ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಛೇರಿಗೆ ಡಿಜಿಪಿ ಡಾ. ಅಮರ್ ಕುಮಾರ್ ಪಾಂಡೆ ಭೇಟಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಮೇರಿಹಿಲ್ ಮಂಗಳೂರು ಕಛೇರಿಗೆ ಐಪಿಎಸ್ ಆರಕ್ಷಕ ಮಹಾನಿರ್ದೇಶಕರು ಹಾಗೂ ಗೃಹರಕ್ಷಕ ದಳದ ಮಹಾ ಸಮಾದೇಷ್ಟರು ಮತ್ತು ಪೌರರಕ್ಷಣೆ ನಿರ್ದೇಶಕರಾದ ಡಾ. ಅಮರ್ ಕುಮಾರ್ ಪಾಂಡೆ ಇವರು ಬುಧವಾರ (ಮಾ.30) ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಕಛೇರಿ ಕಡತಗಳನ್ನು ಪರಿಶೀಲಿಸಿದರು. ಕಾಲಕಾಲಕ್ಕೆ ಗೃಹರಕ್ಷಕರಿಗೆ ಸೂಕ್ತ ತರಬೇತಿ ನೀಡಬೇಕು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆ ಮತ್ತು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುವ ಗೃಹರಕ್ಷಕರಿಗೆ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ ಎಂದರು. ಕಛೇರಿಯ ಆವರಣವನ್ನು ಶುಚಿಯಾಗಿಡಲು ಹಾಗೂ ಕಛೇರಿಯ ಆವರಣದಲ್ಲಿ ಗಿಡಗಳನ್ನು ನೆಡುವಂತೆ ಸೂಚಿಸಿದರು. ಗೃಹರಕ್ಷಕರ ವೇತನವನ್ನು ಸಕಾಲದಲ್ಲಿ ನೀಡಲು ಬೇಕಾದ ಅಗತ್ಯ ತುರ್ತು ಕ್ರಮಗಳನ್ನು ಮಾಡಲು ಸಮಾದೇಷ್ಟರಿಗೆ ಸೂಚನೆ ನೀಡಿದರು.
ಹಿರಿಯ ಗೃಹರಕ್ಷಕರೊಂದಿಗೆ ಮಾತನಾಡಿ, ಅವರ ಕುಂದು ಕೊರತೆಗಳನ್ನು ವಿಚಾರಿಸಿದರು ಹಾಗೂ ಗೃಹರಕ್ಷಕರ ವಿನಂತಿಯ ಮೇರೆಗೆ ರೈಫಲ್ ಕವಾಯತಿಗೆ ಸೆರೆಮೋನಿಯಲ್ ಡ್ರೆಸ್ ಒದಗಿಸಿಕೊಡುವುದಾಗಿ ತಿಳಿಸಿದರು ಮತ್ತು ಗೃಹರಕ್ಷಕದಳದ ಸದಸ್ಯರು ಮರಣ ಹೊಂದಿದಲ್ಲಿ ಗೌರವರಕ್ಷೆಯನ್ನು ನೀಡುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದರು.
ರಾಜ್ಯದಲ್ಲಿ ಸುಮಾರು 64 ಇಲಾಖೆಗಳಲ್ಲಿ ಗೃಹರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು ಒಟ್ಟು 20,000ಕ್ಕೂ ಹೆಚ್ಚು ಗೃಹರಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಗೃಹರಕ್ಷಕರ ಮೇಲೆ ಅಪರಿಮಿತ ಕಾಳಜಿ ಮತ್ತು ಅಭಿಮಾನ ಹೊಂದಿರುವ ಡಿಜಿಪಿಯವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗೃಹರಕ್ಷಕರ ಪರವಾಗಿ ಹಾರ ಹಾಕಿ, ಶಾಲು ಹೊದಿಸಿ, ಪೇಟ ಹಾಕಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಸಮಾದೇಷ್ಟರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೌರರಕ್ಷಣೆ ಪಡೆ ಚೀಫ್ ವಾರ್ಡನ್ ಡಾ|| ಮುರಲೀಮೋಹನ್ ಚೂಂತಾರು, ಮುಖ್ಯ ಅಗ್ನಿಶಾಮಕ ಅಧಿಕಾರಿ ತಿಪ್ಪೇಸ್ವಾಮಿ, ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಉಪ ಸಮಾದೇಷ್ಟರಾದ ರಮೇಶ್, ಕಛೇರಿ ಅಧೀಕ್ಷಕರಾದ ರತ್ನಾಕರ, ಪ್ರಥಮ ದರ್ಜಿ ಸಹಾಯಕಿ ಅನಿತಾ ಟಿ. ಎಸ್, ಹಾಗೂ ಮಂಗಳೂರು ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಮಾರ್ಕ್ಶೇರಾ, ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಭಾಸ್ಕರ್, ಸುರತ್ಕಲ್ ಘಟಕದ ಪ್ರಭಾರ ಘಟಕಾಧಿಕಾರಿ ರಮೇಶ್, ಬೆಳ್ಳಾರೆ ಘಟಕದ ಪ್ರಭಾರ ಘಟಕಾಧಿಕಾರಿ ವಸಂತ್ ಕುಮಾರ್ ಮತ್ತು 30 ಜನ ಗೃಹರಕ್ಷಕರು ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق