ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕಾರ್ಕಳ ಗೊಮ್ಮಟ ಗಿರಿಯಲ್ಲಿ ಬೆಳದಿಂಗಳ‌ ಕವಿ ಸಮ್ಮೇಳನ

ಕಾರ್ಕಳ ಗೊಮ್ಮಟ ಗಿರಿಯಲ್ಲಿ ಬೆಳದಿಂಗಳ‌ ಕವಿ ಸಮ್ಮೇಳನ


ಕಾರ್ಕಳ: ಡಾ. ಶೇಖರ್ ಅಜೆಕಾರು ಇವರ ಸಾರಥ್ಯದಲ್ಲಿ ಕಾರ್ಕಳದ ಬಾಹುಬಲಿ ಗೋಮಟ ಬೆಟ್ಟದ ತಪ್ಪಲಿನಲ್ಲಿ  ಮೂರನೇ ಬಾರಿಗೆ ಸಾಹಿತ್ಯಾಭಿಷೇಕ, ಕಾವ್ಯ ಜಾಗರಣೆ ಅಖಿಲ ಭಾರತ ಬೆಳದಿಂಗಳ ಕವಿ ಸಮ್ಮೇಳನವು  ಬುಧವಾರ (ಫೆ.16) ಬೆಳದಿಂಗಳ ರಾತ್ರಿಯಲ್ಲಿ ಅದ್ದೂರಿಯಾಗಿ ನಡೆಯಿತು.


ಈ ಸಮಾರಂಭವನ್ನು ಪ್ರಸಿದ್ಧ ನ್ಯಾಯವಾದಿ ಎಂ.ಕೆ ವಿಜಯಕುಮಾರ್ ಅವರು ಉದ್ಘಾಟಿಸಿ ಶೇಖರ್ ಅಜೆಕಾರ್ ಅವರ ನಿರಂತರ ಸಾಧನೆಯ ಬಗ್ಗೆ ಶ್ಲಾಘಿಸುತ್ತಾ ಎರಡು ದಶಕ ಮೀರಿದ ಬೆಳದಿಂಗಳ ಸಾಹಿತ್ಯ ಸಮ್ಮೇಳನದ ಚಿಂತನೆಯ ಬಗ್ಗೆ ಸವಿವರವಾಗಿ ಮಾತನಾಡಿದರು.


ಸಮ್ಮೇಳನದ ಅಧ್ಯಕ್ಷತೆಯನ್ನು ಖ್ಯಾತ ಸಾಹಿತಿ ಹಾಗೂ ಚಿತ್ರ ನಟಿ ಪೂರ್ಣಿಮಾ ಸುರೇಶ್ ಕುಯಿಲಾಡಿ ಹಿರಿಯಡ್ಕ ಇವರು ವಹಿಸಿದ್ದು ಸಾಹಿತ್ಯದ ಹಲವಾರು ಮಜಲುಗಳನ್ನು ಉಲ್ಲೇಖಿಸುತ್ತಾ ಕಾವ್ಯದ ಶಾಶ್ವತೀ ಕರಣದ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಕೆಲವು ಪ್ರಸಿದ್ದ ಸಾಹಿತಿಗಳನ್ನು ಉದಾಹರಿಸಿದರು. ಪ್ರಸಿದ್ಧ ಕವಯಿತ್ರಿ ಮಿತ್ರಪ್ರಭಾ ಹೆಗ್ಡೆಯವರ ಕಾವ್ಯಾಭಿಷೇಕದೊಡನೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಅವರು ಕವಿತೆಯ ಗಟ್ಟಿತನವನ್ನು ಕುರಿತಾಗಿ ಮಾತನಾಡುತ್ತಾ ಸಾಹಿತ್ತದಲ್ಲಿ ಶ್ರಧ್ದೆಯ ಮಹತ್ವವನ್ನು ವಿವರಿಸಿದರಲ್ಲದೆ ಕವನವೊಂದನ್ನು ವಾಚಿಸಿದರು.


ಅತಿಥಿ ಪ್ರಮುಖರಲ್ಲೋರ್ವರಾದ ಮಂಗಳೂರಿನಲ್ಲಿರುವ ಡಾ ಸುರೇಶ ನೆಗಳಗುಳಿಯವರು ಸಾಹಿತ್ಯ ಕಾವ್ಯ ಇತ್ಯಾದಿಗಳು ಅವಸರದ ರಚನೆಗಳಾಗಿರದೆ ಅಭ್ಯಾಸ ಪೂರ್ಣವಾಗಿರ ಬೇಕು. ಜಾಲತಾಣ ಸಾಹಿತ್ಯಗಳನ್ನಷ್ಟೇ ಹಿಂಬಾಲಿಸುವ ಹವ್ಯಾಸದಿಂದ ಪರಿಪೂರ್ಣ ಸಾಹಿತ್ಯ ಅಸಾಧ್ಯ ಹಾಗೂ ಅಲ್ಲಿ ಸಮಯದ ಕೊರತೆ ಇರುವ ಕಾರಣ ಒಟ್ಟಾರೆ ಗೀಚುವ ಅನಿವಾರ್ಯತೆ ಉಂಟಾಗಿ ಅದೇ ಪ್ರವೃತ್ತಿ ಮುಂದುವರಿಯುತ್ತದೆ ಇದರಿಂದ ನಿಜವಾದ ಸ್ವಂತಿಕೆಯ ಸಾಹಿತ್ಯ ಉಂಟಾಗುವುದಿಲ್ಲ ಎನ್ನುತ್ತಾ ಸ್ವರಚಿತ ಬೆಳದಿಂಗಳ ಸಮ್ಮೇಳನದ ಕುರಿತಾದ ಗಝಲ್ ವಾಚಿಸಿದರು.


ಹಾಗೆಯೇ ಇನ್ನೋರ್ವ ಅತಿಥಿ ಪಿಂಗಾರ ಪತ್ರಿಕಾ ಸಂಪಾದಕ ರೇಮಂಡ್ ಡಿ ಕುನ್ಹ ತಾಕೊಡೆಯವರು ಸಾಹಿತ್ಯಗಳು ಪರಸ್ಪರ ವಿನಿಮಯ ಮುಖೇನ ತಿದ್ದುಪಡಿಗೊಳಗಾಗುವುದು ಕಾವ್ಯದ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅದೇನು ನಾಚಿಕೆಯ ಸಂಗತಿಯಲ್ಲ ಎಂದರು.


ಕಥಾಬಿಂದು ಪ್ರಕಾಶನದ ರೂವಾರಿ ಪಿ.ವಿ. ಪ್ರದೀಪ್ ಕುಮಾರ್ ಶುಭ ಹಾರೈಸಿದರು. ಕಾಸರಗೋಡಿನ ಚೂರಿಪಳ್ಳದ ಡಾ ವಾಣಿಶ್ರೀಯವರು ಚಂದ್ರನ ಮತ್ತು ಕವಿಗಳ ಸಂಬಂಧವನ್ನು ಕಾವ್ಯಾತ್ಮಕವಾಗಿ ವರ್ಣಿಸಿದರು.


ಕೃಷಿಬಿಂಬ ಸಂಪಾದಕ ರಾಧಾಕೃಷ್ಣ ತೋಡಿಕಾನರವರು ಸಾಹಿತ್ಯ ಮತ್ತು ಪತ್ರಿಕೋದ್ಯಮದ ಸಂಬಂಧದ ಸಮೀಕರಣ ಮಾಡಿದರು. ಮೂಡುಬಿದಿರೆಯ ನಾಗಶ್ರೀ ನಾಗರಕಟ್ಟೆಯವರು ತನಗೆ ಶೇಖರ ಅಜೆಕಾರು ಸಾಹಿತ್ಯದಲ್ಲಿ ಪ್ರವರ್ಧಮಾನಕ್ಕೆ ಬರಲು ಆದ ಸಹಾಯವನ್ನು ವರ್ಣಿಸಿದರು.


ಹಾಗೆಯೇ ಮಾಜಿ ವಿಮಾನ ನಿಲ್ದಾಣ ಅಧಿಕಾರಿಯಾಗಿದ್ದ ಎಂ.ಆರ್.ವಾಸುದೇವರಾವ್ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮರುದಿನದ ಸೂರ್ಯೋದಯ ಪರ್ಯಂತ ಮನ್ಸೂರ್ ಮುಲ್ಕಿ, ಎಂ ಆರ್ ಗುರುರಾಜ್ ಸಹಿತ ಹಲವರಿಂದ ಕವನ ವಾಚನಗಳು ನಡೆದುವು.

-ಡಾ ಸುರೇಶ ನೆಗಳಗುಳಿ, ಮಂಗಳೂರು


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ




0 تعليقات

إرسال تعليق

Post a Comment (0)

أحدث أقدم