ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ಸುಮಾರು ಅರ್ಧ ಶತಮಾನಕ್ಕೂ ಹೆಚ್ಚು ಕಾಲ ವೈದ್ಯಕೀಯ ವೃತ್ತಿಯನ್ನು ನಡೆಸುತ್ತಾ ಬಂದಿದ್ದ ವೈದ್ಯ ವಿಶಾರದ ಡಾ. ಟಿ.ಎನ್ ತುಳಪುಳೆ (ತ್ರಯಂಬಕ ನಾರಾಯಣ ತುಳಪುಳೆ) ಅವರು ದೀರ್ಘಕಾಲದ ಅನಾರೋಗ್ಯದಿಂದ ಜ.17ರಂದು ನಿಧನರಾದರು. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಸರಳ, ಸಜ್ಜನಿಕೆಯ ಆಯುರ್ವೇದ ವೈದ್ಯರಾಗಿದ್ದ ಅವರು ಬೆಳ್ತಂಗಡಿ ತಾಲೂಕಿನಲ್ಲಿಯೇ ಬಹಳ ಜನಪ್ರಿಯರಾಗಿದ್ದರು. ತಮ್ಮಲ್ಲಿ ಔಷಧಿಗಾಗಿ ಬರುವ ರೋಗಿಗಳಿಗೆ ಬರಿಯ ಔಷಧ ನೀಡುವುದಷ್ಟೇ ಅವರ ಕೆಲಸವಾಗಿರಲಿಲ್ಲ. ಔಷಧಕ್ಕೂ ಮೀರಿದ ಸಾಂತ್ವನದ ನುಡಿಗಳು ಎಷ್ಟೋ ಮಂದಿ ರೋಗಿಗಳ ಕಾಯಿಲೆಗಳನ್ನು ಅರ್ಧ ಗುಣಪಡಿಸುತ್ತಿದ್ದ ಅನುಭವ ಹಲವರದ್ದಾಗಿದೆ.
ಐದು ಭಾಷೆಗಳನ್ನು ಬಲ್ಲವರಾಗಿದ್ದ ಅವರು, ಹವ್ಯಾಸಿ ಹರಿಕಥೆ ದಾಸರಾಗಿಯೂ ಹೆಸರು ಪಡೆದಿದ್ದರು. ಸಾಹಿತಿಯಾಗಿ ಹಲವಾರು ಕನ್ನಡ ಕೃತಿಗಳನ್ನು ರಚಿಸಿರುವ ಅವರು ತಮ್ಮ ಮನೆಯಲ್ಲೇ ಅತ್ಯುತ್ತಮ ಗ್ರಂಥಾಲಯವನ್ನು ರೂಪಿಸಿದ್ದಾರೆ. ಕೆಲವು ವರ್ಷಗಳ ಹಿಂದೆ ವೇಣೂರಿನಲ್ಲಿ ನಡೆದಿದ್ದ ಬೆಳ್ತಂಗಡಿ ತಾಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಅವರು ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿಕೊಟ್ಟಿದ್ದರು.
ಡಾ. ಟಿ.,ಎನ್. ತುಳಪುಳೆ ಅವರ ನಿಧನಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ ತೀವ್ರ ಸಂತಾಪ ವ್ಯಕ್ತಪಡಿಸಿದೆ. ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಎಂ.ಪಿ ಶ್ರೀನಾಥ್ ಅವರು ಅಗಲಿದ ವೈದ್ಯರಿಗೆ ಶ್ರದ್ಧಾಂಜಲಿ ಸಭೆಯನ್ನು ಪರಿಷತ್ ವತಿಯಿಂದ ಆಯೋಜಿಸಿದ್ದರು.
ನಿವೃತ್ತ ಪ್ರಾಧ್ಯಾಪಕರಾದ ಪ್ರೊ. ಎನ್.ಜಿ ಪಟವರ್ಧನ್, ನಿವೃತ್ತ ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಕುಳಮರ್ವ ಸೇರಿದಂತೆ ಹಲವು ಗಣ್ಯರು ನುಡಿನಮನ ಸಲ್ಲಿಸಿದರು.
ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
إرسال تعليق