ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ
ಬದಿಯಡ್ಕ: ಉಸಿರುಹೋದ ಮೇಲೆ ಹೆಸರು ಉಳಿಯಬೇಕಾದರೆ ಸಮಾಜಮುಖೀ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಶಿಕ್ಷಣ ಇರುವುದು ಜೀವನದ ದಾರಿಗೆ, ಸಂಸ್ಕಾರ ಇರುವುದು ಬದುಕಿನ ದಾರಿಗೆ ಎಂದು ಮಾಣಿಲ ಶ್ರೀಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನವನ್ನು ನೀಡಿದರು.
ಬಡಗು ಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ವತಿಯಿಂದ ಶ್ರೀ ಕ್ಷೇತ್ರದಲ್ಲಿ ಭಾನುವಾರ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಪಾಲ್ಗೊಂಡು ಮಾತನಾಡುತ್ತಾ ಗ್ರಾಮ ದೇವಸ್ಥಾನವು ಜೀರ್ಣೋದ್ಧಾರಗೊಳ್ಳದೆ ಗ್ರಾಮಕ್ಕೆ ಮೌಢ್ಯ ಆವರಿಸಿದೆ. ಪರಿವರ್ತನೆಯು ಜಗದ ನಿಯಮವಾಗಿದೆ. ಈ ಲೋಕಕ್ಕೆ ಬರುವ ಸಂದರ್ಭದಲ್ಲಿ ನಾವು ಏನನ್ನೂ ತೆಗೆದುಕೊಂಡು ಬರುವುದಿಲ್ಲ ಹಾಗೆಯೇ ಇಲ್ಲಿಂದ ಪರಲೋಕಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಏನನ್ನೂ ಕೊಂಡು ಹೋಗಲು ಸಾಧ್ಯವಿಲ್ಲ ಎಂದ ಅವರು ಧಾರ್ಮಿಕ ಕ್ಷೇತ್ರಗಳ ಜೀರ್ಣೋದ್ಧಾರ ಕಾರ್ಯಗಳಲ್ಲಿ ಪಾಲ್ಗೊಳ್ಳುವುದರಿಂದ ಲಭಿಸುವ ಪುಣ್ಯವು ನಮಗೆ ಶಾಶ್ವತವಾಗಲಿದೆ ಎಂದರು.
ಕೇರಳವನ್ನು ದೇವರ ಸ್ವಂತ ನಾಡು ಎಂದು ಕರೆದರೆ ಕೇರಳದ ಈ ಮುಕುಟ ಜಿಲ್ಲೆಯ ಈ ಉಬ್ರಂಗಳ ಗ್ರಾಮವು ದೇವರ ಗ್ರಾಮವೆಂದೆನಿಸಿದೆ. ಅಸಂಖ್ಯ ದೈವಸ್ಥಾನ, ದೇವಸ್ಥಾನ, ಧಾರ್ಮಿಕ ಶ್ರದ್ಧಾಕೇಂದ್ರಗಳು ನೆಲೆಗೊಂಡ ಗ್ರಾಮದಲ್ಲಿರುವ ಈ ದೇವಸ್ಥಾನ ಜೀರ್ಣೋದ್ಧಾರಗೊಂಡರೆ ಗ್ರಾಮದಲ್ಲಿ ಸುಭಿಕ್ಷೆ ನೆಲೆಸಿ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆ ಆಗುವುದು ಎಂದರು.
ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ಡಾ.ಕಿಶೋರ್ ಕುಣಿಕುಳ್ಳಾಯ ಅಧ್ಯಕ್ಷತೆ ವಹಿಸಿದ್ದರು. ಜೀರ್ಣೋದ್ಧಾರ ಸಮಿತಿಯ ಖಜಾಂಚಿ ಈಶ್ವರ ಮಾಸ್ತರ್ ಮೈಲ್ತೊಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಅತಿಥಿಗಳಾಗಿ ಉದ್ಯಮಿ ಮಧುಸೂಧನ ಆಯರ್ ಮಂಗಳೂರು, ಹಿರಿಯರಾದ ಸಂಜೀವ ಶೆಟ್ಟಿ ಮೊಟ್ಟೆಕುಂಜ, ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣನ್ ಕಾಟುಕುಕ್ಕೆ, ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ, ಡಾ.ಶ್ರೀನಿಧಿ ಸರಳಾಯ ಬದಿಯಡ್ಕ, ಗೋಸಾಡ ಶ್ರೀ ಮಹಿಷಮರ್ಧಿನಿ ಕ್ಷೇತ್ರದ ಆಡಳಿತ ಮೊಕ್ತೇಸರ ಶ್ರೀನಿವಾಸ ಅಮ್ಮಣ್ಣಾಯ ಹಾಗೂ ಅಮೇರಿಕಾದ ಪ್ರತಿಷ್ಠಿತ ವಿಶ್ವವಿದ್ಯಾನಿಲಯ ನೀಡಲಿರುವ ಫೆಲೋಶಿಪ್‌ಗೆ ಆಯ್ಕೆಯಾದ ಜಗತ್ತಿನ ಕೇವಲ 10 ಮೇಧಾವಿಗಳಲ್ಲಿ ಒಬ್ಬರಾದ ಸರ್ವಜ್ಞ ಎಜ್ಯುಟೆಕ್ ಪ್ರೈವೇಟ್ ಲಿಮಿಟೆಡ್‌ನ ಸಿಇಒ ಶ್ರೀನಿಧಿ ಕಲ್ಲಡ್ಕ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಬೆಂಗಳೂರು ಪ್ರಾಂತ ಸಹಪ್ರಮುಖ್ ರಾಜೇಶ ಪದ್ಮಾರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಗ್ರಾಮಪಂಚಾಯಿತಿ ಸದಸ್ಯೆ ಮೀನಾಕ್ಷಿ, ವಿವಿಧ ಸಮಿತಿಯ ಪದಾಧಿಕಾರಿಗಳಾದ ವಸಂತಿ ಟೀಚರ್ ಅಗಲ್ಪಾಡಿ, ಪ್ರತಿಭಾ ರಾಜ್, ರಾಜೇಶ್ ಮಾಸ್ತರ್, ವಿಶ್ವನಾಥನ್ ಮಾವಿನಕಟ್ಟೆ, ಸುರೇಶ್ ಯು.ಸಿ., ಅಧ್ಯಾಪಕ ಚಂದ್ರಶೇಖರ ಕುರುಪ್ಪ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಹಾಗೂ ಅನೇಕ ಭಕ್ತಾದಿಗಳು ಜೀರ್ಣೋದ್ಧಾರ ಕಾರ್ಯಗಳಿಗೆ ಆರ್ಥಿಕ ಸಹಾಯವನ್ನು ಈ ಸಂದರ್ಭದಲ್ಲಿ ನೀಡಿದ್ದರು.
ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿ ಬಾಬು ಮಾಸ್ತರ್ ಅಗಲ್ಪಾಡಿ ಸ್ವಾಗತಿಸಿ, ಕೂಪನ್ ಸಮಿತಿಯ ಕಾರ್ಯದರ್ಶಿ ಉದಯಕುಮಾರ್ ಕಲ್ಲಕಟ್ಟ ವಂದಿಸಿದರು. ರಮೇಶ್ ಕೃಷ್ಣ ಪದ್ಮಾರು ನಿರೂಪಿಸಿದರು. ಬೆಳಗ್ಗೆ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ವಿಶೇಷ ರುದ್ರಾಭಿಷೇಕ, ಬಲಿವಾಡುಕೂಟ, ಸಾಮೂಹಿಕ ಪ್ರಾರ್ಥನೆ ನಡೆಯಿತು.
(ಉಪಯುಕ್ತ ನ್ಯೂಸ್)
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
Post a Comment