ಕುಂದಾಪುರ: ದೇವಸ್ಥಾನದ ವಾರ್ಷಿಕ ಜಾತ್ರೋತ್ಸವಕ್ಕೆ ಶುಭ ಕೋರುವ ಫ್ಲೆಕ್ಸ್ ಅಳವಡಿಸುತ್ತಿದ್ದ ವೇಳೆ ಫ್ಲೆಕ್ಸ್‌ಗೆ ವಿದ್ಯುತ್ ತಂತಿ ತಗುಲಿದ್ದರಿಂದ ಯುವಕ ಮೃತಪಟ್ಟ ಘಟನೆಯೊಂದು ಕುಂದಾಪುರ ತಾಲೂಕಿನ ಸೌಕೂರಿನಲ್ಲಿ ಶುಕ್ರವಾರ ರಾತ್ರಿ ಸಂಭವಿಸಿದೆ.
ಘಟನೆಯಲ್ಲಿ ಇನ್ನೊಬ್ಬ ವ್ಯಕ್ತಿ ಕೂಡ ಗಂಭೀರ ಗಾಯಗೊಂಡಿದ್ದಾರೆ.
ಸೌಕೂರು ನಿವಾಸಿ ಪ್ರಶಾಂತ ದೇವಾಡಿಗ (26) ಮೃತಪಟ್ಟ ಯುವಕ. ಅವಘಡದಲ್ಲಿ ಶ್ರೀಧರ ದೇವಾಡಿಗ (45) ಎಂಬವರು ಗಂಭೀರ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಸೌಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಆಯೋಜಿಸಲಾಗಿತ್ತು.
ಆ ಪ್ರಯುಕ್ತ ಶುಕ್ರವಾರ ರಾತ್ರಿ ಜಾತ್ರೋತ್ಸವಕ್ಕೆ ಶುಭಕೋರುವ ಬ್ಯಾನರ್ ಅಳವಡಿಸುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ ಎಂದು ತಿಳಿದುಬಂದಿದೆ.
ಪ್ಲೆಕ್ಸ್ ಅಳವಡಿಸುತ್ತಿದ್ದ ಸ್ಥಳದ ಸಮೀಪವೇ ವಿದ್ಯುತ್ ತಂತಿ ಹಾದು ಹೋಗಿದ್ದು, ಅದನ್ನು ಗಮನಿಸದೆ ಫ್ಲೆಕ್ಸ್ ಮೇಲಕ್ಕೆತ್ತಿ ಕಟ್ಟುತ್ತಿದ್ದ ವೇಳೆ ಅದು ವಿದ್ಯುತ್ ತಂತಿಗೆ ತಗುಲಿದೆ.
ಇದರಿಂದ ಪ್ರಶಾಂತ ದೇವಾಡಿಗ ಹಾಗೂ ಶ್ರೀಧರ ದೇವಾಡಿಗ ವಿದ್ಯುತ್ ಆಘಾತಕ್ಕೊಳಗಾಗಿ ತೀವ್ರವಾಗಿ ಗಾಯಗೊಂಡರೆನ್ನಲಾಗಿದೆ.
ಕೂಡಲೇ ಇಬ್ಬರನ್ನು ರಕ್ಷಿಸುವ ಪ್ರಯತ್ನ ನಡೆಸಲಾಯಿತಾದರೂ ಅಷ್ಟರಲ್ಲಾಗಲೇ ಪ್ರಶಾಂತ ದೇವಾಡಿಗ ಕೊನೆಯುಸಿರೆಳೆದಿದ್ದರು.
Post a Comment