ಸಕ್ರಮ ಅಕ್ರಮ ಯಾವುದೇ ಗಣಿಗಾರಿಕೆ ಇಲ್ಲಿ ನಿಷೇಧವಾಗಬೇಕು
ಕಾರಿಂಜ (ಬಂಟ್ವಾಳ): ಈ ಭೂಮಿಯಲ್ಲಿ ಎಲ್ಲಿಯವರೆಗೆ ಶಿಲೆಯಿಂದ ಆಚ್ಛಾದಿತವಾದ ಬೆಟ್ಟಗಳು, ನದಿ ಕಾನನಗಳು ಸಂರಕ್ಷಿತವಾಗಿರುತ್ತವೋ ಅಲ್ಲಿಯವರೆಗೆ ಮಾನವ ಸಂತತಿ ಅಸ್ತಿತ್ವದಲ್ಲಿರುತ್ತದೆ ಎಂದು ಮಾರ್ಕಂಡೇಯ ಪುರಾಣದಲ್ಲಿ ಅತ್ಯಂತ ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಪ್ರಕೃತಿ ಉಳಿದರೆ ಮಾತ್ರ ನಮಗೆ ಇಲ್ಲಿ ಬದುಕು ಸಾಧ್ಯ ಎನ್ನುವುದು ಇದರಿಂದ ಸ್ಪಷ್ಟ. ಆ ಕಾರಣದಿಂದಲೇ ನಮ್ಮ ಪೂರ್ವಜರು ಋಷಿ ಮುನಿಗಳು ಅಂತಹ ಎತ್ತರದ ಶಿಲಾ ಬೆಟ್ಟಗಳು, ದಟ್ಟ ಕಾನನ ಹಾಗೂ ನದೀ ತೀರಗಳಲ್ಲಿ ದೇವತಾ ಸಾನ್ನಿಧ್ಯಗಳನ್ನು ನಿರ್ಮಿಸಿ ಅವುಗಳ ಮೂಲಕ ಪ್ರಕೃತಿ ರಕ್ಷಣೆಯಾಗಬೇಕೆಂಬ ಕರ್ತವ್ಯ ಪ್ರಜ್ಞೆ ಮೂಡಿಸಲು ಯತ್ನಿಸಿದ್ದಾರೆ. ಅಂತಹ ಒಂದು ಕ್ಷೇತ್ರ ಕಾರಿಂಜವಾಗಿದೆ. ಯುಗ ಯುಗಾಂತರಗಳ ಪ್ರಾಚೀನ ನಂಟನ್ನು ಹೊಂದಿರುವ ಈ ಕ್ಷೇತ್ರದ ಮಹಿಮೆ ಅಪಾರವಾದುದು ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.
ಸಮುದ್ರ ಮಟ್ಟದಿಂದ ಮೀಟರ್ ಗಟ್ಟಲೆ ಎತ್ತರದಲ್ಲಿರುವ ಈ ಸನ್ನಿಧಾನದ ಸುತ್ತ ಕಲ್ಲು ಗಣಿಗಾರಿಕೆಯ ಮೂಲಕ ಕ್ಷೇತ್ರದ ಪಾವಿತ್ರ್ಯ ಮತ್ತು ಪ್ರಾಕೃತಿಕ ಸೊಬಗಿಗೆ ಸಂಚಕಾರ ತರುವ ಯತ್ನ ನಡೆಯುತ್ತಿರುವುದು ಅತ್ಯಂತ ಖಂಡನೀಯ. ಇಂತಹ ಬೆಳವಣಿಗೆಗಳನ್ನು ಕೇವಲ ದೇವಳದ ಆಡಳಿತ ಮಂಡಳಿ ಭಕ್ತರು ಹಿಂದೂ ಸಂಘಟನೆಗಳು ಮಾತ್ರವಲ್ಲದೆ ಸಮಸ್ತ ಹಿಂದೂ ಸಮಾಜ ಒಟ್ಟಾಗಿ ಹಿಮ್ಮೆಟ್ಟಿಸಲೇಬೇಕು.
ಆರಂಭದ ಹಂತದಲ್ಲೇ ಇಲ್ಲಿ ನಡೆಯುತ್ತಿರುವ ಗಣಿಗಾರಿಕೆಯಿಂದ ಕ್ಷೇತ್ರಕ್ಕೆ ಅಪಾಯ ಎದುರಾಗಿದೆ ಎಂದಾದರೆ ಮುಂದೆ ಮತ್ತಷ್ಟು ಅಪಾಯ ನಿಶ್ಚಿತ. ಆದ್ದರಿಂದ ನಾವೂ ಕೂಡಾ ರಾಜ್ಯದ ಗಣಿ ಸಚಿವರಿಗೆ ಮನವಿ ಮಾಡಿಕೊಂಡಿದ್ದೇವೆ. ಅವರಿಂದ ಒಳ್ಳೆಯ ಭರವಸೆ ದೊರೆತಿದೆ. ಅಂತೂ ಈ ಹೋರಾಟವನ್ನು ಯಶಸ್ವಿಯಾಗಿ ಮುಗಿಸಲೇಬೇಕು. ಕ್ಷೇತ್ರದ ಆರಾಧ್ಯ ಶಕ್ತಿಗಳು ಈ ಸಂಬಂಧ ಎಲ್ಲರಿಗೂ ಸನ್ಮತಿಯನ್ನು ನೀಡಲಿ. ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಶನಿವಾರ ಶ್ರೀ ಕಾರಿಂಜೇಶ್ವರಕ್ಕೆ ಭೇಟಿ ನೀಡಿ ಪಾರ್ವತೀ ಪರಮೇಶ್ವರ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಬಳಿಕ, ಆಸುಪಾಸಿನ ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳು ಮತ್ತು ಅದರಿಂದಾಗಿ ದೇವಳದ ಬೆಟ್ಟ, ಅನ್ನಛತ್ರ ಮತ್ತಿತರ ಕಟ್ಟಗಳಿಗೆ ಹಾನಿಯಾಗಿರುವುದನ್ನು ವೀಕ್ಷಿಸಿದ ಬಳಿಕ ನೆರೆದಿದ್ದ ಹಿಂದೂ ಜಾಗರಣ ವೇದಿಕೆಯ ನೂರಾರು ಕಾರ್ಯಕರ್ತರು, ದೇವಳದ ಆಡಳಿತ ಮಂಡಳಿ ಸದಸ್ಯರು, ಅರ್ಚಕರು ಮತ್ತು ಭಕ್ತರನ್ನುದ್ದೇಶಿಸಿ ಮಾತಾಡಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق