ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಮಡಪ್ಪಾಡಿಗೆ ಸಂಪರ್ಕ ರಸ್ತೆ ಅಭಿವೃದ್ಧಿಗೆ ಶಂಕುಸ್ಥಾಪನೆ
ಸುಳ್ಯ: ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದೇಶದ ಗ್ರಾಮೀಣ ಭಾಗದ ಅಭಿವೃದ್ಧಿ ಇನ್ನೂ ಆಗಿಲ್ಲ. ಗ್ರಾಮಗಳ ಅಭಿವೃದ್ಧಿ ಆಗಬೇಕು ಎಂಬ ಹಿನ್ನಲೆಯಲ್ಲಿ ಗ್ರಾಮೀಣ ಭಾಗದ ಅಭಿವೃದ್ಧಿಗೆ ಸರಕಾರವು ಇಚ್ಛಾಶಕ್ತಿಯಿಂದ ಕೆಲಸ ಮಾಡುತಿದೆ. ರಸ್ತೆ, ಸೇತುವೆಗಳು ಸೇರಿದಂತೆ ಗ್ರಾಮೀಣ ಭಾಗದ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಪೂರ್ತಿ ಮಾಡಲಾಗುವುದು ಎಂದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ-ಮಡಪ್ಪಾಡಿ ರಸ್ತೆಯ ಅಭಿವೃದ್ಧಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಪತ್ರಕರ್ತರು ಮಡಪ್ಪಾಡಿಯಲ್ಲಿ ವಾಸ್ತವ್ಯ ಮಾಡಿದ ಸಂದರ್ಭದಲ್ಲಿ ಸೇವಾಜೆ-ಮಡಪ್ಪಾಡಿ ರಸ್ತೆ ಅಭಿವೃದ್ಧಿ ಮಾಡಬೇಕೆಂಬ ಬೇಡಿಕೆ ವ್ಯಕ್ತವಾಗಿತ್ತು. ಈ ಹಿನ್ನಲೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮನವಿಯ ಮೇರೆಗೆ ರಾಜ್ಯ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ರಸ್ತೆ ಅಭಿವೃದ್ಧಿಗೆ 1.5 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು.
ಇದರ ಶಂಕುಸ್ಥಾಪನೆ ಜ.11ರಂದು ನಡೆಯಿತು. ರಸ್ತೆಯ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಸೂಚಿಸಿದ ಅಂಗಾರರು. ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ ಅಟಲ್ ಬಿಹಾರಿ ವಾಜಪೇಯಿ ಅವರು ಗ್ರಾಮ ಸಡಕ್ ಯೋಜನೆಯನ್ನು ಜಾರಿಗೆ ತಂದರು. ಆ ಬಳಿಕ ಗ್ರಾಮೀಣ ಭಾಗಕ್ಕೂ ಉತ್ತಮ ರಸ್ತೆಗಳನ್ನು ಕಾಣುವಂತಾಯಿತು. ಈ ರೀತಿಯ ಗುಣಮಟ್ಟ ಕಾಯ್ದುಕೊಳ್ಳುವ ಅಗತ್ಯವಿದೆ. ರಸ್ತೆ ನಿರ್ಮಾಣಕ್ಕೆ ಅಂದಾಜು ಪಟ್ಟಿ ತಯಾರಿಸವ ಸಂದರ್ಭದಲ್ಲಿ ಅತ್ಯುತ್ತಮ ಗುಣಮಟ್ಟದ ರಸ್ತೆಗಳಿಗೆ ಆದ್ಯತೆ ನೀಡಬೇಕು ಎಂದು ಅವರು ಇಂಜಿನಿಯರ್‌ಗಳಿಗೆ ಸೂಚಿಸಿದರು.
ಸೇವಾಜೆ-ಮಡಪ್ಪಾಡಿ-ಗುತ್ತಿಗಾರು ರಸ್ತೆಯನ್ನು ಲೋಕೋಪಯೋಗಿ ರಸ್ತೆಯಾಗಿ ಮೇಲ್ದರ್ಜೆಗೇರಿದ್ದು ಮುಂದೆ ರಸ್ತೆಯು ಅಭಿವೃದ್ಧಿಯಾಗಲಿದೆ. ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿ ಜನರ ಬಹುಮುಖ್ಯ ಬೇಡಿಕೆಯನ್ನು ಮುಂದಿರಿಸಿದಾಗ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಪೂರಕವಾಗಿ ಸ್ಪಂದಿಸಿದ್ದಾರೆ. ಅವರು ಘೋಷಣೆ ಮಾಡಿದ ಎರಡು ಕೋಟಿಯಲ್ಲಿ ಒಂದೂವರೆ ಕೋಟಿ ಅನುದಾನ ಬಿಡುಗಡೆಯಾಗಿದ್ದು ಉಳಿದ 50 ಲಕ್ಷವನ್ನು ತರಿಸುವ ಪ್ರಯತ್ನ ನಡೆಸಲಾಗುವುದು ಎಂದು ಅಂಗಾರರು ಹೇಳಿದರು.
ಪತ್ರಕರ್ತರು ಅಭಿವೃದ್ಧಿಯ ಕುರಿತು ಜಾಗೃತಿ ಮೂಡಿಸುವುದರ ಜೊತೆಗೆ ಆಗಿರುವ ಅಭಿವೃದ್ಧಿಯ ಬಗ್ಗೆ ಜನರಿಗೆ ಮಾಹಿತಿ ನೀಡುವ ಮತ್ತು ಅದನ್ನು ಫೋಕಸ್ ಮಾಡುವ ಅಗತ್ಯವಿದೆ. ಆಗ ಇನ್ನಷ್ಟು ಕೆಲಸ ಮಾಡಲು ಪ್ರೇರಣೆಯಾಗುತ್ತದೆ. 1994ರಿಂದ ಸುಳ್ಯ ಕ್ಷೇತ್ರದಲ್ಲಿ140 ಸೇತುವೆಗಳು ನಿರ್ಮಾಣವಾಗಿದೆ. ಹಲವು ರಸ್ತೆಗಳು ಅಭಿವೃದ್ಧಿಯಾಗಿದೆ ಎಂದು ಎಂದರು. ಅಭಿವೃದ್ಧಿ ಆಗುವ ಸಂದರ್ಭದಲ್ಲಿ ಜನರ ಸಹಕಾರ ಅತೀ ಅಗತ್ಯ. ಅಭಿವೃದ್ಧಿಗೆ ತಡೆ ಮಾಡುವುದು, ರಸ್ತೆ ಬದಿ, ಚರಂಡಿಯನ್ನೂ ಒತ್ತುವರಿ ಮಾಡುವುದು ಅಭಿವೃದ್ಧಿಗೆ ಹಿನ್ನಡೆ ಎಂದು ಬೊಟ್ಟು ಮಾಡಿದರು.
ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮಾತನಾಡಿ ಗ್ರಾಮೀಣ ಭಾಗವಾದ ಮಡಪ್ಪಾಡಿಯಲ್ಲಿ ಪತ್ರಕರ್ತರ ಹೊಸ ಆಶಯವಾದ ಗ್ರಾಮ ವಾಸ್ತವ್ಯಕ್ಕೆ ಗ್ರಾಮದ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜನಪ್ರತಿನಿಧಿಗಳು ಹಾಗೂ ಸರಕಾರ ಪೂರಕವಾಗಿ ಸ್ಪಂದಿಸಿದೆ. ಮನವಿ ಸಲ್ಲಿಸಿದ ಕ್ಷಣದಲ್ಲೇ ಸ್ಪಂದಿಸಿದ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಎರಡು ಕೋಟಿ ಅನುದಾನ ಘೋಷಣೆ ಮಾಡಿದದ್ದರು. ಒಂದೂವರೆ ಕೋಟಿ ಬಿಡುಗಡೆ ಮಾಡಿದ್ದು ಉಳಿದ 50 ಲಕ್ಷವನ್ನು ನೀಡುವ ಭರವಸೆ ನೀಡಿದ್ದಾರೆ ಎಂದರು.
ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣವಾಗುವ ಮೂಲಕ ಜನರಿಗೆ ಸಹಕಾರಿಯಾಗಲಿ ಎಂದು ಹೇಳಿದರು. ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಮಡಪ್ಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಿತ್ರದೇವ ಮಡಪ್ಪಾಡಿ, ಮರ್ಕಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪವಿತ್ರಾ ಗುಂಡಿಮಜಲು, ಉಪಾಧ್ಯಕ್ಷ ಗೋವಿಂದ ಅಳಲುಪಾರೆ, ಎಪಿಎಂಸಿ ಅಧ್ಯಕ್ಷ ವಿನಯಕುಮಾರ್ ಮುಳುಗಾಡು, ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಭವಾನಿಶಂಕರ, ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ನಂದಕುಮಾರ್, ಕರ್ನಾಟಕ ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಪುತ್ತೂರು ಯೋಜನಾ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀನಿವಾಸ ಮೂರ್ತಿ, ಕಿರಿಯ ಇಂಜಿನಿಯರ್ ಪರಮೇಶ್ವರ ನಾಯ್ಕ್, ಪ್ರಮುಖರಾದ ವೆಂಕಟ್ ವಳಲಂಬೆ, ಜಯರಾಮ ಹಾಡಿಕಲ್ಲು, ಎಂ.ಡಿ.ವಿಜಯಕುಮಾರ್, ಗಂಗಯ್ಯ ಪೂಂಬಾಡಿ, ಎನ್.ಟಿ.ಹೊನ್ನಪ್ಪ, ಶಕುಂತಲಾ ಕೇವಳ, ಸೋಮಶೇಖರ ಕೇವಳ, ವಿನೋದ್ ಪೂಂಬಾಡಿ, ಹೇಮಕುಮಾರ್ ಹಾಡಿಕಲ್ಲು, ಎಂ.ಜಿ.ಲೋಕಯ್ಯ, ಲೋಕಪ್ಪ ಗೌಡ, ಚಂದ್ರಶೇಖರ ಗೋಳ್ಯಾಡಿ, ರಾಜಕುಮಾರ ಪೂಂಬಾಡಿ, ರಂಜಿತ್, ಸುಮಂತ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಅಡ್ಕಸ್ಥಳ, ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರಾದ ಗಂಗಾಧರ ಕಲ್ಲಪಳ್ಳಿ, ಲೋಕೇಶ್ ಪೆರ್ಲಂಪಾಡಿ, ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ದಯಾನಂದ ಕೊರತ್ತೋಡಿ ಮತ್ತಿತರರು ಉಪಸ್ಥಿತರಿದ್ದರು. ವಿನಯಕುಮಾರ್ ಮುಳುಗಾಡು ಸ್ವಾಗತಿಸಿ, ಎಂ.ಡಿ.ವಿಜಯಕುಮಾರ್ ವಂದಿಸಿದರು.
ಅಡಿಕೆ ಹಾರ ಹಾಕಿ ಸ್ವಾಗತ: ಮಡಪ್ಪಾಡಿಗೆ ಆಗಮಿಸಿದ ಸಚಿವ ಎಸ್.ಅಂಗಾರ ಅವರನ್ನು ಅಡಿಕೆಯಿಂದ ತಯಾರಿಸಿದ ಹಾರ ಹಾಕಿ ಸ್ವಾಗತಿಸಲಾಯಿತು. ಒಣಗಿದ ಅಡಿಕೆಯನ್ನು ಪೋಣಿಸಿ ತಯಾರಿಸಿದ ಮಾಲೆಯನ್ನು ಎಂ.ಡಿ.ವಿಜಯಕುಮಾರ್ ಅವರು ಸಚಿವರಿಗೆ ಹಾಕಿ ಸ್ವಾಗತಿಸಿದರು. 'ಅಡಿಕೆಗೆ ಒಳ್ಳೆಯ ರೇಟ್ ಇದೆ.. ಮಾಲೆಗೂ ತೂಕ ಜಾಸ್ತಿ ಇದೆ ಎಂದು ಅಂಗಾರರು ಹಾಸ್ಯ ಚಟಾಕಿ ಹಾರಿಸಿದಾಗ ಸ್ಥಳದಲ್ಲಿ ನಗುವಿನ ಅಲೆ ತೇಲಾಡಿತು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق