ಮಂಗಳೂರು: "ಮನೆ ಮನೆಗಳಿಗೆ ಮನ ಮನಗಳಿಗೆ ಸ್ವಾಮಿ ವಿವೇಕಾನಂದರ ಚಿಂತನೆಗಳು ಪಸರಿಸಬೇಕು. ಮುಂದಿನ ಹಲವಾರು ವರ್ಷಗಳ ವರೆಗೆ ನಮ್ಮ ಪ್ರತಿಯೊಬ್ಬರ ಬದುಕಿನ ಸಂವಿಧಾನ ಅಗಬಲ್ಲದ್ದು ಸ್ವಾಮಿ ವಿವೇಕಾನಂದರ ಚಿಂತನೆಗಳು. ಅವರ ಆದರ್ಶಗಳು ಪ್ರತಿಯೊಬ್ಬ ಮನುಷ್ಯನನ್ನು ಮಾನವತ್ವದಿಂದ ದೈವತ್ವದೆಡೆಗೆ ಒಯ್ಯಬಲ್ಲದ್ದು" ಎಂದು ಕೇಂದ್ರೀಯ ತನಿಖಾ ಸಂಸ್ಥೆಯ ಹಿರಿಯ ಎಸ್.ಪಿ., ಐ ಪಿ ಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್ ಹೇಳಿದರು.
ರಾಮಕೃಷ್ಣ ಮಠ ಮಂಗಳೂರು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆನ್ ಲೈನ್ ಮೂಲಕ ನಡೆದ ರಾಷ್ಟೀಯ ಯುವ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
“ನಮ್ಮ ದೇಶದ ಭವಿಷ್ಯ ಯುವ ಸಮುದಾಯದ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯವನ್ನು ರೂಪುಗೊಳಿಸಬೇಕಾಗಿದೆ. ವ್ಯಕ್ತಿತ್ವ ವಿಕಸನದ ಮೂಲಕ ರಾಷ್ಟ್ರನಿರ್ಮಾಣ ಎಂಬುದು ಬಹಳ ಮುಖ್ಯವಾದದ್ದು, ಇದನ್ನು ಸಾಧಿಸಲು ಸ್ವಾಮಿ ವಿವೇಕಾನಂದರ ವಿಚಾರಗಳು ಅತ್ಯಗತ್ಯ,” ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುಬ್ರಹ್ಮಣ್ಯ ಯಡಪಡಿತ್ತಾಯ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮಂಗಳೂರು ರಾಮಕೃಷ್ಣ ಮಠದ ಅಧ್ಯಕ್ಷ ಪರಮಪೂಜ್ಯ ಸ್ವಾಮಿ ಜಿತಕಾಮಾನಂದಜಿ, "ಸ್ವಾಮಿ ವಿವೇಕಾನಂದರು ತ್ಯಾಗ ಮತ್ತು ಸೇವೆಗಳ ಸಾಕಾರ ಮೂರ್ತಿ ಅವರ ನಡೆ ನುಡಿಗಳು ಪ್ರತಿಯೊಬ್ಬರಿಗೂ ಆದರ್ಶವಾಗಬೇಕು" ಎಂದರು.
ಕಾರ್ಯಕ್ರಮದಲ್ಲಿ ಪೂಜ್ಯ ಸ್ವಾಮಿ ಏಕಗಮ್ಯನಂದಜಿ, ವಿಧಾನ ಪರಿಷತ್ನ ಮಾಜಿ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ರಾಷ್ಟೀಯ ಸೇವಾ ಯೋಜನೆಯಲ್ಲಿ ರಾಷ್ಟ್ರ ಮಟ್ಟದ ಅತ್ಯುತ್ತಮ ಸ್ವಯಂಸೇವಕ ಪ್ರಶಸ್ತಿ ಪಡೆದ ಕುಮಾರಿ ಬಿಂದ್ಯಾ ಎಲ್. ಶೆಟ್ಟಿ ಉಪಸ್ಥಿತರಿದ್ದರು. ಮಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ. ಕೆ., ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಯಕ ಡಾ. ಶ್ರೀಪತಿ ಕಲ್ಲೂರಾಯ, ಪುತ್ತೂರಿನ ವಿವೇಕಾನಂದ ಪದವಿ ಪೂರ್ವ ವಿದ್ಯಾಲಯದ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್, ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು ವಿಶ್ವವಿದ್ಯಾಲಯ, ನಿಟ್ಟೆ (ಪರಿಗಣಿಸಲ್ಪಟ್ಟಿರುವ) ವಿಶ್ವವಿದ್ಯಾಲಯ, ಆದಿಚುಂಚನಗಿರಿ ವಿಶ್ವವಿದ್ಯಾಲಯ, ಮೈಸೂರು ವಿಶ್ವವಿದ್ಯಾಲಯ, ಶ್ರೀನಿವಾಸ ವಿಶ್ವವಿದ್ಯಾಲಯ, ಸರಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು, ಕುಂದಾಪುರದ ಭಂಡಾರ್ಕರ್ಸ್ ಕಾಲೇಜುಗಳು ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಹಾಗೂ ಆಸಕ್ತ ಸಾರ್ವಜನಿಕರು ಈ ಆನ್ಲೈನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳಾದ ವಿವೇಕಾನಂದ ಪದವಿ ಪೂರ್ವ ವಿದ್ಯಾಲಯ, ವಿವೇಕಾನಂದ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರ, ಯಶಸ್ ಘಟಕ, ವಿವೇಕಾನಂದ ವಸತಿನಿಲಯದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕಾರ್ಯಕ್ರಮವನ್ನು ತಮ್ಮ ಸಂಸ್ಥೆಗಳಲ್ಲಿ ವೀಕ್ಷಿಸಿದರು.
ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಮಂಗಳೂರು ವಿಶ್ವವಿದ್ಯಾಲಯದ ಡಾ. ಚಂದ್ರು ಹೆಗ್ಡೆ ವಂದಿಸಿದರು. ಅಭಿಷೇಕ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق