ಉಳ್ಳಾಲ: ಮಹಾನಗರ ಪಾಲಿಕೆ ಮಂಗಳೂರು ಮತ್ತು ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಸಹಯೋಗದಲ್ಲಿ ನಡೆಯುವ 'ನಮ್ಮ ಅಬ್ಬಕ್ಕ- 2022: ಅಮೃತ ಸ್ವಾತಂತ್ರ್ಯ ಸಂಭ್ರಮ'ದ ಪೂರ್ವಸಿದ್ಧತಾ ಸಭೆ ಕೋಟೆಕಾರ್ ಕೊಲ್ಯದ ಶ್ರೀ ಶಾರದಾ ಸಭಾ ಸದನದಲ್ಲಿ ಜರಗಿತು. ಪ್ರತಿಷ್ಠಾನದ ಸಂಚಾಲಕ ಹಾಗೂ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ರವೀಂದ್ರಶೆಟ್ಟಿ ಉಳಿದೊಟ್ಟು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಂಘಟನಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತನಾಡಿ ಫೆಬ್ರವರಿ 26 ಮತ್ತು 27ರಂದು ಮಂಗಳೂರು ಪುರಭವನದಲ್ಲಿ ಜರಗುವ ಎರಡು ದಿನಗಳ ಕಾರ್ಯಕ್ರಮದ ರೂಪು-ರೇಷೆಗಳನ್ನು ವಿವರಿಸಿದರು.'ಮಂಗಳೂರು ಮನಾಪ ಮೇಯರ್ ಪ್ರೇಮಾನಂದ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ವಿ.ಸುನೀಲ್ ಕುಮಾರ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಎಸ್.ಅಂಗಾರ ಈರ್ವರು ಶ್ರೇಷ್ಠ ಸಾಧಕರಿಗೆ ಅಬ್ಬಕ್ಕ ಸೇವಾ ಪ್ರಶಸ್ತಿ ಮತ್ತು ಅಮೃತ ಸ್ವಾತಂತ್ರ್ಯ ವಿಶೇಷ ಪ್ರಶಸ್ತಿಯನ್ನು ಪ್ರದಾನ ಮಾಡುವರು. 'ಕರಾವಳಿಯಲ್ಲಿ ಭಾರತ ಸ್ವಾತಂತ್ರ್ಯದ ಹೆಜ್ಜೆ ಗುರುತುಗಳು' ಎಂಬ ವಿಚಾರಗೋಷ್ಠಿ ಮತ್ತು 'ಸ್ವಾತಂತ್ರ್ಯಾಮೃತ ಕವಿ ನಮನ' ಬಹುಭಾಷಾ ಕವಿಗೋಷ್ಠಿಯನ್ನೂ ನಡೆಸಲಾಗುವುದು' ಎಂದವರು ತಿಳಿಸಿದರು.
ಸ್ಪರ್ಧಾ ಸಂಚಾಲಕ ತ್ಯಾಗಂ ಹರೇಕಳ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆ ಮತ್ತು ಸಾರ್ವಜನಿಕರಿಗಾಗಿ ನಡೆಯುವ ಭಾಷಣ ಸ್ಪರ್ಧೆಗಳ ನಿಯಮಾವಳಿಗಳನ್ನು ಸಭೆಯ ಮುಂದಿಟ್ಟರು. ವೀರರಾಣಿ ಅಬ್ಬಕ್ಕ ರಾಷ್ಟ್ರೀಯ ಪ್ರತಿಷ್ಠಾನದ ಉಪಾಧ್ಯಕ್ಷೆ ನಮಿತಾ ಶ್ಯಾಂ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ ನೀಡಿದರು. ಕೋಶಾಧಿಕಾರಿ ಪಿ.ಡಿ.ಶೆಟ್ಟಿ ಮತ್ತು ಹಿರಿಯ ಸದಸ್ಯೆ ಸುವಾಸಿನಿ ಬಬ್ಬುಕಟ್ಟೆ ವಿವಿಧ ಸಮಿತಿಗಳ ಕಾರ್ಯಕಲಾಪಗಳ ಬಗ್ಗೆ ತಿಳಿಸಿದರು.
ಸದಸ್ಯರಾದ ಕೆ.ಲೋಕನಾಥ ರೈ, ತುಕಾರಾಮ್ ಮಾಸ್ಟರ್, ವಿಕ್ರಂ ದತ್ತ, ಮೋಹನದಾಸ್ ರೈ, ಡಾ. ಅರುಣ್ ಉಳ್ಳಾಲ್, ಪ್ರಭಾಕರ್ ರೈ ಮತ್ತು ಗೀತಾ ಜ್ಯುಡಿತ್ ಸಲ್ದಾನ ಚರ್ಚೆಯಲ್ಲಿ ಪಾಲ್ಗೊಂಡರು. ಸಂಘಟನಾ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು; ಜತೆ ಕಾರ್ಯದರ್ಶಿ ವಿಜಯಲಕ್ಷ್ಮಿ ಕಟೀಲು ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق