ಉಪಯುಕ್ತ ಲೋಕಲ್- ನಿಮ್ಮೂರಿನ ನಿಮ್ಮದೇ ಸುದ್ದಿಗಳ ಲೋಕಲ್ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಾಣಿ ಸಮೀಪ ಬಾನೊಟ್ಟಿನಲ್ಲಿ ಪ್ರಾಚೀನ ಶಿವ ದೇವಾಲಯದ ಅವಶೇಷ ಪತ್ತೆ

ಮಾಣಿ ಸಮೀಪ ಬಾನೊಟ್ಟಿನಲ್ಲಿ ಪ್ರಾಚೀನ ಶಿವ ದೇವಾಲಯದ ಅವಶೇಷ ಪತ್ತೆ


ಫೊಟೋ/ವರದಿ: ಡಾ. ವಸಂತಕುಮಾರ ಪೆರ್ಲ

ಬಂಟ್ವಾಳ ತಾಲೂಕಿನ ಮಾಣಿಯಿಂದ ಪಶ್ಚಿಮಕ್ಕೆ ಒಂದು ಕಿ.ಮೀ. ದೂರದ ಬಾನೊಟ್ಟು ಎಂಬ ಹಳ್ಳಿಯಲ್ಲಿ ರೈಲ್ವೆ ಹಳಿಯ ಪಕ್ಕ ಸುಮಾರು 800 ವರ್ಷ ಹಳೆಯದೆಂದು ನಂಬಲಾಗಿರುವ ಶಿವ ದೇವಸ್ಥಾನದ ಅವಶೇಷಗಳು ಮಳೆ ಗಾಳಿ ಮುಂತಾದ ಪ್ರಾಕೃತಿಕ ಕಾರಣದಿಂದ ರೈಲ್ವೆ ಹಳಿಗಾಗಿ ಗುಡ್ಡೆ ಹಾಕಲಾಗಿರುವ ಮಣ್ಣಿನೆಡೆಯಿಂದ ಒಂದೊಂದಾಗಿ ಗೋಚರಿಸತೊಡಗಿವೆ. 


ಮುಖ್ಯವಾಗಿ ಪಾಣಿಪೀಠ, ಆನೆ ಪಡಿಕಲ್ಲು ಮತ್ತು ತೀರ್ಥಬಾವಿ ಕಂಡು ಬರುತ್ತಿದೆ. ದೇವಸ್ಥಾನದ ಇತರೇ ಕಟ್ಟಡ ಅವಶೇಷಗಳು, ಕಲ್ಲುಗಳು ಚೆಲ್ಲಾಪಿಲ್ಲಿಯಾಗಿ ಅಲ್ಲಲ್ಲಿ ಮಣ್ಣಿನ ಇಳಿಜಾರಾದ ಪ್ರದೇಶದಲ್ಲಿ ಕಾಡು ಮರಗಿಡ ಬಳ್ಳಿಬೂರುಗಳ ಮಧ್ಯೆ ಕಂಡು ಬರುತ್ತಿದೆ.


ಅವಶೇಷಗಳ ಆಧಾರದಿಂದ ಮತ್ತು ಹಳ್ಳಿಯ ಹಳಬರ ನೆನಪಿನ ಅನುಸಾರ ಇದು ಉಮಾಮಹೇಶ್ವರ ಸನ್ನಿಧಾನವೆಂದೂ, ಊರ ದೇವಸ್ಥಾನವಾಗಿ ಸ್ಥಳೀಯ ಕೊಬ್ರಿಮಠ ಬನ್ನಿಂತಾಯರು, ನೂಜಿಬೈಲು ಬ್ರಾಹ್ಮಣ ಮನೆತನದವರು ಹಾಗೂ ಚೂರ್ಯ ಮನೆತನದವರು ತಮ್ಮ ವಿಶೇಷ ಕೊಡುಗೆ ಸಹಕಾರಗಳಿಂದ ನಡೆಸಿಕೊಂಡು ಬರುತ್ತಿದ್ದರೆಂದೂ ತಿಳಿದು ಬರುತ್ತದೆ.


1965 - 66 ರ ಕಾಲಕ್ಕೆ ಮಂಗಳೂರು - ಹಾಸನ ರೈಲು ಮಾರ್ಗ ನಿರ್ಮಾಣದ ಸಂದರ್ಭದಲ್ಲಿ ಈ ದೇವಸ್ಥಾನ ಮಣ್ಣಿನಡಿಯಲ್ಲಿ ಹೂತು ಕಣ್ಮರೆಯಾಯಿತು. ದೇವಸ್ಥಾನಕ್ಕೆ ಬದಲಿ ವ್ಯವಸ್ಥೆ ಆಗಲಿಲ್ಲ. ಶಿವಲಿಂಗವನ್ನು ಅಲ್ಲೇ ತೀರ್ಥಬಾವಿಗೆ ಹಾಕಲಾಯಿತೆಂದೂ ಮೊಗ ಮತ್ತಿನ್ನಿತರ ಬೆಲೆಬಾಳುವ ವಸ್ತುಗಳನ್ನು ಕೊಂಡೊಯ್ಯಲಾಯಿತೆಂದೂ ಹೇಳಲಾಗುತ್ತಿದೆ.

ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ 


ತೀರ್ಥಬಾವಿಗೆ ಒಳಭಾಗದಿಂದ ಕಲ್ಲುಗಳನ್ನು ಜೋಡಿಸಲಾಗಿದ್ದು ಬೇಸಿಗೆಯಲ್ಲಿ ಈಗಲೂ ನೀರು ತುಂಬಿಕೊಂಡಿರುವುದು ವಿಶೇಷವಾಗಿದೆ.


ಬಾನೊಟ್ಟು (ಬಾನೊದ ಬೊಟ್ಟು) ಎಂಬ ಈ ಸ್ಥಳವು ಪ್ರಕೃತಿ ರಮಣೀಯವಾದ ಸ್ಥಳದಲ್ಲಿದೆ. ಹಿನ್ನೆಲೆಯಲ್ಲಿ ಎತ್ತರವಾದ ಮತ್ತು ಕಾಡಿನಿಂದ ಆವೃತವಾಗಿರುವ ಸುಳ್ಳಮಲೆ ಬೆಟ್ಟಸಾಲು, ಮುನ್ನೆಲೆಯಲ್ಲಿ ವಿಶಾಲವಾದ ಸಮೃದ್ಧ ಬಯಲು ಪ್ರದೇಶ ಕಂಗೊಳಿಸುತ್ತಿದೆ. ಎತ್ತರದ ಪ್ರದೇಶದಲ್ಲಿ ಸ್ಥಿತನಾಗಿರುವ ಉಮಾಮಹೇಶ್ವರ ಮುಂದಿನ ವಿಶಾಲ ಬಯಲು ಪ್ರದೇಶವನ್ನು ವೀಕ್ಷಿಸುತ್ತಿರುವಂತೆ ಕಾಣುತ್ತದೆ. ಬಯಲಿನ ಗದ್ದೆ ಸಾಲಿನಲ್ಲಿ ಪೂಕರೆ ಕಂಬಳ ನಡೆಯುತ್ತಿತ್ತು ಎನ್ನುತ್ತಾರೆ ಊರವರು. ಇವತ್ತು ಗದ್ದೆಬಯಲಿನ ನಡುವೆ ಅಡಿಕೆ ತೋಟ ಎದ್ದು ನಿಂತಿದೆ.


'ಮಾಣಿ' ಎಂಬ ಹೆಸರೇ ಪೂಮಾಣಿ ಕಿನ್ನಿಮಾಣಿ ಎಂಬ ದೈವಗಳನ್ನು ಉಲ್ಲೇಖಿಸುತ್ತಿದ್ದು ದೈವಗಳ ನೆಲೆಯನ್ನು ಸಾರಿ ಹೇಳುತ್ತದೆ. ವರ್ಷಾವಧಿ ನೇಮ ನಡಾವಳಿಗಳ ಸಂದರ್ಭದಲ್ಲಿ ಗ್ರಾಮದ ಉಳ್ಳಾಲ್ತಿ ಸೇರಿದಂತೆ ಎಲ್ಲ ದೈವಗಳೂ ಇಲ್ಲಿನ ಗಣಾಧ್ಯಕ್ಷ ಶಿವನನ್ನು ಪ್ರಾರ್ಥಿಸಿಕೊಂಡ ಬಳಿಕವೇ ನೇಮ ನಡೆಯುತ್ತಿತ್ತು ಎಂದು ಊರವರು ನೆನಪಿಸಿಕೊಳ್ಳುತ್ತಾರೆ.


ಪ್ರಸ್ತುತ ಇಲ್ಲಿ ಶಿವ ಆತಂತ್ರನಾಗಿ ಗಣಗಳಿಗೆ ಗಣಾಧ್ಯಕ್ಷನೇ ಇಲ್ಲವಾದ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ತೊಂದರೆ ತಾಪತ್ರಯಗಳಿಗೆ ದೇವಸ್ಥಾನ ನಾಶವಾಗಿರುವುದು ಕಾರಣವೆಂದು ಭಾವಿಸಿರುವ ಊರವರು ಆಸುಪಾಸಿನ ಅಪಘಾತ ಹಾಗೂ ಸಾವುನೋವುಗಳನ್ನು ಅದಕ್ಕೆ ಜೋಡಿಸಿಕೊಂಡು ತಮಗೆ ಏಳಿಗೆಯೂ ಇಲ್ಲವಾಗಿದೆ ಎಂದು ಮಾತಾಡಿಕೊಳ್ಳತೊಡಗಿದ್ದಾರೆ. 


ಊರ ಪ್ರಮುಖರು ಕೆಲವರು ಒಟ್ಟಾಗಿ ಜನಜಾಗೃತಿಯ ಕೆಲಸಕ್ಕೆ ಕೈಹಾಕಿದ್ದಾರೆ. ಜನರು ಅವಶೇಷ ಪತ್ತೆಯಾದ ಜಾಗಕ್ಕೆ ಈಗ ಭೇಟಿ ನೀಡಲು ತೊಡಗಿದ್ದಾರೆ.


ರಾಜಕೀಯ ನೇತಾರರು, ಆಡಳಿತಗಾರರು, ಗಣ್ಯರು, ಪ್ರಮುಖರು, ಊರ ಪರವೂರ ಕೊಡುಗೈ ದಾನಿಗಳು ಒಟ್ಟು ಸೇರಿ ಬದಲಿ ಜಾಗದಲ್ಲಿ ಉಮಾಮಹೇಶ್ವರನನ್ನು ಪ್ರತಿಷ್ಠಾಪಿಸಿ ನಿತ್ಯಪೂಜೆಗೆ ಅನುವು ಮಾಡಿ ಕೊಡಲಿ ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.


ಉಪಯುಕ್ತ ನ್ಯೂಸ್ ಕುಟುಂಬ ಸೇರಲು ಇಲ್ಲಿ ಕ್ಲಿಕ್ಕಿಸಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post