ಹೊಸಂಗಡಿ: ಬಾಯಿ ಕ್ಯಾನ್ಸರ್ ಎನ್ನುವುದು ತಡೆಗಟ್ಟಬಹುದಾದ ಮತ್ತು ಗುಣ ಪಡಿಸಬಹುದಾದ ಖಾಯಿಲೆಯಾಗಿದ್ದು ಸಕಾಲದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ಸರಿಯಾದ ಕ್ರಮದಲ್ಲಿ ನೀಡಿದಲ್ಲಿ ಸಂಪೂರ್ಣವಾಗಿ ಗುಣಪಡಿಸಬಹುದಾಗಿದೆ. ಮುಂದುವರೆದ ಹಂತದಲ್ಲಿ ಚಿಕಿತ್ಸೆಗೆ ಚೆನ್ನಾಗಿ ಸ್ಪಂದಿಸದೇ ಇರಬಹುದು, ಆರಂಭಿಕ ಹಂತದಲ್ಲಿ ಗುರುತಿಸಿ ಪರಿಣಾಮಕಾರಿ ಚಿಕಿತ್ಸೆ ನೀಡಿದಲ್ಲಿ ಸಂಪೂರ್ಣವಾಗಿ ಗುಣಮುಖರಾಗಿ ಸಮಾಜದ ಮುಖ್ಯವಾಹಿನಿಗೆ ಸೇರಿಕೊಳ್ಳಲು ಸಾಧ್ಯವಿದೆ, ಬಾಯಿ ಕ್ಯಾನ್ಸರ್ ಗುಣಪಡಿಸಲಾಗದ ಖಾಯಿಲೆ ಅಲ್ಲವೇ ಅಲ್ಲ. ಅದೇ ರೀತಿ ತಂಬಾಕು ಉತ್ಪನ್ನಗಳನ್ನು ವರ್ಜಿಸಿದಲ್ಲಿ ನಿಮಗೆ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ 90 ಶೇಕಡಾ ಕಡಿಮೆಯಾಗುತ್ತದೆ. ಆರೋಗ್ಯಕರ ಜೀವನ ಶೈಲಿ, ಸಮತೋಲನ ಆಹಾರ ಮತ್ತು ದೂಮಪಾನ ಮಧ್ಯಪಾನ ರಹಿತ ಜೀವನದಿಂದ ಬಹುತೇಕ ಎಲ್ಲಾ ಜೀವನಶೈಲಿ ಸಂಬಂಧಿ ರೋಗಗಳನ್ನು ತಡೆಗಟ್ಟಲು ಸಾಧ್ಯವಿದೆ, ಬಾಯಿ ಕ್ಯಾನ್ಸರಿಗೆ ಹಳ್ಳಿ ಮದ್ದು ಮತ್ತು ಇತರ ಅವೈಜ್ಞಾನಿಕ ಚಿಕಿತ್ಸೆ ಮಾಡಿದರೆ ಅಮೂಲ್ಯವಾದ ಸಮಯ ವ್ಯರ್ಥವಾಗಿ ಖಾಯಿಲೆ ಬಿಗಡಾಯಿಸಿ ಮಾರಣಾಂತಿಕವಾಗುತ್ತದೆ ಎಂದು ಸುರಕ್ಷಾ ದಂತ ಚಿಕಿತ್ಸಾಲಯದ ಖ್ಯಾತ ವೈದ್ಯ ಬಾಯಿ ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು.
ವಿಶ್ವ ಕ್ಯಾನ್ಸರ್ ದಿನದ ಅಂಗವಾಗಿ ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ) ಮಂಗಳೂರು ಮತ್ತು ಸುರಕ್ಷಾ ದಂತ ಚಿಕಿತ್ಸಾಲಯ ಹೊಸಂಗಡಿ ಮಂಜೇಶ್ವರ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 04-02-2022ನೇ ಶುಕ್ರವಾರದಂದು ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಒಂದು ತಿಂಗಳ ಕಾಲ ಉಚಿತ ಬಾಯಿ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಸಾಂಕೇತಿಕವಾಗಿ ದೀಪ ಬೆಳಗಿಸಿ ಉದ್ಘಾಟಿಸಲಾಯಿತು.
ಈ ಸಂದರ್ಭದಲ್ಲಿ ವೈದ್ಯರಾದ ಡಾ|| ಮುರಲೀ ಮೋಹನ್ ಚೂಂತಾರು ಮತ್ತು ಶುಶ್ರೂಶಕಿಯರಾದ ರಮ್ಯ, ಶ್ವೇತಾ, ಸುಶ್ಮಿತ ಮತ್ತು ಚಿತ್ರ ಉಪಸ್ಥಿತರಿದ್ದರು. ಈ ಉಚಿತ ಮಾಹಿತಿ ಶಿಬಿರ ಮತ್ತು ತಪಾಸಣಾ ಶಿಬಿರ ಫೆಬ್ರವರಿ ಇಡೀ ತಿಂಗಳು ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ನಡೆಯಲಿದೆ, ಎಲ್ಲಾ ರೋಗಿಗಳು ಈ ಶಿಬಿರದ ಪ್ರಯೋಜನ ಪಡೆಯಬಹುದು ಎಂದು ಸುರಕ್ಷಾ ದಂತ ಚಿಕಿತ್ಸಾ ಲಯದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬಾಯಿ ಕ್ಯಾನ್ಸರ್ ಬಗ್ಗೆ ಉಚಿತ ಮಾಹಿತಿ, ಉಚಿತ ತಪಾಸಣೆ ಮತ್ತು ಬಾಯಿ ಕ್ಯಾನ್ಸರ್ ಬಗ್ಗೆ ಮಾಹಿತಿ ಇರುವ ‘ಅರಿವು’ ಬಾಯಿ ಕ್ಯಾನ್ಸರ್ ಮಾರ್ಗದರ್ಶಿ ಪುಸ್ತಕವನ್ನು ಎಲ್ಲಾ ರೋಗಿಗಳಿಗೆ ಉಚಿತವಾಗಿ ನೀಡಲಾಗುವುದು ಎಂದು ಡಾ|| ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment