ಮಂಗಳೂರು: ವೀರು ಟಾಕೀಸ್ ಲಾಂಛನದಲ್ಲಿ ತಯಾರಾದ ವೀರೇಂದ್ರ ಶೆಟ್ಟಿ ನಿರ್ಮಾಣ- ನಿರ್ದೇಶನದ `ಮಗನೇ ಮಹಿಷ' ತುಳು ಚಲನ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಗರದ ಹೋಟೆಲ್ ಓಶಿಯನ್ ಪರ್ಲ್‍ನಲ್ಲಿ ಬುಧವಾರ ನಡೆಯಿತು.
ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಆಡಿಯೋ ಬಿಡುಗಡೆಗೊಳಿಸಿ ಮಾತನಾಡಿ, ಸಂಗೀತಕ್ಕೆ ಭಾಷೆ ಇಲ್ಲ, ಹಾಗಾಗಿ ಸಲೀಸಾಗಿ ತುಳು ಭಾಷೆಯ ಚಿತ್ರದಲ್ಲಿ ಕೆಲಸ ಮಾಡಲು ಸಾಧ್ಯವಾಯಿತು. `ಮಗನೇ ಮಹಿಷ' ಚಿತ್ರದಲ್ಲಿ ಎಲ್ಲ ಹಾಡುಗಾರರು ಕೂಡಾ ತುಳುನಾಡಿನವರಾಗಿರುವುದು ವಿಶೇಷ. ಈ ಮೂಲಕ ವೀರೇಂದ್ರ ಶೆಟ್ಟಿ ಅವರು ತುಳು ಕಲಾವಿದರ ಹಿತಾಸಕ್ತಿಯನ್ನು ಕಾಪಾಡುವ ಕೆಲಸವನ್ನೂ ಈ ಚಿತ್ರದಲ್ಲಿ ಮಾಡಿದ್ದಾರೆ. ಮಂಗಳೂರು ಅಂದರೆ ನನಗೆ ತುಂಬಾ ಇಷ್ಟ. ಇಲ್ಲಿನ ನೀರು ದೋಸೆ, ಐಡಿಯಲ್ ಐಸ್‍ಕ್ರೀಂ ನನ್ನ ಫೇವರಿಟ್ ಎಂದು ಹೇಳಿದರು.
ಹಿರಿಯ ಕಲಾವಿದ ವಿಜಯಕುಮಾರ್ ಶೆಟ್ಟಿ ಕೊಡಿಯಾಲ್‍ಬೈಲ್ ಮಾತನಾಡಿ, ಈ ಸಿನಿಮಾ ಸಂಗೀತಮಯ, ಹಾಸ್ಯಮಯ ಆಗಿದೆ. ತುಳು ಚಿತ್ರರಂಗಕ್ಕೆ ಇದು ಹೊಸ ಆಯಾಮ ನೀಡಲಿದೆ ಎಂದು ಹೇಳಿದರು. ಹಿರಿಯ ಕಲಾವಿದ ದೇವದಾಸ್ ಕಾಪಿಕಾಡ್ ಮಾತನಾಡಿ, ಕೋವಿಡ್ ಬಳಿಕ ತುಳು ಚಿತ್ರರಂಗ ಕಷ್ಟದಲ್ಲಿದೆ. ಈ ಹಂತದಲ್ಲಿ ವೀರೇಂದ್ರ ಶೆಟ್ಟಿ ಹೊಸ ಸಾಹಸಕ್ಕೆ ಕೈ ಹಾಕಿದ್ದು, ಪೂರ್ಣ ಪ್ರಮಾಣದಲ್ಲಿ ಚಿತ್ರ ಗೆಲ್ಲುವ ವಿಶ್ವಾಸವಿದೆ. ಪ್ರೇಕ್ಷಕರು ತುಳು ಕಲಾವಿದರ ಜತೆ ಕೈ ಜೋಡಿಸಿ ಚಿತ್ರವನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಹಾಸ್ಯ ಕಲಾವಿದ ನವೀನ್ ಡಿ.ಪಡೀಲ್ ಮಾತನಾಡಿ, ಕಲಾವಿದರು ಸಿನಿಮಾ ತೆಗೆಯಲು ಬಹಳ ಕಷ್ಟಪಟ್ಟಿರುತ್ತಾರೆ. ಅದಕ್ಕಾಗಿ ಚಿತ್ರವನ್ನು ಚಿತ್ರಮಂದಿರಕ್ಕೇ ಹೋಗಿ ವೀಕ್ಷಿಸಿ ಎಂದು ಹೇಳಿದರು. ಮತ್ತೊಬ್ಬ ಹಾಸ್ಯ ಕಲಾವಿದ ಭೋಜರಾಜ ವಾಮಂಜೂರು ಮಾತನಾಡಿ, ಚಾಲಿಪೋಲಿ ಸಿನಿಮಾಗಿಂತ ಹೆಚ್ಚಿನ ಹಾಸ್ಯವನ್ನು ಈ ಚಿತ್ರದಲ್ಲಿ ಪ್ರೇಕ್ಷಕರು ಆನಂದಿಸಬಹುದು. ಎಲ್ಲರೂ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ವಿನಂತಿಸಿದರು.
`ಮಗನೇ ಮಹಿಷ' ತುಳು ಚಲನ ಚಿತ್ರದ ನಿರ್ಮಾಪಕ, ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಪ್ರಾಸ್ತಾವಿಕವಾಗಿ ಮಾತನಾಡಿ, ಚಾಲಿಪೋಲಿ ಚಿತ್ರಕ್ಕಿಂತ ಭಿನ್ನವಾಗಿ ಈ ಚಿತ್ರವನ್ನು ತೆಗೆದಿದ್ದೇವೆ. ಇದೇ ಮೊದಲ ಬಾರಿಗೆ ಖ್ಯಾತ ಸಂಗೀತ ನಿರ್ದೇಶಕ ಮನೋಮೂರ್ತಿ ಅವರ ಸಂಗೀತ ತುಳು ಚಿತ್ರಕ್ಕೆ ಈ ಸಿನಿಮಾದ ಮೂಲಕ ಸಿಕ್ಕಿದೆ. ಹಾಸ್ಯದ ಜತೆಯಲ್ಲಿ ಸಂಗೀತವೂ ಅದ್ಭುತವಾಗಿ ಮೂಡಿ ಬಂದಿದೆ ಎಂದು ಹೇಳಿದರು.
ತುಳು ಚಿತ್ರ ನಿರ್ಮಾಪಕರ ಸಂಗದ ಅಧ್ಯಕ್ಷ ರಾಜೇಶ್ ಬ್ರಹ್ಮಾವರ, ಸಹ ನಿರ್ದೇಶಕ ರಕ್ಷಣ್ ಮಾಡೂರು, ಗಾಯಕ ಪ್ರಶಾಂತ್ ಕಂಕನಾಡಿ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭ ಮನೋ ಮೂರ್ತಿ ಅವರನ್ನು ಚಿತ್ರತಂಡದ ಪರವಾಗಿ ಸನ್ಮಾನಿಸಲಾಯಿತು. ನಿತೇಶ್ ಶೆಟ್ಟಿ ಎಕ್ಕಾರು ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق