ಚಿಕ್ಕಮಗಳೂರು: ಶಿಕ್ಷಕರೊಂದಿಗೆ ತಮಗೂ ಹಿಂದಿನಿಂದಲೂ ಅವಿನಭಾವ ಸಂಬಂಧವಿದ್ದು ಶಿಕ್ಷಕರ ಬಳಗ ಆತ್ಮೀಯ ಹಾಗೂ ಅತಿಹೆಚ್ಚು ಪ್ರೀತಿ ಹೊಂದಿರುವಂತಹ ಬಳಗ ಎಂದು ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.
ನಗರದ ಜಿಲ್ಲಾ ಸ್ಕೌಟ್ಸ್ ಭವನದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆ ಇವರ ಸಹಯೋಗದಲ್ಲಿ ಪ್ರೌಢಶಾಲಾ ವಿಜ್ಞಾನ ಶಿಕ್ಷಕರಿಗೆ ಮಂಗಳವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಎರಡು ದಿನಗಳ ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ತಾಲ್ಲೂಕಿನಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಾಗಾರಗಳಲ್ಲಿ ಭಾಗವಹಿಸಿರುವ ಶಿಕ್ಷಕರುಗಳು ತರಬೇತಿ ಪೂರ್ಣಗೊಂಡ ನಂತರ ಅಭ್ಯಸಿಸಿರುವಂತಹ ವಿಷಯಗಳನ್ನು ತಮ್ಮ ವ್ಯಾಪ್ತಿಗೆ ಬರುವ ಶಾಲೆಗಳಿಗೆ ತೆರಳಿ ಶಿಕ್ಷಕರು ಹಾಗೂ ಮಕ್ಕಳಿಗೆ ತಿಳಿಸುವ ಕಾರ್ಯ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ವಿಜ್ಞಾನ ಪರಿಷತ್ ಸದಸ್ಯ ಎ.ಎನ್.ಮಹೇಶ್ ಮಾತನಾಡಿ ತರಬೇತಿ ಕಾರ್ಯಾಗಾರ ಪರಿಣಾಮಕಾರಿ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿದೆ. ಕಲಿಕೆ ಎಂಬುದು ನಿರಂತರ ಪ್ರಕ್ರಿಯೆಯಾಗಿದ್ದು ವೈಜ್ಞಾನಿಕ ಸಂಶೋಧನೆ ಪ್ರಕಾರ ವಿಜ್ಞಾನ ಪ್ರತಿ ಕ್ಷಣಕ್ಕೂ ಪರಾಮರ್ಶೆಗೊಳಪಡುತ್ತಿದ್ದು ಆ ಉದ್ದೇಶದಿಂದ ವಿಜ್ಞಾನ ಶಿಕ್ಷಕರಿಗೆ ಈ ಕಾರ್ಯಾಗಾರ ವಿಶೇಷವಾಗಲಿದೆ ಎಂದರು.
ವಿಜ್ಞಾನ ಪ್ರಯೋಗಗಳನ್ನು ಸರಳವಾಗಿ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಪ್ರತಿಯೊಬ್ಬ ಶಿಕ್ಷಕರು ಮುಂದಾಗಬೇಕು. ಆದ್ದರಿಂದ ಇಂತಹ ಕಾರ್ಯಾಗಾರಗಳಲ್ಲಿ ಶಿಕ್ಷಕರು ಪಾಲ್ಗೊಂಡು ತರಬೇತಿ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಳ್ಳಬೇಕು. ಜೊತೆಗೆ ಮಕ್ಕಳಿಗೆ ಉತ್ತಮ ರೀತಿಯಲ್ಲಿ ಅಭ್ಯಾಸಿಸಲು ಮುಂದಾಗಬೇಕು ಎಂದು ಹೇಳಿದರು.
ವೈಜ್ಞಾನಿಕ ಚಿಂತನೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸುವಂತ ಕೆಲಸ ಶಿಕ್ಷಕರು ಹಾಗೂ ವಿಜ್ಞಾನ ಪರಿಷತ್ ಮಾಡಬೇಕು ಎಂದ ಅವರು ಈ ನಿಟ್ಟಿನಲ್ಲಿ ಶಿಕ್ಷಕರು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ವಿಜ್ಞಾನ ಪರಿಷತ್ ಜೊತೆ ಸಂಪರ್ಕ ಬೆಳೆಸಿಕೊಳ್ಳುವ ಕಾರ್ಯದಲ್ಲಿ ತೊಡಗಬೇಕು ಎಂದು ತಿಳಿಸಿದರು.
ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಟಿ.ಜಿ.ಕೃಷ್ಣಮೂರ್ತಿ ರಾಜ್ ಅರಸ್ ಮಾತನಾಡಿ ವಿಜ್ಞಾನ ಪರಿಷತ್ ರಾಜ್ಯಾದ್ಯಂತ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ. ಆ ಹಿನ್ನಲೆಯಲ್ಲಿ ಇಂದು ಜಿಲ್ಲೆಯಲ್ಲಿ ಎರಡು ದಿನ ಕಾಲ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರಗಳು ಹಮ್ಮಿಕೊಂಡಿದ್ದು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಇದೇ ವೇಳೆ ಶೃಂಗೇರಿ ತಾಲ್ಲೂಕಿನ ವಿದ್ಯಾರ್ಥಿ ಕು.ಪ್ರತಿಮ ರಾಜ್ಯಮಟ್ಟದ ವಿಜ್ಞಾನ ವಿಚಾರಗೋಷ್ಠಿಯಲ್ಲಿ ದ್ವಿತೀಯ ಗಳಿಸಿದ ಹಿನ್ನೆಲೆಯಲ್ಲಿ ಜಿಲ್ಲಾ ವಿಜ್ಞಾನ ಪರಿಷತ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ವಿಜ್ಞಾನ ಪರಿಷತ್ ಖಜಾಂಚಿ ಇ. ಬಸವರಾಜು, ಜಿಲ್ಲಾ ಅಧ್ಯಕ್ಷ ಹೆಚ್.ಎಂ. ನೀಲಕಂಠಪ್ಪ, ಸಹ ಕಾರ್ಯದರ್ಶಿ ಪ್ರಕಾಶ್, ಸ್ಕೌಟ್ಸ್ ಮುಖ್ಯ ಆಯುಕ್ತ ಎಂ.ಎನ್. ಷಡಕ್ಷರಿ ಉಪಸ್ಥಿತರಿದ್ದರು. ಜಿಲ್ಲಾ ವಿಜ್ಞಾನ ಪರಿಷತ್ ಕಾರ್ಯದರ್ಶಿ ಟಿ.ತ್ಯಾಗರಾಜ್ ಸ್ವಾಗತಿಸಿದರು. ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ ನಿರೂಪಿಸಿದರು. ಶಿಕ್ಷಕ ಜಿ.ಆರ್.ಹೆಗಡೆ ಪ್ರಾರ್ಥಿಸಿದರು. ಉಪಾಧ್ಯಕ್ಷ ಹೆಚ್.ಎಂ.ಓಂಕಾರಪ್ಪ ವಂದಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق