ಮೊನ್ನೆ ಶೃಂಗೇರಿ ಶಿವಪ್ರಕಾಶ್ ಅನ್ನುವವರು ತಮಾಷೆಯಾಗಿ ಒಂದು ಮೆಸೇಜ್ ಹಾಕಿದ್ದರು "ಒಂದು ಸಲಹೆ, ಐದು ಬಾರಿ ನಮಾಜ್ ಮಾಡಿದ ಮೇಲೆ ಮೈಕ್ ಖಾಲಿ ಇರ್ತದಲ್ವ..!?? ಖಾಲಿ ಇರೋ ಸಮಯದಲ್ಲಿ ಭಜನೆ, ಹನುಮಾನ್ ಚಾಲೀಸಾ ಕೇಳಿಸಿದರೆ ಭ್ರಾತೃತ್ವ_ ಸಮಾನತೆ ವೃದ್ಧಿಸಬಹುದು..." ಅಂತ.
ಅದಕ್ಕೆ ಪ್ರತಿಕ್ರಿಯೆಯಾಗಿ ಈ ಬರಹ- ಸಮಾನತೆಯ ದೃಷ್ಡಿಯಿಂದ ಈ ಸಲಹೆ ಒಳ್ಳೆಯದು. ಇದಕ್ಕೆ ತಮಾಷೆಯಾಗಿ ನನ್ನದೂ ಒಂದು ಸಲಹೆ ಇದೆ!! ಅದನ್ನು ಕೊನೆಯಲ್ಲಿ ಹೇಳುತ್ತೇನೆ. ಅದಕ್ಕೆ ಮುಂಚೆ ನನ್ನ ಯೋಚನೆಗೆ ಬಂದ ಒಂದಿಷ್ಟು ಮಾತುಗಳು:
**
ಯಕ್ಷಗಾನದಲ್ಲಿ ಶನೀಶ್ವರ ಮಹಾತ್ಮೆ ಪ್ರಸಂಗದಲ್ಲಿ ಒಂದು ಕತೆ ಬರುತ್ತದೆ. ಶನಿಯೇ ಮುಸ್ಲಿಮ್ ಬ್ಯಾರಿ ವೇಷ ಧರಿಸಿ ಕುದುರೆ ವ್ಯಾಪಾರ ಮಾಡುತ್ತ ಬಂದು ವಿಕ್ರಮಾದಿತ್ಯ ರಾಜನಿಗೆ ಕಷ್ಟ ಕೊಡುವ ಸನ್ನಿವೇಷ. ಬ್ಯಾರಿ ಪಾತ್ರ ಹಾಸ್ಯ ಪಾತ್ರವಾದರೂ ಮುಸ್ಲಿಮ್ ಶೈಲಿಯಲ್ಲಿ (ನಮ್ದುಕಿ ಈಗ ಅರಬ್ ಮಾತಾಡುದಿಲ್ಲ, ನಿಮ್ದು ಬಾಸೆ ಉಂಟಲ್ಲ, ಕನ್ನಡ್, ಅದರಲ್ಲಿ ಮಾತಾಡ್ತದೆ....ಈ ಶೈಲಿ) ಮಾತಾಡುತ್ತ, ಮುಸ್ಲಿಮ್ ಸಮುದಾಯದಲ್ಲಿ ಇರುವ ಶ್ರೇಷ್ಟತೆ, ನ್ಯೂನತೆಗಳನ್ನು ವಿಸ್ತರಿಸುತ್ತಾ ಪಾತ್ರ ಸಾಗುತ್ತದೆ. ಅದೇ ರೀತಿ ಬಪ್ಪನಾಡು ಕ್ಷೇತ್ರ ಮಹಾತ್ಮೆ ಪ್ರಸಂಗದಲ್ಲಿ ದಿ.ಶೇಣಿ ಗೋಪಾಲಕೃಷ್ಣ ಭಟ್‌ರವರ ಬ್ಯಾರಿ ಪಾತ್ರ ನೋಡಲು ಅನೇಕ ಮುಸ್ಲಿಮ್ ಜನರು ಬರುತ್ತಿದ್ದರಂತೆ!!.
**
ಇಪ್ಪತ್ತು ಮೂವತ್ತು ವರ್ಷಗಳ ಹಿಂದಿನ ಗಣೇಶೋತ್ಸವದ ಪತ್ರಿಕೆ ಇದ್ದರೆ ತೆಗೆದು ನೋಡಿ. ಉತ್ಸವ ಸೇವಾ ಕರ್ತರಲ್ಲಿ ಅನೇಕ ಮುಸ್ಲಿಮ್ ಇರ್ತಾ ಇದ್ರು.
ಟೈರ್ ಪಂಚರ್ ಹಾಕೋದರಿಂದ ಹಿಡಿದು, ದಿನಸಿ, ಗೋಟಡಿಕೆ, ಗುಜರಿ ವ್ಯಾಪಾರದವರೆಗೆ ಹಿಂದೂ ಮುಸ್ಲಿಮ್ ಬೇಧವಿಲ್ಲದೆ ಒಟ್ಟಾಗಿ ವ್ಯವಹಾರ ಮಾಡ್ತಾ ಇದ್ರು. ಈಗ್ಲೂ ಇದೆ. ಮೊನ್ನೆ ಮೊನ್ನೆ ಕೂಡ RSSನ ಬೃಹತ್ ಕಾರ್ಯಕ್ರಮ ಮುಸ್ಲಿಮರ ಶಾಮಿಯಾನದ ಅಡಿಯೇ ನೆಡೆದಿದೆ.
ಯಾವುದೇ ಬುರ್ಖಾ, ಹಿಜಬ್ ಇಲ್ಲದೆ ನಟಿಸಿದ ಹಿಂದು ಧಾರ್ಮಿಕ ಆಚರಣೆ ಇರುವ ಸಿನಿಮಾಗಳಲ್ಲಿ ನಟಿಸಿದ ಮುಸ್ಲಿಮ್ ಹೀರೋಯಿನ್‌ಗಳನ್ನು ಕನ್ನಡ, ಹಿಂದಿ, ತಮಿಳು, ತೆಲಗು ಭಾಷಿಗರು ಒಪ್ಪಿಕೊಂಡಿದ್ದರು. ಮುಸ್ಲಿಮ್ ಧರ್ಮದವರೂ ಅದಕ್ಕೆ ದೊಡ್ಡ ಆಕ್ಷೇಪ ಯಾವತ್ತೂ ಎತ್ತಿರಲಿಲ್ಲ. ಎರಡೂ ಧರ್ಮದವರು ಅವರನ್ನು ಸ್ವೀಕರಿಸಿದ್ದರು. ಮುಸ್ಲಿಮ್ ನಟ ಪುರೋಹಿತನ ಪಾತ್ರ ಮಾಡಿದ ಸಿನಿಮಾ ಇದೆ. ಮುಸ್ಲಿಮ್ ಸಂಗೀತ ನಿರ್ದೇಶಕ ಭಕ್ತಿ ಗೀತೆಗಳಿಗೆ ಬ್ಯಾಕ್‌ಗ್ರೌಂಡ್ ಮ್ಯೂಸಿಕ್ ಕೊಟ್ರು. ತಾಳ ಮದ್ದಳೆಯಲ್ಲಿ ಮುಸ್ಲಿಮ್ ಕಮ್ಯುನಿಟಿಯ ಶ್ರೇಷ್ಟ ವಿದ್ವಾಂಸರು ಕರ್ಣ, ಶಲ್ಯ, ಕೃಷ್ಣ, ಕೌರವ, ರಾವಣ, ವಾಲಿಯಂತಹ ಮೇರು ಪಾತ್ರ ಮಾಡಿದ್ದಾರೆ. ಅದೇ ರೀತಿ ಅನೇಕ ಸಿನಿಮಾಗಳಲ್ಲಿ ಡಾ.ರಾಜ್ (ಅಲ್ಲಾ ಅಲ್ಲಾ, ಯಾ ಅಲ್ಲಾ, ನೀನೇ ಎಲ್ಲಾ....ಹಾಡು ನೆನಪಾಯ್ತಾ?) ಅಮಿತಾಬಚ್ಚನ್, NTRರಂತಹ ಅನೇಕ ಕಲಾ ಶ್ರೀಮಂತ ನಟರು ಮುಸ್ಲಿಮ್ ಪಾತ್ರದಲ್ಲಿ ಮಿಂಚಿದ್ದಾರೆ.
ಟಿವಿ ಮೂಲಕ ಪ್ರಸಾರಗೊಂಡ ರಾಮಾಯಣ ಮಹಾಭಾರತಗಳಲ್ಲಿ ಪ್ರಮುಖ ಪಾತ್ರಗಳನ್ನು ಮುಸ್ಲಿಂರೂ ಮಾಡಿದ್ದಾರೆ.
ಬೆಂಗಳೂರಿನ ಕಾಟನ್‌ಪೇಟೆ ದರ್ಗಾದಲ್ಲಿ ದಿನಕ್ಕೆ ನೂರಾರು ಹಿಂದುಗಳು ತಾಯತ ಕಟ್ಟಿಸಿಕೊಳ್ಳುವುದನ್ನು ನಾನೇ ನೋಡಿದ್ದೇನೆ. ಅಲ್ಲೇ ಮತ್ತೊಂದು ದಿಕ್ಕಿಗಿರುವ ಧರ್ಮರಾಯಸ್ವಾಮಿ ಮತ್ತು ದ್ರೌಪದಿ ದೇವಸ್ಥಾನದಲ್ಲಿ ಮುಸ್ಲಿಮ್‌ರು ಕರಗ ಸಂದರ್ಭದಲ್ಲಿ ಅರ್ಚನೆ, ನಮಸ್ಕಾರ ಮಾಡುವ ಧರ್ಮ ಸಾಮರಸ್ಯ ನೋಡಿದ್ದೇನೆ.
ಇದೆಲ್ಲವುದರ ನಡುವೆ ಜಿಹಾದ್, ಟೆರರಿಸಮ್, ಕಶ್ಮೀರ್ ಪಂಡಿತರ ಹತ್ಯೆ, ಆಗಾಗ ನೆಡೆಯುತ್ತಿದ್ದ ಮತೀಯ ಗಲಬೆಗಳೂ ಉಮಿ ಒಳಗಿನ ಬೆಂಕಿಯಂತೆ ಹೊಗೆ ಆಡುತ್ತಿತ್ತು.
ಆ ಬೆಂಕಿ ನಿನ್ನೆ ಮೊನ್ನೆಯದಲ್ಲ, ಅದಕ್ಕೆ ದಶಕಗಳ ಇತಿಹಾಸ ಇದೆ!! ಅನೇಕ ರಾಜಕೀಯ ಪಕ್ಷಗಳ ಓಟ್ ರಾಜಕಾರಣವಿದೆ. ದೂರ್ತ ಉಗ್ರಗಾಮಿಗಳ ಪರೋಕ್ಷ ಬೆಂಬಲಕ್ಕೆ ನಿಂತ ಧಾರ್ಮಿಕ ನಾಯಕರಿದ್ದಾರೆ. ಪಕ್ಕದ ಕೆಟ್ಟ ದೇಶದ ಬುದ್ದಿ ಹೀನರಿದ್ದಾರೆ.
ಆಯಾ ಕಾಲಘಟ್ಟದಲ್ಲಿ ಆ ಉಮಿ ಒಳಗಿನ ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡಬೇಕಿದ್ದ ರಾಜಕಾರಣದ ನಾಯಕರು, ಧಾರ್ಮಿಕ ನಾಯಕರು, ಎಡಪಂಥೀಯ ಬುದ್ದಿಜೀವಿಗಳು, ಆ ಪ್ರಯತ್ನಕ್ಕೆ ಇಳಿಯದೆ ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಂಡರು. ಕೋಮುಗಳ ನಡುವೆ ಇದ್ದ ಸೇತುವೆ ಒಡೆದರು. ಪರಿಣಾಮ ಇವತ್ತಿನ ದೇಶದ ಮತೀಯ ಬಿರುಕು!!
ಬಿರುಕಿನ ನಡುವಿನ ಹೊಗೆ, ಕಾವು ಎಲ್ಲ ಹಿಂದೂ ಮುಸ್ಲೀಮ್‌ರ ಮನೆಯ ಬಾಗಿಲಿಗೆ ಬಂದು ನಿಂತಿದೆ.
ಪ್ರಗತಿಯಲ್ಲಿ, ಆಧುನಿಕತೆಯಲ್ಲಿ ಸಾಗುತ್ತಿದ್ದ ಭಾರತದ ಹಿಂದೂ ಧರ್ಮದ ಒಳಗಿನ ಆಚಾರ ವಿಚಾರಗಳ ಕಾಲಕ್ಕೆ ತಕ್ಕಂತೆ ಬದಲಾವಣೆ ಕಂಡುಕೊಳ್ಳುತ್ತಾ ಹೋಯಿತು. ಬಾಲ್ಯ ವಿವಾಹ, ಸತಿ ಪದ್ದತಿ, ಕುಟುಂಬ ಯೋಜನೆ, ವಿವಾಹ ನಿಯಮ... ಹೀಗೆ ಅನೇಕ ಧಾರ್ಮಿಕ ಮತ್ತು ಸಾಮಾಜಿಕ ಪದ್ದತಿಗಳು ಬದಲಾವಣೆಗೊಂಡವು. ಆದರೆ ಈ ಬದಲಾವಣೆಗಳು ಮುಸ್ಲಿಂರಲ್ಲಿ ವೇಗ ಕಳೆದುಕೊಂಡಿತು. ಒಂದು ದೇಶ, ಒಂದು ಸಾಮಾಜಿಕ ನಿಯಮ ಚರ್ಚೆಗೆ ಬಂದಾಗ ಮುಸ್ಲಿಂ ನಾಯಕರುಗಳು, ಮುಸ್ಲಿಮ್ ಧರ್ಮ ನಾಯಕರುಗಳು ತಾವೇ ಸಹಕಾರ ಕೊಟ್ಟು ಬದಲಾವಣೆಗಳಿಗೆ ಮುಂದಾಳತ್ವ ವಹಿಸಬೇಕಿತ್ತು. ಧರ್ಮ- ಆಚರಣೆಗಳು ಖಾಸಗಿ ಬದುಕಿಗೆ ಸೀಮಿತವಾಗುವಂತೆ ಷರಿಯತ್ ಕಾನೂನು ಸಾಮಾಜಿಕ ಸಂವಿಧಾನದ ಕಾನೂನಿಗೆ ಸಹಕಾರಿಯಾಗಬೇಕಿತ್ತು. ದೇಶದ ಎರಡೂ ಧರ್ಮದ ರಾಜಕೀಯ ಮತ್ತು ಧಾರ್ಮಿಕ ನಾಯಕರುಗಳು ಸೌಹಾರ್ದ ಸಂವಾದ-ಚರ್ಚೆಗಳ ಮೂಲಕ ಏಕ ರೂಪತೆ ತರಬೇಕಿತ್ತು.
ಹಾಗಾಗದೆ ಮದುವೆ, ತಲಾಕ್, ಬುರ್ಕಾ, ಹಿಜಬ್, ವ್ಯಾಪಾರ, ಮಹಿಳಾ ಸಮಾನತೆ, ಗೋ, ಹಲಾಲ್, ಇತಿಹಾಸ, 370, ಮಸೀಧಿ, ಮೈಕು, ಮತಾಂತರ.... ಎಲ್ಲಕ್ಕೂ ಘರ್ಷಣೆ, ವಾದ, ಪ್ರತಿಭಟನೆ, ಹೋರಾಟ, ಹತ್ಯೆ, ಸಾವು.... ಕೊನೆಗೆ ಕೋರ್ಟ್ ಎಂಬಂತಾಗಿದೆ.
ಈಗಲೂ ಎಲ್ಲ ಸಮಸ್ಯೆಗಳಿಗೂ ಉತ್ತರ ಎಲ್ಲ ಧರ್ಮದ ಪ್ರಜ್ಞಾವಂತ ರಾಜಕಾರಣಿಗಳು, ಧರ್ಮ ಮುಂದಾಳುಗಳು ಒಟ್ಟಾಗಿ ಸಮಗ್ರ ದೇಶದ ಶಾಂತಿ ಮತ್ತು ಉತ್ತಮ ಭವಿಷ್ಯದ ಬಲಿಷ್ಟ ರಾಷ್ಟ್ರವಾಗಿಸುವ ಸಂಕಲ್ಪದೊಂದಿಗೆ ಹೆಜ್ಜೆ ಇಡಬೇಕಿದೆ. ಎಲ್ಲ ವಿಚಾರಗಳು ಘರ್ಷಣೆಗಳೊಂದಿಗೆ ಕೋರ್ಟ್ ಮೂಲಕ ತೀರ್ಮಾನವಾಗಿ ಕಾನೂನು ಆಗುವುದಾದರೆ ಅದು ಯಾವ ಧರ್ಮದವರಿಗೂ ಲಾಭ ತರುವುದಿಲ್ಲ, ದೇಶಕ್ಕೂ ನಷ್ಟ ಆದೀತು, ತೊಂದರೆ ಎಲ್ಲರಿಗೂ.
ಸೌಹಾರ್ದತೆ ಬೆಳಸಬೇಕಾದ ಶಾಲಾ ಕಾಲೇಜುಗಳಲ್ಲಿ ಮತಾಂಧತೆ, ಧರ್ಮಾಂಧತೆ, ಘರ್ಷಣೆ, ಅಪನಂಬಿಕೆಗಳ ಬೀಜ ನೆಡಲಾಗುತ್ತಿದೆ. ರಾಜಕಾರಣಿಗಳು ಬ್ಯಾಲೆಟ್ ಪೇಪರ್ ಹಿಡಿದು ನಿಂತಿದ್ದಾರೆ.
ಸಮುದಾಯ ಧರ್ಮ ಗ್ರಂಥಗಳ ಮೌಲ್ಯವನ್ನು ಅರ್ಥೈಸಿಕೊಳ್ಳದೆ, ಅನುಸರಿಸದೆ, ಅಳತೆ ಮಾಡುತ್ತ ಕ್ರೌರ್ಯದ ಕಡೆ ಹೋಗುತ್ತಿದೆ.
ಆಯಾ ಧರ್ಮದ ದೇವರೇ....
ಆಯಾ ಧರ್ಮದ ಜನರಿಗೆ, ಎಲ್ಲ ಸರಿಯಾಗುವಂತೆ, ಸರಿ ಮಾಡುವಂತೆ, ಸರಿಯಾದ ಒಂದೇ ದಾರಿಯಲ್ಲಿ ಹೋಗುವಂತೆ ಪ್ರಚೋದಿಸು. ಕೃತ್ರಿಮ ಮನಸ್ಸಿನ ಎಲ್ಲರನ್ನೂ ಸಜ್ಜನರಾಗಿಸು.
ಶನಿ ಮಹಾತ್ಮೆಯಲ್ಲಿ ಬ್ಯಾರಿ ಮತ್ತೆ ಬರುತ್ತಿರಲಿ, ಗಣೇಶೋತ್ಸವಕ್ಕೆ ಮುಸ್ಲಿಂರು ಹಿಂದೂಸ್ತಾನಿ ಹಾಡಲಿ, ಮುಸ್ಲಿಂ- ಕ್ರಿಶ್ಚಿಯನ್‌ರ ತಾಯತ ಹಿಂದುಗಳು ತೋಳೇರಲಿ, ದ್ರೌಪದಿ ಮಂದಿರದಲ್ಲಿ ಇಮಾಮ್‌ರು ಗಂಟೆ ಹೊಡೆಯಲಿ. ಮೊನ್ನೆ ಮೊನ್ನೆ ತೆಗೆದು ಹಾಕಿದ ಬಸ್ಸಿನ ಡ್ರೈವರ್ ಮೇಲಿನ ಸರ್ವ ದೇವರ ಸರ್ವ ಧರ್ಮ ಫೋಟೋ ಮತ್ತೆ ಬರಲಿ. ಸ್ನೇಹಿತರ ಅಮರ್ ಅಕ್ಬರ್ ಅ್ಯಂತೋಣಿ ಸಿನಿಮಾಗಳು ಬರುತ್ತಿರಲಿ.
ತಮಾಷೆಯಾಗಿ ಹೇಳುವುದಾದರೆ, ಒಮ್ಮೆ ಅಲ್ಲಾ,
ಒಮ್ಮೆ ಕೇಶವ,
ಒಮ್ಮೆ ಕ್ರಿಸ್ತನ
ಹೆಸರಿನೊಂದಿಗೆ ಮಸೀಧಿಯಲ್ಲಿ ಕೆಳಗಿನಂತೆ ನಮಾಜ್ ಅತ್ಯಂತ ಕಡಿಮೆ ಡೆಸಿಬಲ್ ಸೌಂಡಿನಲ್ಲಿ ನಡೆಯಲಿ
೧) ಕೇಶವಾಹು ಅಕ್ಬರ್, ಕೇಶವಾಹು ಅಕ್ಬರ್, ಕೇಶವಾಹು ಅಕ್ಬರ್...
೨) ಅಶಹದ್ 'ಕೇಶವಾ' ಇಲಾಹಾ ಇಲ್ಲಾ ಕೇಶವ್ (ಒಟ್ಟು ಮೂರು ಬಾರಿ)
೩) ಅಶಹದ್ ಅನ್ನ 'ಕೃಷ್ಣ' ಉರ್ ರಸೂಲುಲ್ಲಾಹ್....(ಒಟ್ಟು ಎರಡು ಬಾರಿ)
೪) ಹಯ್ ಅಲಸ್ ಸಲಹ್...(ಎರಡು ಬಾರಿ)
೫) ಹಯ್ ಅಲಲ್ ಪ಼ಲಹ್...(ಎರಡು ಬಾರಿ)
೬) ಅಸ್ಸಲಾತ್ ಖೈರ್ - ಉ ಮಿನನ್ ನೋಮ್....(ಎರಡು ಬಾರಿ)
೭) ಕೇಶವಾಹು ಅಕ್ಬರ್,
೮) ಲಾ ಇಲಾಹಾ ಇಲ್ಲಾಕೇಶವ್
ಕನ್ನಡಾನುವಾದ:
೧) ಕೇಶವನೇ ಸರ್ವಶ್ರೇಷ್ಟ, ಕೇಶವನೇ ಸರ್ವಶ್ರೇಷ್ಟ, ಕೇಶವನೇ ಸರ್ವಶ್ರೇಷ್ಟ,
೨) ಕೇಶವನನ್ನು ಬಿಟ್ಟರೆ ಬೇರೆ ದೇವರಿಲ್ಲ ಎಂದು ಪ್ರಾಮಾಣಿಕರಿಸುತ್ತೇನೆ.
೩) ಕೃಷ್ಣನೇ ಸಂದೇಶವಾಹಕನೂ ಹೌದು ಎಂದು ಪ್ರಮಾಣಿಕರಿಸುತ್ತೇನೆ.
೪) ಪ್ರಾರ್ಥನೆಗೆ ಬನ್ನಿ
೫) ಯಶಸ್ಸನ್ನು ಹೊಂದಲು ಬನ್ನಿ
೬) ನಿದ್ದೆಗಿಂತ ಪ್ರಾರ್ಥನೆ ಲೇಸು
೭) ಕೇಶವನೇ ಸರ್ವಶ್ರೇಷ್ಠ.
೮) ಕೇಶವನನ್ನು ಬಿಟ್ಟರೆ ಬೇರೆ ದೇವರಿಲ್ಲ
ಕೇಶವನ ಪ್ರಾರ್ಥನೆ ಆದ ಮೇಲೆ ಅಲ್ಲಾ, ತರುವಾಯ ಕ್ರಿಸ್ತ!!
ಹೇಗೆ? ಭ್ರಾತೃತ್ವ_ಸಮಾನತೆ ವೃದ್ದಿಸಬಹುದಾ?
ಬೇರೆ ಅವಕಾಶದ ದಾರಿಗಳು ಇದೆಯಾ?
ಚರ್ಚೆ ಮುಂದುವರೆಯಲಿ...
-ಅರವಿಂದ ಸಿಗದಾಳ್, ಮೇಲುಕೊಪ್ಪ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment