ಮಂಗಳೂರು: ದುಬೈ ಮೂಲದ ಖ್ಯಾತ ಉದ್ಯಮಿ, ಕೊಣಾಜೆ ಸಮೀಪದ ನಡುಪದವು ಪಿ.ಎ ಇಂಜಿನಿಯರಿಂಗ್ ಕಾಲೇಜಿನ ಸ್ಥಾಪಕ, ಮಲಬಾರ್ ಗೋಲ್ಡ್ ನ ಉಪಾಧ್ಯಕ್ಷ ಪಿ.ಎ ಇಬ್ರಾಹಿಂ ಕೇರಳದ ಕಲ್ಲಿಕೋಟೆಯಲ್ಲಿ ಇಂದು ಸಂಜೆ ನಿಧನರಾದರು.
ಖ್ಯಾತ ಕೈಗಾರಿಕೋದ್ಯಮಿ ಹಾಗೂ ಇಂಡಸ್ ಮೋಟಾರ್ಸ್ ಸ್ಥಾಪಕ ಆಗಿದ್ದ ಪಿ.ಎ ಇಬ್ರಾಹಿಂ ಅವರು ವಿಚಾರಶೀಲ ವ್ಯಕ್ತಿತ್ವದವರಾಗಿದ್ದರು. ಭಾರತೀಯ ಮೂಲದವರಾದ ಇವರು ತಮ್ಮ ಜೀವನದ ಬಹು ಕಾಲವನ್ನು ದುಬೈನಲ್ಲಿಯೇ ಕಳೆದರು. ಸೆಂಚುರಿ ಟೂರ್ಸ್ ಅ್ಯಂಡ್ ಟ್ರಾವೆಲ್ಸ್ ಮತ್ತು ಫೇಸ್ ಗ್ರೂಪ್ ನ ಅಧ್ಯಕ್ಷರಾಗಿದ್ದರು. ತಮ್ಮನ್ನು ತಾವು ಅನೇಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸಾಧನೆಯ ಪಥವನ್ನು ಹಿಡಿದವರು ಪಿ.ಎ ಇಬ್ರಾಹಿಂ ಇವರು.
ಭಾರತದಲ್ಲಿ ಕೂಡ ಇವರು ಸಲ್ಲಿಸಿದ ಸೇವೆ ಅಪಾರ. ಶಿಕ್ಷಣಸಂಸ್ಥೆಗಳು, ಆಟೋಮೊಬೈಲ್ ಉದ್ಯಮ ಮತ್ತು ಸ್ವರ್ಣೋದ್ಯಮಗಳಲ್ಲಿ 25 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ನೀಡಿದ ಇವರು ಸಮಾಜಕ್ಕೆ ಅನೇಕ ರೀತಿಯ ಕೊಡುಗೆಯನ್ನು ನೀಡಿದ್ದಾರೆ.
1943 ರಲ್ಲಿ ಕಾಸರಗೋಡಿನ ಪಳ್ಳಿಕ್ಕರದಲ್ಲಿ ಜನಿಸಿದ ಇವರು 1966 ರಲ್ಲಿ ಗಲ್ಫ್ ದೇಶಕ್ಕೆ ವಲಸೆ ಹೋದರು. ಅವರು ಮುಸ್ಲಿಂ ಲೀಗ್ ಪ್ರಕಟಿಸುತ್ತಿದ್ದ ' ಚಂದ್ರಿಕಾ' ದೈನಿಕದ ನಿರ್ದೇಶಕರಾಗಿದ್ದರು.
ಹಲವಾರು ಉದ್ಯಮಗಳನ್ನು ನಿರ್ವಹಿಸುತ್ತಾ ಕ್ರಿಯಾಶೀಲರಾಗಿ ಜೀವನ ನಡೆಸುತ್ತಿದ್ದ ಇಬ್ರಾಹಿಂ ಅವರು ಡಿಸೆಂಬರ್ 11 ರಂದು ಪಾರ್ಶ್ವವಾಯುವಿಗೆ ತುತ್ತಾದರು. ಸೆರೆಬ್ರಲ್ ಹೆಮರೇಜ್ ನಿಂದಾಗಿ ಅವರು ಕೋಝಿಕ್ಕೋಡ್ ಮಿಮ್ಸ್ ನಲ್ಲಿ ಚಿಕಿತ್ಸೆ ನಡೆಯುತ್ತಿದ್ದು ಅದು ಫಲಕಾರಿಯಾಗದೆ ಇಂದು ನಿಧನರಾಗಿದ್ದಾರೆ.
ಡಾ. ಹಾಜಿ ಅವರ ಪಾರ್ಥೀವ ಶರೀರವನ್ನು ಅವರೇ ಸ್ಥಾಪಿಸಿರುವ ಮಂಜೇರಿಯ ಅನಾಥಾಶ್ರಮಕ್ಕೆ ತಂದು ರಾತ್ರಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
Post a Comment