ಮರದ ಮೇಲೆ ನಿಂತು ಬುಡಕಡಿದಂತಾದೀತು
ಹಸುವಿನ ಹಾಲು ಕುಡಿಯುವ ಇಡೀ ಸಮಾಜ ಈ ಬಗ್ಗೆ ಎಚ್ಚರಗೊಳ್ಳಬೇಕು
ರಾಜ್ಯದಲ್ಲಿರುವ ಅಳಿದುಳಿದ ಗೋಮಾಳ ಭೂಮಿಗಳನ್ನು ಅನ್ಯ ಉದ್ದೇಶಗಳಿಗೆ ಬಳಸುವ ಸಂಬಂಧ ರಾಜ್ಯ ಸರ್ಕಾರ ಚಿಂತನೆ ನಡೆಸಿರುವುದಕ್ಕೆ ತೀವ್ರ ವಿರೋಧವಾಗಿ ವಿರೋಧಿಸಲೇಬೇಕಾಗಿದೆ.
ಒಂದು ಕಡೆ ಗೋಹತ್ಯಾ ನಿಷೇಧ ಕಾನೂನು ಜಾರಿಗೆ ತಂದು ಇನ್ನೊಂದು ಕಡೆ ಗೋವಿನ ನೆಲೆಗಳನ್ನು ನುಂಗಿ ನೊಣೆಯುವ ಪ್ರವೃತ್ತಿಯಿಂದ ಏನು ಸಾಧಿಸಿದಂತಾಯಿತು ಎಂದು ಗೋ ಪ್ರೇಮಿಗಳ ಪ್ರಶ್ನೆಯಾಗಿದೆ.
ಸದ್ರಿ ಕಾನೂನು ಜಾರಿಯ ನಂತರ ಸರ್ಕಾರಕ್ಕೆ ಗೋ ರಕ್ಷಣೆಯ ಬಗೆಗೆ ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುವ ಬದ್ಧತೆ ತೋರಬೇಕಾಗಿದೆ. ಅದರಲ್ಲಿ ಗೋಮಾಳ ಭೂಮಿಯ ರಕ್ಷಣೆಯೂ ಒಂದು.
ಈಗಾಗಲೇ ರಾಜ್ಯದಲ್ಲಿ ಹೆಕ್ಟೇರ್ ಗಟ್ಟಲೆ ಗೋಮಾಳ ಭೂಮಿ ಅನ್ಯಾನ್ಯರಿಂದ ಬೇರೆ ಬೇರೆ ಸರ್ಕಾರಗಳ ಅವಧಿಯಲ್ಲಿ ಅತಿಕ್ರಮವಾಗಿದೆ. ಇವುಗಳು ಮತ್ತೆ ಮರುಸ್ವಾಧೀನವಾಗುವ ಸಾಧ್ಯತೆಗಳೂ ಇಲ್ಲವಾಗಿದೆ. ಹಾಗಿದ್ದಾಗ ಮತ್ತೆ ಉಳಿದ ಭೂಮಿಯನ್ನೂ ಅನ್ಯ ಉದ್ದೇಶಗಳಿಗೆ ಬಳಸುವುದೆಂದರೆ ಮರದ ಮೇಲೆ ಕುಳಿತು ಬುಡ ಕಡಿಯುವ ಮೂರ್ಖ ನಿರ್ಧಾರವೇ ಆಗಿದೆ.
ವಿಜ್ಞಾನವನ್ನು ಮತ್ತು ಆಧುನಿಕ ವಿದ್ಯೆಗಳನ್ನು ಬಳಸಿ ಜೀವನದ ಬಹುತೇಕ ಸಾಧನ ಸಲಕರಣೆಗಳನ್ನು ಬಳಸಿ ಮನುಷ್ಯ ಜೀವನವನ್ನು ಸುಲಭ ಮತ್ತು ಐಷಾರಾಮ ಮಾಡಿಕೊಂಡ ಭ್ರಮೆಯಲ್ಲಿದ್ದೇವೆ. ಆದರೆ ಪ್ರಕೃತಿಯನ್ನೇ ಅವಲಂಬಿಸಿದ ವಿಚಾರಗಳಲ್ಲಿ ನಾವು ಕುಬ್ಜರೇ ಆಗಿದ್ದೇವೆ. ಹಸುವಿನ ಹಾಲಿಗೆ ಸಮಾನವಾದ ಅಮೃತವನ್ನು ವಿಜ್ಞಾನದಿಂದ ಪಡೆಯಲು ಸಾಧ್ಯವೇ ಇಲ್ಲ. ಇಂತಹ ಭೂಮಿಗಳನ್ನು ಬಳಸಿ ನೂರಾರು ಕಾರ್ಖಾನೆಗಳನ್ನು ನಿರ್ಮಿಸಬಹುದು. ಆದರೆ ಸ್ವಯಂ ಒಂದು ಗೋವು ಕೂಡಾ ಯಾವ ಕಾರ್ಖಾನೆಯಿಂದಲೂ ತಯಾರಿಸಲಾಗದ ಅಮೃತ ಸದೃಶವಾದ ಹಾಲಿನ ಕಾರ್ಖಾನೆಯಾಗಿದೆ ಹಾಗಿರುವಾಗ ಹಸುವಿನ ಸಂತತಿ ಅಳಿಯಿತೆಂದರೆ ನಮ್ಮ ಅಧಃಪತನವೂ ಸಿದ್ಧ.
ನಮ್ಮ ಸುಖ ಸಂಪತ್ತಿಗಾಗಿ ಪ್ರಕೃತಿಯ ಅನೇಕ ಜೀವಿಗಳ ಬದುಕನ್ನು ಕಸಿಯುತ್ತಲೇ ಇದ್ದೇವೆ. ಇದು ಮಿತಿ ಮೀರಿ ನಿಸರ್ಗ ಕೊಡಬಹುದಾದ ಪೆಟ್ಟನ್ನು ಯಾವ ಮಾನವ ಶಕ್ತಿಯೋ ವಿಜ್ಞಾನವೋ ಎದುರಿಸಲೂ ಸಾಧ್ಯವಿಲ್ಲ. ಈ ಪರಮ ಸತ್ಯದ ಅರಿವಿನೊಂದಿಗೇ ಹೆಜ್ಜೆ ಹಾಕುವುದು ಜಾಣತನವಾಗುತ್ತದೆ. ಮೂಕ ಪ್ರಾಣಿಗಳ ಬದುಕಿಗೆ ಮೀಸಲಿಟ್ಟ ಜಾಗವನ್ನು ಕಸಿದು ಭವಿಷ್ಯದ ಪೀಳಿಗೆಯ ಬದುಕನ್ನು ದುರ್ಭರ ಮಾಡುವ ಪ್ರವೃತ್ತಿ ಅತ್ಯಂತ ಖಂಡನೀಯ. ಇಂಥ ದುಸ್ಸಾಹಸದ ಮತ್ತು ಮೂರ್ಖ ಚಿಂತನೆ ಮಾಡುವ ಮೊದಲು ಸಾವಿರ ಬಾರಿ ಯೋಚಿಸಬೇಕು. ಆದ್ದರಿಂದ ಕೇವಲ ಈ ಸರ್ಕಾರ ಮಾತ್ರ ಅಲ್ಲ; ಯಾವುದೇ ಸಿದ್ಧಾಂತದ ಯಾವುದೇ ಪಕ್ಷದ ಸರ್ಕಾರಗಳೂ ಇಂಥಹ ಅವಿವೇಕದ ನಿರ್ಧಾರಗಳನ್ನು ಚಿಂತನೆಗಳನ್ನು ಕೈಗೊಳ್ಳಲೇಬಾರದು.
-ಜಿ ವಾಸುದೇವ ಭಟ್ ಪೆರಂಪಳ್ಳಿ
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment