ. ಪಿ.ವಿ. ಭಂಡಾರಿ ಮಾತನಾಡಿ, ಸರ್ವ ರೋಗಕ್ಕೆ ಸಾರಾಯಿ ಒಳ್ಳೆದು, ಮದ್ಯಪಾನದಿಂದ ಆರೋಗ್ಯ ರಕ್ಷಣೆ ಆಗುತ್ತದೆ, ಬಿಯರ್ ಕುಡಿದರೆ ಚಂದ ಆಗುತ್ತಾರೆ, ಬಿಳಿ ಆಗುತ್ತಾರೆ ಇತ್ಯಾದಿ ತಪ್ಪು ನಂಬಿಕೆ, ಹೇಳಿಕೆಗಳಿಂದ ಕೆಲವರು ಮದ್ಯಪಾನಕ್ಕೆ ಬಲಿಯಾಗುತ್ತಾರೆ. ಇಂತಹ ಅನಧಿಕೃತ ತಪ್ಪು ಹೇಳಿಕೆಗಳಿಗೆ ಯಾರೂ ಬಲಿಯಾಗಬಾರದು ಎಂದು ಅವರು ಹೇಳಿದರು. ಮದ್ಯವ್ಯಸನಿಗಳಿಗೆ ಮನೋವೈದ್ಯರ ಶುಶ್ರೂಷೆ ಅಗತ್ಯವಾಗಿದೆ ಎಂದು ಹೇಳಿದರು.


ಯಾರೂ ಕುಡಿದ ಮೇಳೆ ತನಗೆ ಫೋನ್ ಮಾಡಬೇಡಿ. ಕುಡಿಯುವ ಮೊದಲೆ ಫೋನ್ ಮಾಡಿ ಎಂದು ಅವರು ಸಲಹೆ ನೀಡಿದರು. ಜನಜಾಗೃತಿ ವೇದಿಕೆಯ ಸೇವೆಯನ್ನು ಅವರು ಶ್ಲಾಘಿಸಿದರು.


ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಮದ್ಯಪಾನ ನಂಬಿಕೆ, ಪ್ರೀತಿ-ವಿಶ್ವಾಸವನ್ನು ಕೆಡಿಸುವುದಲ್ಲದೆ ವ್ಯಕ್ತಿತ್ವದ ನಾಶ ಮಾಡುತ್ತದೆ. ಮದ್ಯ ವ್ಯಸನ ಮುಕ್ತರಾಗಿ ನೂರು ದಿನ ಪೂರೈಸಿದವರು ಧರ್ಮಸ್ಥಳಕ್ಕೆ ಬಂದು ಪರಿಶುದ್ದ್ಧ ಮನದಿಂದ ದೇವರ ದರ್ಶನ ಮಾಡಿ ಪ್ರಾರ್ಥನೆ ಸಲ್ಲಿಸಿರುವುದರಿಂದ ಪುನೀತರಾಗಿ ಪವಿತ್ರಾತ್ಮರಾಗಿದ್ದೀರಿ. ದೇವರು ಪೂರ್ಣ ರೀತಿಯಲ್ಲಿ ಎಲ್ಲರಿಗೂ ಅನುಗ್ರಹ ಮಾಡಿದ್ದಾರೆ ಎಂದು ಹೇಳಿದರು. ಈ ವರೆಗೆ ವ್ಯಸನ ಮುಕ್ತರಾದವರೆಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದ್ದಾರೆ. ಹೊಸ ಮನೆ ಕಟ್ಟಿಸಿ, ಹೊಸ ವಾಹನ ಖರೀದಿಸಿದ್ದಾರೆ ಎಂದು ಹೆಗ್ಗಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಆರು ವಿಶೇಷ ಸಾಧಕರಿಗೆ “ಜಾಗೃತಿ ಅಣ್ಣ” ಮತ್ತು “ಜಾಗೃತಿ ಮಿತ್ರ” ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಮಂಗಳೂರಿನ ಫಾದರ್ ಮುಲ್ಲರ್ಸ್ ಕಾಲೇಜಿನ ಡಾ. ಶಿಜಿ, ಪಿ.ಜೆ. ಬರೆದ ಸಂಶೋಧನಾ ಪ್ರಬಂಧವನ್ನು ಹೆಗ್ಗಡೆಯವರಿಗೆ ಅರ್ಪಿಸಿದರು. ಸಮಾವೇಶದಲ್ಲಿ 1520 ಮಂದಿ ನವಜೀವನ ಸಮಿತಿ ಸದಸ್ಯರು ಭಾಗವಹಿಸಿದರು.


ಮಾಣಿಲದ ಮೋಹನದಾಸ ಸ್ವಾಮೀಜಿ, ಡಾ. ಶ್ರೀನಿವಾಸ ಭಟ್ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ಪಾೈಸ್ ಸ್ವಾಗತಿಸಿದರು. ವೇದಿಕೆಯ ರಾಜ್ಯಾದ್ಯಕ್ಷ ರಾಮಸ್ವಾಮಿ ಧನ್ಯವಾದವಿತ್ತರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post