ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬರಿಮಾರು: ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಮುಚ್ಚಲು ಹುನ್ನಾರ

ಬರಿಮಾರು: ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಮುಚ್ಚಲು ಹುನ್ನಾರ

ಮಕ್ಕಳ ಪೋಷಕರಿಂದ ದಿಢೀರ್ ಪ್ರತಿಭಟನೆ, ಆಡಳಿತ ಮಂಡಳಿ ಬದಲಾವಣೆಗೆ ಆಗ್ರಹ

ಬಂಟ್ವಾಳ ತಾಲ್ಲೂಕಿನ ಸೂರಿಕುಮೇರು ಸಮೀಪದ ಬರಿಮಾರು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ ಎದುರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. 


ಬಂಟ್ವಾಳ: ಇಲ್ಲಿನ ಮಾಣಿ ರಾಷ್ಟ್ರೀಯ ಹೆದ್ದಾರಿ ಸೂರಿಕುಮೇರು ಸಮೀಪದ ಬರಿಮಾರು ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದೆ ಎಂಬ ನೆಪವೊಡ್ಡಿ ಶಾಲೆಯನ್ನು ಮುಚ್ಚಲು ಹುನ್ನಾರ ನಡೆಸಿದ್ದಾರೆ ಎಂದು ಆಗ್ರಹಿಸಿ ಮಕ್ಕಳ ಪೋಷಕರು ಸೋಮವಾರ ದಿಢೀರ್ ಪ್ರತಿಭಟನೆ ನಡೆಸಿದರು.


ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಮೆಲ್ವಿನ್ ಕಿಶೋರ್ ಮಾರ್ಟಿಸ್ ಮತ್ತು ಸದಾನಂದ ಪೂಜಾರಿ ಮಾತನಾಡಿ, ಸುಮಾರು 125 ವರ್ಷಗಳ ಹಿನ್ನೆಲೆ ಹೊಂದಿರುವ ಸೈಂಟ್ ಜೋಸೆಫ್ ಚಚರ್ಿನ ವತಿಯಿಂದ ಕಳೆದ 87 ವರ್ಷಗಳಿಂದ ಮುನ್ನಡೆಸುತ್ತಿರುವ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಸುಸಜ್ಜಿತ ಕೊಠಡಿ ಸಹಿತ ಆಟದ ಮೈದಾನ ಮತ್ತು ಅನುಭವಿ ಶಿಕ್ಷಕಿಯರು ಇದ್ದಾರೆ. ಈ ಶಾಲೆ ಮುಚ್ಚುವ ಬದಲಾಗಿ ಮೇಲ್ದರ್ಜೆಗೇರಿಸಬೇಕು ಎಂದು ಆಗ್ರಹಿಸಿದರು.  


ಸ್ಥಳೀಯ ನಿವಾಸಿ ರೊನಾಲ್ಡ್ ಡಯಾಸ್, ಮ್ಯಾಕ್ಸಿಂ, ನಸ್ರೀನಾ, ವಿನಯ ಮತ್ತಿತರರು ಮಾತನಾಡಿ, ಕೆಲವೊಂದು ಸ್ವಹಿತಾಸಕ್ತಿಗಳ ಪಿತೂರಿಗೆ ಮಣಿದು ಶಾಲೆ ಮುಚ್ಚಲು ಮುಂದಾಗಿರುವ ಆಡಳಿತ ಮಂಡಳಿ ಬಗ್ಗೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಕೂಡಲೇ ಮಕ್ಕಳ ಪೋಷಕರ ಸಭೆ ಕರೆಯಬೇಕು. ಶಿಕ್ಷಣ ಇಲಾಖೆ ಮತ್ತು ಧರ್ಮಪ್ರಾಂತ್ಯ ಮುಖ್ಯಸ್ಥರು ಸಮಗ್ರ ತನಿಖೆ ನಡೆಸಿ ನೂತನ ಆಡಳಿತ ಮಂಡಳಿ ರಚಿಸಬೇಕು. ಇಲ್ಲದಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ಸಲ್ಲಿಸುವುದಾಗಿ ಅವರು ಎಚ್ಚರಿಸಿದರು.


ಚರ್ಚಿನ ಧರ್ಮಗುರು ಗ್ರೆಗರಿ ಪಿರೇರಾ ಮತ್ತು ಮುಖ್ಯ ಶಿಕ್ಷಕಿ ಸಿಸ್ಟರ್ ಪವಿತ್ರ ಪ್ರತಿಕ್ರಿಯಿಸಿ, ಇಲ್ಲಿನ ಒಟ್ಟು 127 ಮಂದಿ ವಿದ್ಯಾರ್ಥಿಗಳ ಪೈಕಿ 26 ಮಂದಿ ಮಾತ್ರ ಶೈಕ್ಷಣಿಕ ಶುಲ್ಕ ಪಾವತಿಸಿದ್ದಾರೆ. ಇದರಿಂದಾಗಿ ಶಾಲೆ ನಡೆಸಲು ಕಷ್ಟಕರವಾಗಿದ್ದು, ಈ ಬಗ್ಗೆ ಮಕ್ಕಳ ಪೋಷಕರ ಸಭೆ ಕರೆಯುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡರು. ಪ್ರಮುಖರಾದ ಐವನ್ ಮಾರ್ಟಿಸ್, ಹನೀಫ್, ಇಮ್ರಾನ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

 ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 تعليقات

إرسال تعليق

Post a Comment (0)

أحدث أقدم