ಪುತ್ತೂರು: ಬುಧವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ನಡೆಯುತ್ತಿರುವ ಜಾತ್ರೆಯು ಅಸ್ತವ್ಯಸ್ತ ಗೊಂಡಿದ್ದು, ಜಾತ್ರೆಯಲ್ಲಿದ್ದ ವ್ಯಾಪಾರ ಮಳಿಗೆಗಳಿಗೆ ಹಾನಿಯುಂಟಾಗಿದೆ.
ಭಾರೀ ಗಾಳಿ ಹಾಗೂ ಗುಡುಗು ಸಹಿತ ಮಳೆಗೆ ಜಾತ್ರೆಯ ಗದ್ದೆಯಲ್ಲಿದ್ದ ಬಹುತೇಕ ವ್ಯಾಪಾರ ಮಳಿಗೆಗಳ ಶೀಟ್‌ಗಳು ಹಾರಿಹೋಗಿವೆ.
ಗದ್ದೆ ತುಂಬ ನೀರು ನಿಂತಿದ್ದು ಕೆಸರುಮಯವಾಗಿದ್ದು, ವ್ಯಾಪಾರಿಗಳಿಗೆ ಅಪಾರ ನಷ್ಟ ಉಂಟಾಗಿದೆ.
ಭಾರೀ ಗಾಳಿಗೆ ದೇವಸ್ಥಾನದ ಮುಂಭಾಗದ ಗೋಪುರದ ಮೇಲಿನ ವಿದ್ಯುತ್ ದೀಪಾಲಂಕಾರಗಳು ಉರುಳಿ ಬಿದ್ದು ಕೆಳ ಭಾಗದಲ್ಲಿದ್ದ ಇಬ್ಬರಿಗೆ ಗಾಯಗಳಾಗಿವೆ.
ನಗರದ ಪಾಂಗಾಳಾಯಿ ನಿವಾಸಿ ರೀತಾ ಹಾಗೂ ನೆಹರು ನಗರದ ಹೇಮಾವತಿ ಗಾಯಗೊಂಡವರು. ಗಾಯಾಳುಗಳನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ದೇವಳದ ಗದ್ದೆಯ ಎದುರು ಭಾಗದ ಶ್ರೀ ಶಿವಪಾರ್ವತಿ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವನ್ನು ಮುಂದೂಡಲಾಯಿತು.
ಕಾರ್ಯಕ್ರಮ ವೀಕ್ಷಿಸಲು ಆಗಮಿಸಿದ್ದ ಪ್ರೇಕ್ಷಕರು ಮತ್ತು ಕಲಾವಿದರು ಗಾಳಿ ಮಳೆಗೆ ವೇದಿಕೆಯ ಸಭಾಂಗಣದಲ್ಲಿ ಆಶ್ರಯ ಪಡೆದರು. ಬಳಿಕ ಕಾರ್ಯಕ್ರಮವನ್ನು ಸ್ವಗಿತಗೊಳಿಸಲಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق